‘ತಾವು ಗೆದ್ದ ಪದಕಗಳನ್ನ ಗಂಗಾ ನದಿಯಲ್ಲಿ ಬಿಡುತ್ತೇವೆ’ – ನ್ಯಾಯ ಸಿಗದೆ ಕುಸ್ತಿಪಟುಗಳ ನೋವಿನ ನಿರ್ಧಾರ!
ಭಾರತಕ್ಕೆ ಒಲಂಪಿಕ್ ಪದಕಗಳನ್ನು ತಂದುಕೊಟ್ಟ ಕುಸ್ತಿಪಟುಗಳು ತಿಂಗಳಿಂದಲೂ ಹೋರಾಟ ನಡೆಸುತ್ತಿದ್ದಾರೆ. ದೆಹಲಿಯ ಜಂತರ್ ಮಂತರ್ನಲ್ಲಿ ಹೋರಾಟ ನಡೆಸುತ್ತಿದ್ದಾರೆ. ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಇರುವ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬಿಜೆಪಿ ಸಂಸದ ಬ್ರಿಜ್ ಭೂಷಣ ಚರಣ ಸಿಂಗ್ ಬಂಧನಕ್ಕೆ ಆಗ್ರಹಿಸಿ ಹೋರಾಟ ನಡೆಯುತ್ತಿದ್ದರೂ ಕೂಡ ಕೇಂದ್ರ ಸರ್ಕಾರ ಮೌನಕ್ಕೆ ಜಾರಿದೆ.
ಇದನ್ನೂ ಓದಿ : ಚೆನ್ನೈ ಗೆದ್ದ ಖುಷಿಯಲ್ಲಿ ಜಡೇಜಾರನ್ನ ತಬ್ಬಿ ಕಣ್ಣೀರಿಟ್ಟ ಧೋನಿ – ನಿವೃತ್ತಿಗೆ ಇದು ಸರಿಯಾದ ಸಮಯ ಎಂದಿದ್ದೇಕೆ ಮಾಹಿ?
ಇದೀಗ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷನ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ನಮ್ಮ ಬೇಡಿಕೆ ಈಡೇರಿಸದೇ ಇದ್ದರೆ ಮಂಗಳವಾರ ಸಂಜೆ 6 ಗಂಟೆಗೆ ತಾವು ಗೆದ್ದ ಪದಕಗಳನ್ನು ಗಂಗಾ ನದಿಯಲ್ಲಿ ಬಿಡುವುದಾಗಿ ಹೇಳಿದ್ದಾರೆ. ಡಬ್ಲ್ಯುಎಫ್ ಮುಖ್ಯಸ್ಥರು ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿ ತಿಂಗಳಿನಿಂದ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪೈಲ್ವಾನರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು, ಪ್ರತಿಭಟನಾ ನಿರತರ ವಸ್ತುಗಳನ್ನು ಅಲ್ಲಿಂದ ಖಾಲಿ ಮಾಡಿಸಿದ್ದರು. ಭಾನುವಾರದ ಘಟನೆ ನಂತರ ತೀವ್ರವಾಗಿ ನೊಂದಿರುವ ಕುಸ್ತಿಪಟುಗಳು ಈಗ ಪದಕಗಳನ್ನು ಗಂಗಾ ನದಿದಲ್ಲಿ ಬಿಡಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ಸಾಕ್ಷಿ ಮಲಿಕ್ ಟ್ವೀಟ್ ಮಾಡಿದ್ದಾರೆ.
— Sakshee Malikkh (@SakshiMalik) May 30, 2023
ಏಪ್ರಿಲ್ 23 ರಂದು ಕುಸ್ತಿಪಟುಗಳು ವ್ರೆಸ್ಟಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ತಮ್ಮ ಆಂದೋಲನವನ್ನು ಪುನರಾರಂಭಿಸಿದ್ದರು. ಒಲಂಪಿಕ್ ಪದಕ ವಿಜೇತರಾದ ಬಜರಂಜ್ ಪೂನಿಯಾ, ಸಾಕ್ಷಿ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ವಿಜೇತ ವಿನೇಶ್ ಸೇರಿದಂತೆ ಹಲವು ಮುಂಚೂಣಿ ಕುಸ್ತಿಪಟುಗಳು ಹೋರಾಟದಲ್ಲಿ ನಿರತರಾಗಿದ್ದಾರೆ. ಹಲವಾರು ಮಹಿಳಾ ಕುಸ್ತಿಪಟುಗಳಿಗೆ ಮತ್ತು ಓರ್ವ ಅಪ್ರಾಪ್ತ ಯುವತಿಗೆ ಬ್ರಿಜ್ ಭೂಷಣ್ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾರೆ. ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸದ ನಂತರ ಎರಡು ಎಫ್ಐಆರ್ಗಳನ್ನು ಬ್ರಿಜ್ ಭೂಷಣ್ ವಿರುದ್ಧ ದಾಖಲಿಸಲಾಗಿದೆ. ಆದರೆ ಅವರ ಬಂಧನವಾಗಿಲ್ಲ. ದೇಶಕ್ಕೆ ಮಹತ್ವದ ಪದಕಗಳನ್ನು ತಂದುಕೊಟ್ಟ ಕುಸ್ತಿಪಟುಗಳ ಸ್ಥಿತಿಯನ್ನ ನೋಡಿದರೆ ನಿಜಕ್ಕೂ ದೇಶ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಉದ್ಭವಿಸಿದೆ.