ಭಾರತವನ್ನ ಮತ್ತೆ ಕೆಣಕಿದ ಪಾಕ್ ಕಾಶ್ಮೀರ ಪಾಕಿಸ್ತಾನದ ರಕ್ತನಾಳವಂತೆ!
ಸೇನಾ ಮುಖ್ಯಸ್ಥನಿಂದ ಬ್ರೈನ್ ವಾಷ್!

ಸಾಗರೋತ್ತರ ಪಾಕಿಸ್ತಾನಿಯರ ಸಮಾವೇಶ ಉದ್ದೇಶಿಸಿ ಮಾತನಾಡಿದ ಜನರಲ್ ಅಸೀಮ್ ಮುನೀರ್ ಭಾರತದ ವಿರುದ್ಧ ಕೆಂಡ ಕಾರಿದ್ದಾನೆ.. ಹಿಂದೂ ಮುಸ್ಲಿಂ ನಡುವೆ ಬೆಂಕಿ ಹಚ್ಚೋ ಕೆಲಸ ಮಾಡಿದ್ದಾನೆ.
ನಮ್ಮ ಮಕ್ಕಳಿಗೆ ಹಿಂದೂ-ಮುಸ್ಲಿಂ ವ್ಯತ್ಯಾಸ ಹೇಳಿಕೊಡಬೇಕು
ನಮ್ಮ ಪೂರ್ವಜರು ನಾವು ಹಿಂದೂಗಳಿಗಿಂತ ಪ್ರತಿಯೊಂದು ವಿಷಯದಲ್ಲೂ ಭಿನ್ನರಾಗಿದ್ದೇವೆ ಎಂದು ನಂಬಿದ್ದರು. ನಮ್ಮ ಧರ್ಮ, ಆಚರಣೆ, ಸಂಪ್ರದಾಯ, ಆಲೋಚನೆ ಮತ್ತು ಗುರಿಗಳು ಬೇರೆ ಬೇರೆಯಾಗಿದ್ದರಿಂದಲೇ, ದ್ವಿರಾಷ್ಟ್ರ ಪರಿಕಲ್ಪನೆ ಮೊಳಕೆಯೊಡೆಯಿತು. ಈಗಲೂ ಪಾಕಿಸ್ತಾನವು ದ್ವಿರಾಷ್ಟ್ರ ಸಿದ್ಧಾಂತದ ತಳಹದಿಯ ಮೇಲೆ ನಿಂತಿದೆ. ಇದರ ಮಹತ್ವ ಎಂದಿಗೂ ಕಡಿಮೆಯಾಗಬಾರದು. ಇದಕ್ಕಾಗಿ ನಾವು ನಮ್ಮ ಮಕ್ಕಳಿಗೆ ಹಿಂದೂ-ಮುಸ್ಲಿಂ ನಡುವಿನ ವ್ಯತ್ಯಾಸವನ್ನು ಹೇಳಿಕೊಡಬೇಕು” ಎಂದು ಜನರಲ್ ಮುನೀರ್ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಎರಡು ರಾಷ್ಟ್ರಗಳು, ನಾವು ಒಂದೇ ರಾಷ್ಟ್ರವಲ್ಲ
ತಮ್ಮ ಮಾತನ್ನು ಮುಂದುವರಿಸುತ್ತಾ ಜನರಲ್ ಮುನೀರ್, ಭಾರತ ಮತ್ತು ಪಾಕಿಸ್ತಾನ ಎರಡು ರಾಷ್ಟ್ರಗಳು, ನಾವು ಒಂದೇ ರಾಷ್ಟ್ರವಲ್ಲ. ಅದಕ್ಕಾಗಿಯೇ ನಮ್ಮ ಪೂರ್ವಜರು ಈ ದೇಶವನ್ನು ರಚಿಸಲು ಹೋರಾಡಿದರು. ನಮ್ಮ ಪೂರ್ವಜರು ಮತ್ತು ನಾವು ಈ ದೇಶದ ನಿರ್ಮಾಣಕ್ಕೆ ಸಾಕಷ್ಟು ತ್ಯಾಗ ಮಾಡಿದ್ದಾರೆ. ಅದನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ನಮಗೆ ತಿಳಿದಿದೆ. ನನ್ನ ಪ್ರೀತಿಯ ಸಹೋದರರೇ, ಸಹೋದರಿಯರೇ, ಹೆಣ್ಣುಮಕ್ಕಳೇ ಮತ್ತು ಪುತ್ರರೇ, ದಯವಿಟ್ಟು ಪಾಕಿಸ್ತಾನದ ಈ ಕಥೆಯನ್ನು ಮರೆಯಬೇಡಿ. ಪಾಕಿಸ್ತಾನದೊಂದಿಗಿನ ಅವರ ಬಾಂಧವ್ಯ ಎಂದಿಗೂ ದುರ್ಬಲವಾಗದಂತೆ ಈ ಕಥೆಯನ್ನು ನಿಮ್ಮ ಮುಂದಿನ ಪೀಳಿಗೆಗೆ ಹೇಳಲು ಮರೆಯಬೇಡಿ ಎಂದು ಅವರು ಹೇಳಿದ್ದಾರೆ.
ಭಾರತವನ್ನು ಕೆರಳಿಸಿದ ಮುನೀರ್
ಭಯೋತ್ಪಾದಕ ಚಟುವಟಿಕೆಯಿಂದಾಗಿ ಪಾಕಿಸ್ತಾನಕ್ಕೆ ಹೂಡಿಕೆ ಸಿಗುವುದಿಲ್ಲ ಎಂದು ಹಲವರು ಭಯಪಡುತ್ತಾರೆ. ಭಯೋತ್ಪಾದಕರು ದೇಶದ ಭವಿಷ್ಯವನ್ನು ಕಸಿದುಕೊಳ್ಳಬಹುದು ಎಂದು ನೀವು ಭಾವಿಸುತ್ತೀರಾ? 1.3 ಮಿಲಿಯನ್ ಬಲಶಾಲಿ ಭಾರತೀಯ ಸೇನೆಯೇ ತನ್ನ ಎಲ್ಲಾ ಸಶಸ್ತ್ರ ಬಲದೊಂದಿಗೆ, ನಮ್ಮನ್ನು ಬೆದರಿಸಲು ಸಾಧ್ಯವಾಗದಿದ್ದರೆ, ಈ ಭಯೋತ್ಪಾದಕರು ಪಾಕಿಸ್ತಾನದ ಸಶಸ್ತ್ರ ಪಡೆಗಳನ್ನು ನಿಗ್ರಹಿಸಬಹುದು ಎಂದು ನೀವು ಭಾವಿಸುತ್ತೀರಾ? ಎಂದು ಅವರು ಪ್ರಶ್ನಿಸುವ ಮೂಲಕ ಭಾರತವನ್ನು ಕೆರಳಿಸುವ ಪ್ರಯತ್ನ ಮಾಡಿದ್ದಾರೆ.
ಬಲೂಚಿಸ್ತಾನದಲ್ಲಿ ಪ್ರತ್ಯೇಕತವಾದಿಗಳ ಮೇಲೆ ಕ್ರಮ
ಇದೇ ವೇಳೆ ಬಲೂಚಿಸ್ತಾನದಲ್ಲಿ ಪ್ರತ್ಯೇಕತವಾದಿಗಳ ಮೇಲೆ ಸಶಸ್ತ್ರ ಪಡೆಗಳು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಬಲೂಚಿಸ್ತಾನ್ ಪಾಕಿಸ್ತಾನದ ಹೆಮ್ಮೆ, ನೀವು ಅದನ್ನು ಅಷ್ಟು ಸುಲಭವಾಗಿ ಕಸಿದುಕೊಳ್ಳುತ್ತೀರಾ? ನಿಮ್ಮ 10 ತಲೆಮಾರುಗಳು ಬಂದರೂ ಅದನ್ನು ಪಡೆಯಲು ನಿಮ್ಮಿಂದ ಸಾಧ್ಯವಾಗದು. ನಾವು ಈ ಭಯೋತ್ಪಾದಕರನ್ನು ಬಹಳ ಬೇಗ ಸೋಲಿಸುತ್ತೇವೆ. ಪಾಕಿಸ್ತಾನ ಹಿಂದೆ ಬೀಳುವುದಿಲ್ಲ ಎಂದೆಲ್ಲಾ ಮುನೀರ್ ಮಾತನಾಡಿದ್ದಾನೆ
ಕಾಶ್ಮೀರ ಪಾಕಿಸ್ತಾನ ಕುತ್ತಿಗೆಯ ರಕ್ತನಾಳವಂತೆ
ಇದೇ ವೇಳೆ ಕಾಶ್ಮೀರದ ಬಗ್ಗೆ ಮಾತನಾಡಿದ ಜನರಲ್ ಮುನೀರ್, ನಮ್ಮ ನಿಲುವು ಸಂಪೂರ್ಣವಾಗಿ ಸ್ಪಷ್ಟವಾಗಿದೆ, ಅದು ನಮ್ಮ ಕುತ್ತಿಗೆಯ ರಕ್ತನಾಳವಾಗಿತ್ತು, ಅದು ನಮ್ಮ ಕುತ್ತಿಗೆಯ ರಕ್ತನಾಳವಾಗಿರುತ್ತದೆ, ನಾವು ಅದನ್ನು ಮರೆಯುವುದಿಲ್ಲ. ನಾವು ನಮ್ಮ ಕಾಶ್ಮೀರಿ ಸಹೋದರರನ್ನು ಅವರ ವೀರೋಚಿತ ಹೋರಾಟದಲ್ಲಿ ಬಿಡುವುದಿಲ್ಲ ಕೈಬಿಡುವುದಿಲ್ಲ ಎಂದು ಮುನೀರ್ ಹೇಳಿದ್ದು, ಕಾಶ್ಮೀರಿ ಪ್ರತ್ಯೇಕತವಾದಿಗಳನ್ನು ಭಾರತದತ್ತ ಎತ್ತಿಕಟ್ಟುವ ಎಲ್ಲಾ ಪ್ರಯತ್ನಗಳು ಅವನ ಮಾತಿನಲ್ಲಿ ಎದ್ದು ಕಂಡಿದೆ. ತನ್ನ ಇತಿಹಾಸದುದ್ದಕ್ಕೂ ಮುಸ್ಲಿಂ ಪ್ರಾಬಲ್ಯ ಮತ್ತು ಹಿಂದೂ ದ್ವೇಷ ನೀತಿಯನ್ನು ಅನುಸರಿಸಿದ ಪಾಕಿಸ್ತಾದಲ್ಲಿ, ಅಲ್ಪಸಂಖ್ಯಾತ ಹಿಂದೂಗಳು ಅತ್ಯಂತ ಶೋಚನೀಯ ಪರಿಸ್ಥಿತಿಯಲ್ಲಿ ಬದುಕು ನಡೆಸುತ್ತಿದ್ದಾರೆ. ಇದೀಗ ಅಲ್ಲಿನ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಅವರ ಹೇಳಿಕೆ, ಪಾಕಿಸ್ತಾನದಲ್ಲಿ ಹಿಂದೂ ದ್ವೇಷವನ್ನು ಮತ್ತಷ್ಟು ಹೆಚ್ಚಿಸಲು ಕಾರಣವಾಗಲಿ ಎಂಬ ಆತಂಕ ಎದುರಾಗಿದೆ.