ರಾಮಮಂದಿರವಿದ್ದ ಜಾಗದಲ್ಲೇ ಬಾಬ್ರಿ ಮಸೀದಿ ನಿರ್ಮಾಣ ಮಾಡಲಾಗಿದ್ಯಾ – ಪುರಾತತ್ವ ಇಲಾಖೆ ಉತ್ಖನನದ ವೇಳೆ ಬಯಲಾಗಿದ್ದೇನು?
ಅಯೋಧ್ಯೆಯಲ್ಲಿ ಕಟ್ಟಲಾದ ಬಾಬ್ರಿ ಮಸೀದಿಯನ್ನ ನಿಜವಾಗಿಯೂ ರಾಮಮಂದಿರವಿದ್ದ ಜಾಗದಲ್ಲೇ ನಿರ್ಮಾಣ ಮಾಡಲಾಗಿದ್ಯಾ? ಬಾಬ್ರಿ ಮಸೀದಿಯ ಕೆಳಗೆ ಮಂದಿರದ ಕುರುಹು ಇತ್ತಾ ಅನ್ನೋದು. ಹಿಂದೂಗಳು ಹೇಳೋ ಪ್ರಕಾರ ಅಯೋಧ್ಯೆಯಲ್ಲಿದ್ದ ಗುಡ್ಡ ಪ್ರದೇಶ ರಾಮ್ಕೋಟ್ನಲ್ಲಿ ರಾಮಮಂದಿರವಿತ್ತು. ಅದೇ ಜಾಗದಲ್ಲಿ ಬಾಬ್ರಿ ಮಸೀದಿ ಕಟ್ಟಲಾಗಿದೆ ಅನ್ನೋದು. ಈ ಹಿಂದೆ ಅಲಹಾಬಾದ್ ಹೈಕೋರ್ಟ್ ಸೂಚನೆಯಂತೆ ಭಾರತದ ಪುರಾತತ್ವ ಇಲಾಖೆ ಬಾಬ್ರಿ ಮಸೀದಿ ಇದ್ದ ಜಾಗದಲ್ಲಿ ಉತ್ಖನನ ಮಾಡಿಸಿತ್ತು. ಈ ವೇಳೆ ಹಿಂದೂ ಸಂಪ್ರದಾಯದ ಕಟ್ಟಡದ ಮಾದರಿಯ ಅವಶೇಷಗಳು ಕೂಡ ಪತ್ತೆಯಾಗಿದ್ವು. ಬಳಿಕ ಅಲಹಾಬಾದ್ ಹೈಕೋರ್ಟ್ ಕೂಡ ಇದನ್ನ ನೋಟ್ ಮಾಡಿಕೊಂಡಿತ್ತು.
ಬಾಬ್ರಿ ಮಸೀದಿಯನ್ನ ಖಾಲಿ ಜಾಗದಲ್ಲಿ ಕಟ್ಟಿಲ್ಲ. ಮಸೀದಿ ಇದ್ದ ಜಾಗದ ಕೆಳ ಭಾಗದಲ್ಲಿ ಪತ್ತೆಯಾಗಿರೋದು ಸ್ಟ್ರಕ್ಚರ್ ಇಸ್ಲಾಮಿಕ್ ಶೈಲಿಯಲ್ಲಿ ಇಲ್ಲ ಅಂತಾ ಕೋರ್ಟ್ ಹೇಳಿತ್ತು. ಇನ್ನು ಬಾಬ್ರಿ ಮಸೀದಿ ಜಾಗದಲ್ಲಿ 1976ರಲ್ಲಿ ಸಂಶೋಧನೆ ನಡೆಸಿದಾಗ ಆ ತಂಡದ ಸದಸ್ಯರಲ್ಲಿ ಕೆಕೆ ಮೊಹಮ್ಮದ್ ಅನ್ನೋ ದೇಶದ ಅತ್ಯಂತ ಪ್ರಖ್ಯಾತ ಪುರಾತತ್ವಶಾಸ್ತ್ರಜ್ಞರು ಕೂಡ ಒಬ್ಬರಾಗಿದ್ರು. ಕೆಕೆ ಮೊಹಮ್ಮದ್ ಹೇಳಿರೋ ಪ್ರಕಾರ, ಬಾಬ್ರಿ ಮಸೀದಿಗೂ ಮುನ್ನ ಅದೇ ಜಾಗದಲ್ಲಿ ರಾಮಮಂದಿರ ಇತ್ತಂತೆ. ಅದೇನೂ ಸಣ್ಣ ಮಂದಿರ ಕೂಡ ಆಗಿರಲಿಲ್ಲ.. ಅತ್ಯಂತ ಭವ್ಯ ಮಂದಿರವೇ ಆ ಜಾಗದಲ್ಲಿತ್ತು. ಮಂದಿರದ ಕುರುಹುಗಳು ಕೂಡ ಪತ್ತೆಯಾಗಿದೆ ಅಂತಾ ಕೆಕೆ ಮೊಹಮ್ಮದ್ ಹೇಳಿದ್ದಾರೆ. ಅಷ್ಟೇ ಅಲ್ಲ, ಬಾಬ್ರಿ ಮಸೀದಿಯ 12 ಪಿಲ್ಲರ್ಗಳನ್ನ ಮಂದಿರದ ಅವಶೇಷಗಳಿಂದಲೇ ನಿರ್ಮಾಣ ಮಾಡಲಾಗಿತ್ತಂತೆ. ಇದು 1976ರಲ್ಲಿ ನಡೆದ ಉತ್ಖನನದ ವೇಳೆ ಬೆಳಕಿಗೆ ಬಂದ ಸಂಗತಿ. ಆಗ ಬಾಬ್ರಿ ಮಸೀದಿ ಹಾಗೆಯೇ ಇತ್ತು ಅನ್ನೋದು ನಿಮಗೆ ಗೊತ್ತೇ ಇದೆ. ಇಲ್ಲಿ ಕೆಕೆ ಮೊಹಮ್ಮದ್ ಇನ್ನೊಂದು ಇಂಪಾರ್ಟೆಂಟ್ ವಿಚಾರವನ್ನ ಬಹಿರಂಗಪಡಿಸಿದ್ದಾರೆ. ಬಾಬ್ರಿ ಮಸೀದಿಯಲ್ಲಿ ಸಿಕ್ಕ ಮಂದಿರದ ಕುರುಹು ಸುಮಾರು 12, 13 ಶತಮಾನದಷ್ಟು ಹಿಂದಿನದ್ದಾಗಿತ್ತಂತೆ. ಹಾಗೆಯೇ ಬಾಬ್ರಿ ಮಸೀದಿಯ ಬೇಸ್ನಲ್ಲಿ ಪೂರ್ಣ ಕಳಶ ಕೂಡ ಸಿಕ್ಕಿತ್ತಂತೆ. ಹಾಗೆಯೇ ಅಷ್ಟ ಮಂಗಲ ಚಿಹ್ನೆ ಕೂಡ ಪತ್ತೆಯಾಗಿದ್ಯಂತೆ. ಇದ್ರ ಆಧಾರದ ಮೇಲೆ 1976ರಲ್ಲಿ ಪುರಾತತ್ವ ಇಲಾಖೆ ಸಂಶೋಧನಾ ತಂಡ ಬಾಬ್ರಿ ಮಸೀದಿ ಜಾಗದಲ್ಲಿ ಮಂದಿರವಿತ್ತು ಅನ್ನೋ ನಿರ್ಧಾರಕ್ಕೆ ಬಂದಿತ್ತು. ಆದ್ರೆ 1990ರಲ್ಲಿ ಈ ಸಂಶೋಧನಾ ವರದಿ ವಿರುದ್ಧ ಆರೋಪಗಳು ಕೇಳಿ ಬಂದಿದ್ವು. ಮಂದಿರದ ಕುರುಹು ಸಿಕ್ಕಿದೆ ಅನ್ನೋದಕ್ಕೆ ಯಾವುದೇ ಆಧಾರ ಇಲ್ಲ. ಸಾಕ್ಷ್ಯಗಳಿಲ್ಲ ಅಂತಾ ರೋಮಿಳ ಥಾಪರ್ ಸೇರಿದಂತೆ ಇತಿಹಾಸಕಾರರು ವಾದ ಮಾಡಿದ್ರು.
ಆದ್ರೆ 2003ರಲ್ಲಿ ಎರಡನೇ ಬಾರಿಗೆ ಬಾಬ್ರಿ ಮಸೀದಿ ಇದ್ದ ಜಾಗದಲ್ಲಿ ಸಂಶೋಧನೆ ನಡೆಸಲಾಗಿತ್ತು. ಆ ವೇಳೆಗಾಗಲೇ ಬಾಬ್ರಿ ಮಸೀದಿ ಕೂಡ ಧ್ವಂಸವಾಗಿತ್ತು. 2ನೇ ಬಾರಿ ನಡೆಸಿದ ಉತ್ಖನನದ ವೇಳೆಯೂ ಮಸೀದಿ ಇದ್ದ ಜಾಗದ ನೆಲದ ಕೆಳ ಭಾಗದಲ್ಲಿ ಸಾಕಷ್ಟು ಸ್ಟ್ರಕ್ಚರ್ಗಳು ಪತ್ತೆಯಾಗಿತ್ತು. ಬೇಸ್ಮೆಂಟ್ನಲ್ಲಿ ಸುಮಾರು 50 ಪಿಲ್ಲರ್ಗಳು ಪತ್ತೆಯಾಗಿದ್ವಂತೆ. ಅಂದ್ರೆ ಆ ಜಾಗದಲ್ಲಿ ಭಾರಿ ದೊಡ್ಡ ಗಾತ್ರದ ಮಂದಿರವೇ ಇತ್ತು ಅನ್ನೋದನ್ನ ಇಲ್ಲಿ ಅರ್ಥ ಮಾಡಿಕೊಳ್ಳಬಹುದು. ಜೊತೆಗೆ ಪ್ರಣಳ ಅನ್ನೋ ಮಂದಿರದ ಕುರುಹು ಕೂಡ ಪತ್ತೆಯಾಗಿತ್ತು. ಗಂಗಾ ನದಿಯ ಸಂಕೇತ, ಮೊಸಳೆಯ ಸಂಕೇತ ಕೂಡ ಸಂಶೋಧನಾ ತಂಡದ ಕಣ್ಣಿಗೆ ಬಿದ್ದಿದೆ. ಸುಮಾರು 263 ವಿವಿಧ ದೇವರು, ದೇವತೆಗಳ ಕೆತ್ತನೆಯ ಅವಶೇಷ. ಮನುಷ್ಯನಾಕೃತಿಯನ್ನ ಕೂಡ ಉತ್ಖನನ ಮಾಡಲಾಗಿತ್ತು. ಇಲ್ಲಿ ಇನ್ನೊಂದು ವಾದ ಕೂಡ ಇದೆ. ಬಾಬ್ರಿ ಮಸೀದಿ ಕೆಳ ಭಾಗದಲ್ಲಿ ವಿಷ್ಣುವಿನ ದೇವಸ್ಥಾನ ಪತ್ತೆಯಾಗಿ ಅಂತಾನೂ ಹೇಳಲಾಗುತ್ತೆ.