ಸೋತಿದ್ದೇವೆ ಏನಿವಾಗ ರೋಹಿತ್ ಶರ್ಮಾ ಸಿಟ್ಟು – ವಿರಾಟ್ ಕೊಹ್ಲಿ ವಿಂಟೇಜ್ ರೂಪ ಹೇಗಿತ್ತು ಗೊತ್ತಾ?

ಸೋತಿದ್ದೇವೆ ಏನಿವಾಗ ರೋಹಿತ್ ಶರ್ಮಾ ಸಿಟ್ಟು –  ವಿರಾಟ್ ಕೊಹ್ಲಿ ವಿಂಟೇಜ್ ರೂಪ ಹೇಗಿತ್ತು ಗೊತ್ತಾ?

ಶ್ರೀಲಂಕಾ ವಿರುದ್ಧದ ಸರಣಿ ಕೈ ತಪ್ಪಿ ಹೋಗಿದೆ. ಮೂರು ದಿನಗಳ ಏಕದಿನ ಸರಣಿಯನ್ನ ಲಂಕಾ ಪಡೆ 2-0 ಅಂತರಗಳಿಂದ ಗೆದ್ದು ಬೀಗಿದೆ. ಪಂದ್ಯದ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಖಾರವಾಗೇ ಉತ್ತರ ಕೊಟ್ಟಿದ್ದಾರೆ. ಈ ಸೋಲಿನಿಂದ ಜಗತ್ತೇನು ಕೊನೆಯಾಗುವುದಿಲ್ಲ. ತಮ್ಮ ತಂಡದಲ್ಲಿರುವ ಆಟಗಾರರು ಹಲವು ವರ್ಷಗಳಿಂದ ಸ್ಥಿರ ಪ್ರದರ್ಶನ ನೀಡುತ್ತಿದ್ದು, ಇದೊಂದು ಸೋಲಿಗೆ ಬೇಸರಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿ:  IND Vs SL.. ಭಾರತ ಕ್ಲೀನ್ ಸ್ವೀಪ್! – ಸ್ಪಿನ್ನರ್ಸ್ ಬೆಂಕಿ ಬಲೆಗೆ ಭಾರತ ಬಲಿ!

ಮೂರನೇ ಪಂದ್ಯ ಸೋತ ನಂತರ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದ ರೋಹಿತ್ ಶರ್ಮಾ ಲಂಕಾ ಆಟಗಾರರನ್ನು ಹೊಗಳಿದ್ದಾರೆ.  ನಮಗಿಂತ ಉತ್ತಮ ಪ್ರದರ್ಶನ ನೀಡಿದ್ದರಿಂದ ಶ್ರೀಲಂಕಾ ಸರಣಿ ಗೆದ್ದಿದೆ. ಇದರಲ್ಲಿ ಎರಡು ಮಾತಿಲ್ಲ. ಅವರು ಎಲ್ಲಾ ವಿಭಾಗದಲ್ಲೂ ನಮಗಿಂತ ಉತ್ತಮ ಪ್ರದರ್ಶನ ತೋರಿದ್ದಾರೆ ಎಂದು ರೋಹಿತ್ ಶರ್ಮಾ ಒಪ್ಪಿಕೊಂಡಿದ್ದಾರೆ. ಟಿ20 ವಿಶ್ವಕಪ್ ಗೆದ್ದ ನಂತರ ತುಂಬಾ ರಿಲಾಕ್ಸ್​ ಆದ್ರಾ ಎಂದು ಕೇಳಿದ್ದಕ್ಕೆ ಇದೊಂದು ದೊಡ್ಡ ಜೋಕ್ ಎಂದು ನಕ್ಕಿದ್ದಾರೆ ಹಿಟ್‌ ಮ್ಯಾನ್.

ಶ್ರೀಲಂಕಾ ಸ್ಪಿನ್ನರ್‌ಗಳಿಗೆ ಭಾರತದ ಹುಲಿಗಳು ನಡುಗಿದ್ದು ಸುಳ್ಳಲ್ಲ. ಹೇಳಿಕೇಳಿ ಪ್ರೇಮದಾಸ್ ಸ್ಟೇಡಿಯಂ ಸ್ಪಿನ್ನರ್‌ಗಳ ಫೇವರೇಟ್ ಸ್ಟೇಡಿಯಂ. ಇದಕ್ಕೆ ಸರಿಯಾಗಿ ಲಂಕನ್ನರು ಕೂಡಾ ಸ್ಪಿನ್ನರ್‌ಗಳ ಮೇಲೆಯೇ ಸ್ಟ್ರಾಟಜಿ ರೂಪಿಸಿದ್ದರು. ಇದೇ ಲಂಕನ್ನರ ಗೆಲುವಿಗೆ ಕಾರಣವಾಯ್ತು. ವಿಪರ್ಯಾಸವೆಂದ್ರೆ, ಲಂಕನ್ನರ ಸ್ಪಿನ್ ದಾಳಿಗೆ ಟೀಮ್ ಇಂಡಿಯಾ ಘಟಾನುಘಟಿ ಬ್ಯಾಟರ್‌ಗಳು ಸೈಲೆಂಟ್ ಆಗಿದ್ದು. ಇದನ್ನ ನೋಡಿ ಕೆರಳಿರೋ ಕೆಲ ಫ್ಯಾನ್ಸ್, ಇವ್ರೆಲ್ಲಾ ಐಪಿಎಲ್‌ಗಳಲ್ಲಿ ಹುಲಿ. ದೇಶಕ್ಕಾಗಿ ಆಡುವಾಗ ಇಲಿಗಳು ಎಂದು ಟ್ರೋಲ್ ಮಾಡ್ತಿದ್ದಾರೆ.

ಶ್ರೀಲಂಕಾದ ಸ್ಟಾರ್​ ಕ್ರಿಕೆಟರ್​​​ ಕುಶಲ್​ ಮೆಂಡೀಸ್​ ಮತ್ತು ಟೀಮ್​ ಇಂಡಿಯಾ ಸ್ಟಾರ್​ ವೇಗಿ ಮೊಹಮ್ಮದ್​ ಸಿರಾಜ್​ ಮಧ್ಯೆ ಕೊನೇ ಪಂದ್ಯದಲ್ಲಿ ಜಗಳ ನಡೆದಿದೆ. ಮೊಹಮ್ಮದ್​ ಸಿರಾಜ್​​ 39ನೇ ಓವರ್​ನಲ್ಲಿ 3ನೇ ಬಾಲ್​ ಎಸೆದಾಗ ಜಟಾಪಟಿ ನಡೆದಿದೆ. ಕುಶಲ್ ಮೆಂಡೀಸ್​ ಅವರನ್ನು ಸಿರಾಜ್​ ಗುರಾಯಿಸಿ ನೋಡಿದ್ದಾರೆ. ಇದಕ್ಕೆ ಮೆಂಡೀಸ್​ ಕೂಡ ಗುಟುರು ಹಾಕಿ ಸಿರಾಜ್ ಹತ್ರ ಬಂದಿದ್ದಾರೆ. ಇಬ್ಬರೂ ಕೂಡಾ ಮಾತಿನ ಚಕಮಕಿ ನಡೆಸಿಕೊಂಡಿದ್ದು, ಕೊನೆಗೆ ಸಿರಾಜ್ ತನ್ನ ಪಾಡಿಗೆ ಬಂದು ಬೌಲ್ ಮಾಡಿದ್ರು.

ಪಂದ್ಯದಲ್ಲಿ ಭಾರತ ಸೋತರೂ ವಿರಾಟ್‌‌ ಕೊಹ್ಲಿ ಅಗ್ರೇಷನ್‌ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಎಲ್ಲರೂ ವಿರಾಟ್‌ ಕೊಹ್ಲಿ ನೋಡಿ ವಿಂಟೇಜ್‌ ಕೊಹ್ಲಿ ಈಸ್‌ ಬ್ಯಾಕ್‌ ಅಂತಿದ್ದಾರೆ. ಸಿರಾಜ್‌ ಅವರನ್ನು ಮೆಂಡಿಸ್‌ ಕಿಚಾಯಿಸಿದ್ದರು. ಇಬ್ಬರ ನಡುವೆ ಮಾತಿನ ಚಕಮಕಿ ನಡೀತು. ಅಲ್ಲಿ ಪಕ್ಕಾ ಕಿರಿಕ್‌ ಆಗುತ್ತೆ ಅಂತಾ ಅನ್ಕೊಳ್ಳುವಾಗ್ಲೇ ಎಂಟ್ರಿ ಕೊಟ್ಟಿದ್ದು ಕಿಂಗ್‌ ಕೊಹ್ಲಿ. ಆದ್ರೆ ವಿರಾಟ್‌ ಗುರಿ ಮೆಂಡಿಸ್ ಅಲ್ಲ, ಶ್ರೀಲಂಕಾ ನಾಯಕ ಚರಿತ್ ಅಸಲಂಕಾ. ರಿಯಾನ್ ಪರಾಗ್‌ ಅಸಲಂಕಾ ಅವರನ್ನು ಔಟ್ ಮಾಡುತ್ತಿದ್ದಂತೆ ಕೊಹ್ಲಿ ವಿರಾಟರೂಪ ತೋರಿದ್ರು. ಈ ರೀತಿ ವಿರಾಟ್ ರೂಪ ನೋಡಿದ ಇಂಡಿಯಾ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾರೆ.

ಶ್ರೀಲಂಕಾದ ಯುವ ಬೌಲರ್ ದುನಿತ್ ವೆಲ್ಲಾಲಗೆ ಸರಣಿ ಶ್ರೇಷ್ಠ ಪ್ರಶಸ್ತಿ ದಕ್ಕಿದೆ. 21 ವರ್ಷದ ಹುಡುಗನ ಮುಂದೆ ಭಾರತೀಯ ಬ್ಯಾಟರ್‌ಗಳು ಈ ರೀತಿ ಪರದಾಡುತ್ತಾರೆ ಎಂಬುದನ್ನ ಫ್ಯಾನ್ಸ್ ಕೂಡಾ ನಿರೀಕ್ಷೆ ಮಾಡಿರಲಿಲ್ಲ. ದುನಿತ್‌ ವೆಲ್ಲಾಲಗೆ ಭಾರತದ ಬಲಿಷ್ಠ ಬಾಟರ್‌ಗಳಿಗೆ ಪೆವಿಲಿಯನ್‌ ಹಾದಿ ತೋರಿಸಿ ಕ್ರಿಕೆಟ್ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಶ್ರೇಯಸ್ ಅಯ್ಯರ್‌ ಹಾಗೂ ಅಕ್ಷರ್‌ ಪಟೇಲ್‌ ಸೇರಿದಂತೆ 5 ಪ್ರಮುಖ ವಿಕೆಟ್‌ ಪಡೆದು ಪಂದ್ಯದ ದಿಕ್ಕು ಬದಲಿಸಿದ್ದು ಕೂಡಾ ಇದೇ ವೆಲ್ಲಾಲಗೆ.

 

suddiyaana