ರಾಜ್ಯ ರಾಜಧಾನಿಗೂ ತಟ್ಟಿದ ಬರದ ಬರೆ – ನೀರು ದುರ್ಬಳಕೆ ಮಾಡಿದ್ರೆ ಬೀಳುತ್ತೆ 5,000 ರೂ. ದಂಡ!

ರಾಜ್ಯ ರಾಜಧಾನಿಗೂ ತಟ್ಟಿದ ಬರದ ಬರೆ – ನೀರು ದುರ್ಬಳಕೆ ಮಾಡಿದ್ರೆ ಬೀಳುತ್ತೆ 5,000 ರೂ. ದಂಡ!

ಮುಂಗಾರು ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಬಹುತೇಕ ನದಿಗಳಲ್ಲಿ ನೀರು ಬತ್ತಿಹೋಗುತ್ತಿವೆ. ಕುಡಿಯುವ ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಿಲಿಕಾನ್‌ ಸಿಟಿಯಲ್ಲೂ ನೀರಿನ ಅಭಾವ ಕಾಣಿಸಿಕೊಂಡಿದೆ. ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿಗೂ ಸಮಸ್ಯೆ ತಲೆದೋರಿದೆ. ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಹಾಗೇನಾದರು ಬಳಸಿದರೆ ಭಾರಿ ದಂಡ ಹಾಕಲಾಗುವುದು  ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ  ತಿಳಿಸಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಹಿಜಾಬ್ v/s ಕೇಸರಿ ಸಮರ – ಹಿಜಾಬ್‌ ಧರಿಸಿಕ್ಕೆ ಪ್ರತಿಯಾಗಿ ಕೇಸರಿ ಶಾಲಿನಲ್ಲಿ ರೀಲ್ಸ್ ಮಾಡಿದ ವಿದ್ಯಾರ್ಥಿಗಳು!

ರಾಜ್ಯ ರಾಜಧಾನಿ ಬೆಂಗಳೂರಿಗೂ ಬರ ಬಿಸಿ ತಟ್ಟಿದೆ. ಕುಡಿಯುವ ನೀರಿಗೂ ಭಾರಿ ಸಮಸ್ಯೆಯಾಗುತ್ತಿದೆ. ಶುದ್ಧ ನೀರಿನ ಘಟಕಗಳಲ್ಲಿ ಒಬ್ಬರಿಗೆ ಒಂದು ಕ್ಯಾನ್‌  ನೀರು ಮಾತ್ರ ಅಂತಾ ಹೊಸ ರೂಲ್ಸ್‌ ಜಾರಿಯಾಗಿದೆ. ಇದೀಗ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ  ನೀರನ್ನು ಪೋಲು ಮಾಡುವವರ ವಿರುದ್ಧ ಹಲವು ಕ್ರಮ ಕೈಗೊಂಡಿದೆ. ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಹಾಗೇನಾದರು ಬಳಸಿದರೆ 5,000 ರೂ. ದಂಡ ಹಾಕಲಾಗುವುದು ಎಂದು ಮಂಡಳಿ ಆದೇಶ ಹೊರಡಿಸಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು 34 ರ ಅನುಸಾರ, ಕುಡಿಯುವ ನೀರನ್ನು ಅನ್ಯ ಬಳಕೆಗೆ ನಿಷೇಧಿಸಲಾಗಿದೆ. ಕುಡಿಯುವ ನೀರು ಬೇರೆ ಯಾವುದಕ್ಕೂ ಬಳಸಬಾರದು ಎಂದು ಆದೇಶದಲ್ಲಿ ತಿಳಿಸಿದೆ. ಕುಡಿಯುವ ನೀರನ್ನು ವಾಹನಗಳ ಸ್ವಚ್ಛತೆ, ಕೈದೋಟ, ಕಟ್ಟಡ ನಿರ್ಮಾಣ, ಮನರಂಜಕವಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ ಬಳಸಬಾರದು. ಸಿನಿಮಾ ಮಂದಿರ ಮತ್ತು ಮಾಲ್‌ಗಳಲ್ಲಿನ ಕುಡಿಯುವ ನೀರಿನ ಹೊರತು ಇನ್ನಿತರೆ ಬಳಕೆಗೆ, ರಸ್ತೆ ನಿರ್ಮಾಣ ಮತ್ತು ಸ್ವಚ್ಛತೆಗೆ ಬಳಸಲು ನಿಷೇಧ ಹೇರಲಾಗಿದೆ ಎಂದು ಮಂಡಳಿ ಆದೇಶದಲ್ಲಿ ಹೇಳಿದೆ.

ಆದೇಶವನ್ನು ಉಲ್ಲಂಘನೆ ಮಾಡಿದಲ್ಲಿ ಅಂಥವರ ವಿರುದ್ಧ ಜಲಮಂಡಳಿಯ ಕಾಯ್ದೆ 1964 ರ ಕಲಂ 109 ರಂತೆ 5,000 ರೂ. ದಂಡ ಹಾಕಲಾಗುವುದು. ಉಲ್ಲಂಘನೆಯು ಮರುಕಳಿಸಿದ್ದಲ್ಲಿ ದಂಡದ ಮೊತ್ತ 5,000 ರೂ. ಜೊತೆಗೆ ಹೆಚ್ಚುವರಿಯಾಗಿ 500 ರೂ. ಪ್ರತಿ ದಿನದಂತೆ ದಂಡ ಹಾಕಲಾಗುವುದು ಎಂದು ಎಚ್ಚರಿಸಿದೆ. ನಿಯಮವನ್ನು ಯಾರಾದರು ಉಲ್ಲಂಘಿಸುವುದು ಕಂಡುಬಂದಲ್ಲಿ ಕೂಡಲೇ ಮಂಡಳಿಯ ಕಾಲ್‌ ಸೆಂಟರ್‌ ಸಂಖ್ಯೆ: 1916 ಕ್ಕೆ ಕರೆ ಮಾಡಿ ತಿಳಿಸಿ ಎಂದು ಸಾರ್ವಜನಿಕರಲ್ಲಿ ಮಂಡಳಿ ಮನವಿ ಮಾಡಿದೆ

Shwetha M