ಬೆಂಗಳೂರಿನಲ್ಲಿ ಕುಡಿಯಲು ನೀರಿಲ್ಲ.. ಮದುವೆಯಾಗಲು ಹೆಣ್ಣು ಸಿಗ್ತಿಲ್ಲ! – ಜಲಕಂಟಕದಿಂದ ರೋಸಿಹೋದ ಐಟಿ ಉದ್ಯೋಗಿ
ಸಿನಿಕಾನ್ ಸಿಟಿ ಬೆಂಗಳೂರಿನಲ್ಲಿ ಕುಡಿಯೋಕೂ ನೀರಿಲ್ಲ.. ತೊಳೆಯೋಕೂ ನೀರಿಲ್ಲ.. ಬೇಸಿಗೆ ಆರಂಭವಾಗುತ್ತಿದ್ದಂತೆ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಇದೀಗ ಈ ಸಮಸ್ಯೆ ಬೆನ್ನಲ್ಲೇ ಯುವಕರಿಗೆ ಮತ್ತೊಂದು ಸಮಸ್ಯೆ ಶುರುವಾಗಿದೆ. ನೀರಿನ ಸಮಸ್ಯೆಯಿಂದಾಗಿ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲವಂತೆ.
ಹೌದು.. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯಿಂದ ಜನ ಬಳಲುತ್ತಿದ್ದರೆ, ಇತ್ತ ಈ ಸಮಸ್ಯೆಯಿಂದಾಗಿ ವಯಸ್ಸಿಗೆ ಬಂದ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲವಂತೆ. ಹೀಗಂತ ಬೆಂಗಳೂರಿನ ವ್ಯಕ್ತಿಯೊಬ್ಬರು ಗೆಳೆಯನ ಪರಿಸ್ಥಿತಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದ ಬಾಂಬರ್ ಯಾರೆಂಬುದು ಗೊತ್ತಾಗಿದೆ -ಗೃಹಸಚಿವ ಪರಮೇಶ್ವರ್
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.. ರಾಹುಲ್ ಗಾಂಧಿಯವರೇ ದಯವಿಟ್ಟು ಗಮನಿಸಿ, ಆದ್ಯತೆಯ ಮೇರೆಗೆ ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಸಿ. ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿರುವ ಸ್ನೇಹಿತನೊಬ್ಬ ತನ್ನ ಸದ್ಯದ ಪರಿಸ್ಥಿತಿಯನ್ನು ನನ್ನೊಂದಿಗೆ ಹಂಚಿಕೊಂಡಿದ್ದಾನೆ. ನನ್ನ ಗೆಳೆಯ ಮದುವೆಯಾಗಲು ಸಿದ್ಧವಿದ್ದು, ವಧುವಿನ ಹುಡುಕಾಟದಲ್ಲಿದ್ದಾರೆ. ಆದರೆ ಎಷ್ಟೇ ಹುಡುಕಿದರೂ ಅವರಿಗೆ ವಧು ಸಿಗುತ್ತಿಲ್ಲ. ನೀರಿನ ಸಮಸ್ಯೆಯಿಂದಾಗಿ ಹುಡುಗಿಯರು ಮದುವೆಯಾಗಲು ಒಪ್ಪಿಗೆ ಸೂಚಿಸುತ್ತಿಲ್ಲ ಎಂದು ನನ್ನ ಮುಂದೆ ಬೇಸರ ವ್ಯಕ್ತಪಡಿಸಿದ್ದಾನೆ.
ಕಳೆದ ಒಂದು ತಿಂಗಳಿಂದ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಳ್ತಾ ಇದೆ. ಹನಿ ಹನಿ ನೀರಿಗೂ ಜನ ಪರದಾಡ್ತಿದ್ದಾರೆ. ನೀರು ಪೂರೈಕೆ ಮಾಡೋದ್ರಲ್ಲಿ ಸರ್ಕಾರ ಮತ್ತು ಜಲಮಂಡಳಿ ಸತತ ಪ್ರಯತ್ನ ಮಾಡ್ತಾ ಇದೆ. ಈ ಮಧ್ಯೆ ಜಲಮಂಡಳಿ ಬೆಂಗಳೂರಿನಲ್ಲಿ ನೀರಿನ ಕೊರತೆ ಇರುವ ಪ್ರದೇಶಗಳ ಸರ್ವೆ ಮಾಡಿದೆ. ಪ್ರಮುಖವಾಗಿ 257 ಏರಿಯಾಗಳಲ್ಲಿ ನೀರಿನ ಕೊರತೆ ಇರೋದು ಗೊತ್ತಾಗಿದೆ. ಬೋರ್ ವೆಲ್ಗಳು ಬತ್ತಿ ಹೋಗಿದ್ದು, ಅಂತರ್ಜಲದ ಮಟ್ಟ ಕುಸಿದಿರೋದು ನೀರಿನ ಸಮಸ್ಯೆಗೆ ಕಾರಣ ಎಂಬ ಮಾಹಿತಿ ಲಭ್ಯವಾಗಿದೆ.