ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ – ಭಾರತಕ್ಕೆ ಬರ್ತಿದ್ದಂತೆ ವಿಮಾನ ನಿಲ್ದಾಣದಲ್ಲಿಯೇ ತುರ್ತು ಸಭೆ ನಡೆಸಿದ ಪ್ರಧಾನಿ ಮೋದಿ

ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ – ಭಾರತಕ್ಕೆ ಬರ್ತಿದ್ದಂತೆ ವಿಮಾನ ನಿಲ್ದಾಣದಲ್ಲಿಯೇ ತುರ್ತು ಸಭೆ ನಡೆಸಿದ ಪ್ರಧಾನಿ ಮೋದಿ

ಜಮ್ಮು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದು 26ಕ್ಕೂ ಹೆಚ್ಚು ಪ್ರವಾಸಿಗರು ಜೀವ ಕಳೆದುಕೊಂಡಿದ್ದಾರೆ. ಉಗ್ರರ ಅಟ್ಯಾಕ್‌ ಬೆನ್ನಲ್ಲೇ ಪ್ರಧಾನಿ ಮೋದಿ ಸೌದಿ ಪ್ರವಾಸವನ್ನ ಮೊಟಕುಗೊಳಿಸಿದ್ದು, ಭಾರತಕ್ಕೆ ವಾಪಸ್ ಬಂದಿದ್ದಾರೆ.

ಇದನ್ನೂ ಓದಿ: 2025ರಲ್ಲಿ ಜಾಗತಿಕ ವ್ಯಾಪಾರ ಕುಂಠಿತ; ಗ್ಲೋಬಲ್ ಜಿಡಿಪಿಯೂ ಕುಸಿತ ಸಾಧ್ಯತೆ: WTO

ಜಮ್ಮು ಕಾಶ್ಮೀರದ ಪಹಲ್ಗಾಮ್​​ನಲ್ಲಿ ಮಂಗಳವಾರ ಪ್ರವಾಸಕ್ಕೆಂದು ಬಂದಿದ್ದ ಜನರ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 26ಕ್ಕೂ ಹೆಚ್ಚು ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದು, 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಸಾವಿನ ಸಂಖ್ಯೆ ಇನ್ನೂ ಖಚಿತವಾಗಿ ಲಭ್ಯವಾಗಿಲ್ಲ. ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ವಿಶೇಷ ಆಹ್ವಾನದ ಮೇರೆಗೆ ನಿನ್ನೆ ಬೆಳಗ್ಗೆ ಸೌದಿ ಪ್ರವಾಸಕ್ಕೆ ತೆರಳಿದ್ದ ಮೋದಿ, ಉಗ್ರರ ಅಟ್ಟಹಾಸದ ವಿಷಯ ತಿಳಿತಿದ್ದಂತೆ ಭಾರತಕ್ಕೆ ವಾಪಸ್​​ ಬಂದಿದ್ದಾರೆ. ವಿಮಾನದಿಂದ ಇಳಿದ ತಕ್ಷಣ, ಪ್ರಧಾನಿ ಮೋದಿ ವಿಮಾನ ನಿಲ್ದಾಣದಲ್ಲೇ ತುರ್ತು ಪರಿಶೀಲನಾ ಸಭೆ ನಡೆಸಿದರು. ವಿದೇಶಾಂಗ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಇತರ ಹಿರಿಯ ಅಧಿಕಾರಿಗಳು ಅವರಿಗೆ ಮಾಹಿತಿ ನೀಡಿದರು.

ಕಾಶ್ಮೀರದಲ್ಲಿ ನಡೆದ ಪೈಶಾಚಿಕ ಕೃತ್ಯವನ್ನ ಕೇವಲ ಭಾರತ ಮಾತ್ರವಲ್ಲದೇ ಇಡೀ ವಿಶ್ವವೇ ಖಂಡಿಸಿದೆ. ಭಾರತಕ್ಕೆ ವಿಶ್ವದ ಸಮುದಾಯದ ಬೆಂಬಲ ಸಿಕ್ಕಿದೆ. ಉಗ್ರರ ನೀಚ ಕೃತ್ಯವನ್ನ ವಿಶ್ವದ ಪ್ರಮುಖ ನಾಯಕರು ಖಂಡಿಸಿದ್ರೆ, ಇತ್ತ ದಾಳಿ ನಡೆದ ಕೆಲವೆ ಗಂಟೆಗಳಲ್ಲಿ ಪ್ರಧಾನಿ ಮೋದಿಗೆ ಅಮೆರಿಕಾ ಅಧ್ಯಕ್ಷ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಇಂಥ ಘಟನೆ ಖಂಡನೀಯ, ಭಾರತದ ಜೊತೆ ನಾವಿದ್ದೇವೆ ಅಂತ ಟ್ರಂಪ್ ಹೇಳಿದ್ದಾರೆ. ಈ ಬೆಂಬಲಕ್ಕೆ ಮೋದಿ ಧನ್ಯವಾದ ಹೇಳಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮೀರ್​ ಪುಟಿನ್​​​​​ ಸಹ ಈ ನೀಚ ಕೃತ್ಯವನ್ನ ಖಂಡಿಸಿದ್ದಾರೆ. ಇಂಥ ಕ್ರೂರ ಅಪರಾಧಕ್ಕೆ ಯಾವುದೇ ಸಮರ್ಥನೆ ಇಲ್ಲ ಅಂತ ಕೆಂಡ ಕಾರಿದ್ದು, ಉಗ್ರರನ್ನ ಸದೆಬಡೆಯಲು ಭಾರತಕ್ಕೆ ಸದಾ ಸಹಾಯ ನೀಡಲಿದೆ ಅಂತ ಅಭಯ ನೀಡಿದ್ದಾರೆ. ಒಟ್ಟಾರೆ, ಈ ದಾಳಿಗೆ ಪ್ರತಿ ಭಾರತೀಯನಲ್ಲೂ ಪ್ರತೀಕಾರದ ಜ್ವಾಲೆ ಹೊತ್ತಿಸಿದೆ. ಈಗಾಗ್ಲೇ ಸೇನಾ ಪಡೆ ಉಗ್ರರ ಹುಟ್ಟಡಗಿಸುವ ಕಾರ್ಯಚರಣೆ ಶುರು ಮಾಡಿದ್ದು, ಉಗ್ರರ ಸಂಹಾರಕ್ಕೆ ಪಣ ತೊಟ್ಟಿದೆ.

Shwetha M