ಪ್ಯಾಸೆಂಜರ್ ಜೆಟ್ ಮತ್ತು ಸೇನಾ ಹೆಲಿಕಾಪ್ಟರ್ ಡಿಕ್ಕಿ – ವಾಷಿಂಗ್ಟನ್ನಲ್ಲಿ ದುರಂತ
64 ಪ್ರಯಾಣಿಕರಿಗಾಗಿ ಹುಡುಕಾಟ
ಪ್ಯಾಸೆಂಜರ್ ಜೆಟ್ ಮತ್ತು ಸೇನಾ ಹೆಲಿಕಾಪ್ಟರ್ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಅಮೆರಿಕದ ವಾಷಿಂಗ್ಟನ್ನಲ್ಲಿ ಬುಧವಾರ ರಾತ್ರಿ ನಡೆದಿದೆ. ಅಮೆರಿಕನ್ ಏರ್ಲೈನ್ಸ್ ವಿಮಾನ ಸಂಖ್ಯೆ 5342 ಮತ್ತು ಬ್ಲಾಕ್ ಹಾವಕ್ ಹೆಲಿಕಾಪ್ಟರ್ ಡಿಕ್ಕಿಯಾಗಿದೆ. ಈ ಸಂದರ್ಭದಲ್ಲಿ ಪ್ಯಾಸೆಂಜರ್ ಜೆಟ್ನಲ್ಲಿ 64 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು ಎಂದು ವರದಿಯಾಗಿದೆ. ಫೆಡರಲ್ ವಿಮಾನ ಆಡಳಿತದ ವರದಿ ಪ್ರಕಾರ, ಬುಧವಾರ ರಾತ್ರಿ 9ರ ಸುಮಾರಿಗೆ ಅಪಘಾತ ಸಂಭವಿಸಿದೆ. ಪ್ಯಾಸೆಂಜರ್ ಜೆಟ್ ರೋನಾಲ್ಡ್ ರೀಗಾನ್ ವಾಷಿಂಗ್ಟನ್ ನ್ಯಾಷನಲ್ ಏರ್ಪೋರ್ಟ್ನ ರನ್ವೇ 33ರಲ್ಲಿ ಇಳಿಯುತ್ತಿದ್ದಂತೆ ದುರಂತ ಘಟಿಸಿದೆ. ಪಿಎಸ್ಎ ಏರ್ಲೈನ್ ಬೊಮಾರ್ಡಿಯರ್ ಸಿಆರ್ಜೆ700 ಪ್ರಾದೇಶಿಕ ಜೆಟ್, ರಾತ್ರಿ 9ಕ್ಕೆ ರೀಗಾನ್ ವಾಷಿಂಗ್ಟನ್ ನ್ಯಾಷನಲ್ ಏರ್ಪೋರ್ಟ್ನ ರನ್ವೇ ಇಳಿಯುವಾಗ ಸಿಕೊರ್ಸಕೆ ಎಚ್-60 ಹೆಲಿಕಾಪ್ಟರ್ ಡಿಕ್ಕಿಯಾಗಿದೆ. ಪಿಎಸ್ಎ ವಿಮಾನವನ್ನು ಅಮೆರಿಕನ್ ಏರ್ಲೈಲ್ ಕಾರ್ಯಾಚರಣೆ ನಡೆಸುತ್ತಿದೆ. ಇದು ಕನ್ಸಸ್ನ ವಿಚಿತ ಎಂಬಲ್ಲಿಂದ ಹೊರಟಿತ್ತು. ಘಟನೆಯನ್ನು ಎಫ್ಎಎಎ ಮತ್ತು ಎನ್ಟಿಎಸ್ಬಿ ತನಿಖೆ ನಡೆಸಲಿದೆ ಎಂದು ಎಫ್ಎಎ ಹೇಳಿಕೆಯಲ್ಲಿ ಮಾಹಿತಿ ನೀಡಿದೆ. ದುರಂತ ಸಂಭವಿಸಿದ ತಕ್ಷಣವೇ ತುರ್ತು ಸೇವೆಗಳ ಸಿಬ್ಬಂದಿ, ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆ, ಕೊಲಂಬಿಯಾ ಅಗ್ನಿಶಾಮಕ ದಳ ಹಾಗೂ ತುರ್ತು ವೈದ್ಯಕೀಯ ಸೇವಾ ಇಲಾಖೆ ಪೊರೊಮಾಕ್ ನದಿಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಅಪಘಾತ ನಡೆದ ಪ್ರದೇಶದಲ್ಲಿ ನದಿಗೆ ಬಿದ್ದವರ ರಕ್ಷಣೆಗೆ ಬೋಟ್ಗಳನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ಕೇಂದ್ರಕ್ಕೆ ಸಿದ್ದರಾಮಯ್ಯ ಬೇಡಿಕೆ – ಬಜೆಟ್ನಲ್ಲಿ ನೀರಾವರಿ ಯೋಜನೆಗೆ ಅನುಮೋದನೆ ನೀಡಬೇಕಂದು ಒತ್ತಾಯ
ಮುನ್ನೆಚ್ಚರಿಕಾ ಕ್ರಮವಾಗಿ ರೋನಾಲ್ಡ್ ರೀಗಾನ್ ಏರ್ಪೋರ್ಟ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಎಲ್ಲಾ ವಿಮಾನಗಳ ಹಾರಾಟ ಮತ್ತು ಆಗಮನವನ್ನು ಬಂದ್ ಮಾಡಲಾಗಿದೆ. ವಿಮಾನ ದುರಂತದ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಘಟನೆಯ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಇದೊಂದು ಭಯಾನಕ ಅಪಘಾತ. ಸಾವನ್ನಪ್ಪಿದವರ ಆತ್ಮಕ್ಕೆ ಶಾಂತಿ ದೊರೆಯಲಿ. ಘಟನೆ ನಡೆದ ತಕ್ಷಣವೇ ನಮ್ಮ ಮೊದಲ ಪ್ರತಿಕ್ರಿಯಾ ತಂಡ ಅದ್ಭುತ ರಕ್ಷಣಾ ಕಾರ್ಯ ನಡೆಸಿದೆ. ಪರಿಸ್ಥಿತಿಯ ಮಾಹಿತಿ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.