ಕ್ರಿಕೆಟ್‌ಗೆ ಆಸಿಸ್ ಬಾಹುಬಲಿ ಗುಡ್ ಬೈ -ಡೇವಿಡ್ ವಾರ್ನರ್ ನೋವಿನ ವಿದಾಯ
ಆಸ್ಟ್ರೇಲಿಯಾ ಟೀಮ್ ಗೆ ಡಬಲ್ ಶಾಕ್

ಕ್ರೀಸ್‌ಗೆ ಇಳಿದ್ರೆ ದೈತ್ಯ ಆಟಗಾರ, ಆರಂಭಿಕ ಫೈರ್‌ಮ್ಯಾನ್, ಲೆಜೆಂಡರಿ ಕ್ರಿಕೆಟಿಗ, ಆಸೀಸ್‌ನ ಬಾಹುಬಲಿ ಡೇವಿಡ್ ವಾರ್ನರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ವಾರ್ನರ್ ವಿದಾಯ ಘೋಷಣೆ ಮಾಡಿದ್ದು ನೋವಿನ ವಿಚಾರವಾದರೆ, ಅದಕ್ಕಿಂತಲೂ ನೋವಿನ ವಿಚಾರವೆಂದರೆ, ದಿಗ್ಗಜ ಕ್ರಿಕೆಟಿಗ ಯಾವುದೇ ಗೌರವಯುತ ವಿದಾಯವಿಲ್ಲದೇ ಗುಡ್‌ಬೈ ಹೇಳಿದ್ದು.
ಇದನ್ನೂ ಓದಿ:ಗಿಲ್ ಗೆ ಕ್ಯಾಪ್ಟನ್ ಪಟ್ಟ ಕಟ್ಟಿದ BCCI – ಕನ್ನಡಿಗ ರಾಹುಲ್ ಗೆ ಮೋಸ ಮಾಡಿದ್ರಾ?
ಈ ಬಾರಿ ಟಿ20 ವಿಶ್ವಕಪ್ ಸರ್‌ಪ್ರೈಸ್ ರಿಸಲ್ಟ್ ನೀಡಿರುವುದನ್ನೂ ನೀವು ಗಮನಿಸಿರಬಹುದು. ಇತ್ತೀಚಿನ ದಿನಗಳವರೆಗೂ ಕ್ರಿಕೆಟ್ ಶಿಶು ಅಂತಾನೇ ಪರಿಗಣಿಸಿರುವ ಆಫ್ಘಾನಿಸ್ತಾನ್ ತಂಡ ಮೊದಲ ಬಾರಿ ಟಿ20 ವಿಶ್ವಕಪ್ ಸೆಮೆಫೈನಲ್‌ಗೇರಿತ್ತು. ಶಾಕಿಂಗ್ ಅನ್ನುವಂತೆ ಏಕದಿನ ವಿಶ್ವಕಪ್‌ನ ಹಾಲಿ ಚಾಂಪಿಯನ್ ಬಲಿಷ್ಠ ಆಸ್ಟ್ರೇಲಿಯಾ ಸೂಪರ್ 8 ಹಂತದಲ್ಲೇ ಮನೆಗೆ ನಡೆದಿತ್ತು. ಆಸ್ಟ್ರೇಲಿಯಾ ಕ್ರಿಕೆಟ್ ಟೀಮ್ ಜೊತೆಗೆ ಆಸ್ಟ್ರೇಲಿಯಾದ ಕ್ರಿಕೆಟ್ ಫ್ಯಾನ್ಸ್ ಇದೇ ಶಾಕ್‌ನಲ್ಲಿರುವಾಗ್ಲೇ ಆಸ್ಟ್ರೇಲಿಯಾ ತಂಡದ ಲೆಜೆಂಡರಿ ಆಟಗಾರ ಡೇವಿಡ್ ವಾರ್ನರ್ ಕ್ರಿಕೆಟ್ ಗೆ ಗುಡ್‌ಬೈ ಹೇಳಿದ್ದಾರೆ. ಸ್ಫೋಟಕ ಆಟಗಾರನ ಆ ವಿದಾಯ ಒಂದು ರೀತಿಯಲ್ಲಿ ಆಸ್ಟ್ರೇಲಿಯಾ ಟೀಮ್ ಗೆ ಅಷ್ಟೇ ಅಲ್ಲ, ಇಡೀ ಆಸ್ಟ್ರೇಲಿಯಾ ಕ್ರಿಕೆಟ್ ಲೋಕಕ್ಕೆ ನೋವು ನೀಡಿದೆ. ಈ ರೀತಿಯ ವಿದಾಯವನ್ನು ಯಾರೂ ಬಯಸಿರಲಿಲ್ಲ. ಸ್ವತಃ ವಾರ್ನರ್ ಕೂಡಾ. ಯಾಕೆಂದರೆ, ಈ ವಿದಾಯ ಗೌರವಯುತವಾಗಿರಲಿಲ್ಲ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಈ ಬಾರಿಯ ಟಿ20 ವಿಶ್ವಕಪ್ ಫೈನಲ್ ಮುಗಿದ ಮೇಲೆ ಗುಡ್‌ಬೈ ಹೇಳಲು ಡೇವಿಡ್ ವಾರ್ನರ್ ಬಯಸಿದ್ದರು. ಆದ್ರೆ, ತನ್ನ ತಂಡವನ್ನು ಫೈನಲ್‌ವರೆಗೆ ಕೊಂಡೊಯ್ಯಲಾಗದ ನೋವಿನಲ್ಲೇ ವಾರ್ನರ್ ವಿದಾಯ ಹೇಳಿದ್ದಾರೆ.
ಆಸ್ಟ್ರೇಲಿಯಾ ಪರ 110 ಟಿ20 ಪಂದ್ಯಗಳನ್ನಾಡಿರುವ ಡೇವಿಡ್ ವಾರ್ನರ್, 3277 ರನ್ ಕಲೆಹಾಕಿದ್ದಾರೆ. ಒಂದು ಶತಕ ಹಾಗೂ 28 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಆಸೀಸ್ ಪರ 161 ಪಂದ್ಯಗಳಲ್ಲಿ 159 ಇನಿಂಗ್ಸ್ ಆಡಿರುವ ಡೇವಿಡ್ ವಾರ್ನರ್ 6,932 ರನ್ ಕಲೆಹಾಕಿದ್ದಾರೆ. 22 ಭರ್ಜರಿ ಶತಕ ಹಾಗೂ 33 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ಪರ 112 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 205 ಇನಿಂಗ್ಸ್ ಆಡಿರುವ ಅವರು 3 ದ್ವಿಶತಕ, 26 ಶತಕ ಹಾಗೂ 37 ಅರ್ಧಶತಕಗಳೊಂದಿಗೆ ಒಟ್ಟು 8,786 ರನ್ ಕಲೆಹಾಕಿದ್ದಾರೆ. ಈ ಮೂಲಕ ಮೂರು ಸ್ವರೂಪಗಳಲ್ಲೂ ಆಸ್ಟ್ರೇಲಿಯಾ ಪರ 3 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ಏಕೈಕ ಬ್ಯಾಟರ್ ಆಗಿದ್ದಾರೆ ಡೇವಿಡ್ ವಾರ್ನರ್.
ಸ್ಫೋಟಕ ಆಟಗಾರ ಡೇವಿಡ್ ವಾರ್ನರ್ ವಿದಾಯಕ್ಕೆ ಆಸ್ಟ್ರೇಲಿಯ ಮಾಜಿ ಕ್ಯಾಪ್ಟನ್ ರಿಕಿ ಪಾಂಟಿಂಗ್ ಭಾವಕರಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಪಾಂಟಿಂಗ್, ನಾನು ಮತ್ತೊಬ್ಬ ವಾರ್ನರ್ ಅನ್ನು ಹುಡುಕುವುದು ಸುಲಭದ ಕೆಲಸವಲ್ಲ. ಡೇವಿಡ್ ವಾರ್ನರ್ ಅವರ ನಿವೃತ್ತಿ ಘೋಷಣೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮೇಲೆ ಬಹಳ ದೊಡ್ಡ ಪರಿಣಾಮ ಬೀರಲಿದೆ ಎಂದಿದ್ದಾರೆ. ಡೇವಿಡ್ ವಾರ್ನರ್ ಅವರು 2024 ಜನವರಿಯಲ್ಲೇ ಒನ್ ಡೇ ಮತ್ತು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದರು. 2024ರ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಸಾಧನೆ ಮಾಡಿ ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಮ್ಮೆ ಚಾಂಪಿಯನ್ ಆಗುವ ಮಹದಾಸೆಯಲ್ಲಿದ್ದರು. ಟಿ20 ವಿಶ್ವಕಪ್‌ನಲ್ಲಿ ಗೆದ್ದು ಗೆಲುವಿನೊಂದಿಗೆ ವಿದಾಯ ಹೇಳಲು ಡೇವಿಡ್ ವಾರ್ನರ್ ಬಯಸಿದ್ದರು. ಆದರೆ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಸೂಪರ್ 8ರಲ್ಲಿ ಔಟ್ ಆಗಿದ್ದು, ಸೋಲಿನೊಂದಿಗೆ ಡೇವಿಡ್ ವಾರ್ನರ್‌ಗೆ ವಿದಾಯ ಹೇಳುವಂತಾಗಿದೆ.
ಡೇವಿಡ್ ವಾರ್ನರ್ ಅವರು ಸಾರ್ವಕಾಲಿಕ ಶ್ರೇಷ್ಟ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದರು. ವಾರ್ನರ್ ಅವರು ಆಸ್ಟ್ರೇಲಿಯಾ ತಂಡದಲ್ಲಿ ಬಾಹುಬಲಿ ಎಂದೇ ಖ್ಯಾತಿಗಳಿಸಿದ್ದರು. 2009 ಜನವರಿ 11ರಿಂದ ಆರಂಭವಾದ ಡೇವಿಡ್ ವಾರ್ನರ್ ಎಂಬ ಕಿಂಗ್ಸ್ ಟೌನ್‌ನ ಅತ್ಯದ್ಭುತ ಎಡಗೈ ಬ್ಯಾಟರ್‌ನ ಕ್ರಿಕೆಟ್ ಜೀವನ ಈಗ ಸೈಂಟ್ ಲೂಸಿಯಾದಲ್ಲಿ ಅಂತ್ಯವಾಗಿದೆ. ಆದರೆ, ಆ ಒಂದು ಮಾತು ವಾರ್ನರ್ ಹೇಳಿರುವುದು ಫ್ಯಾನ್ಸ್ ಸ್ವಲ್ಪ ಮಟ್ಟಿಗೆ ರಿಲ್ಯಾಕ್ಸ್ ಆಗಿದ್ದಾರೆ. ಜೊತೆಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗೂ ಸ್ವಲ್ಪ ಮಟ್ಟಿಗೆ ಟಾನಿಕ್ ಕೊಟ್ಟಂತಾಗಿದೆ. ಅದೇನೆಂದರೆ, ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ತಂಡಕ್ಕೆ ಸಹಾಯ ಬೇಕಿದ್ದಲ್ಲಿ ಆಯ್ಕೆಗೆ ಲಭ್ಯವಿರೋದಾಗಿ ವಾರ್ನರ್ ಹೇಳಿದ್ದಾರೆ. 37 ವರ್ಷದ ಆಸೀಸ್ ಹುಲಿ ಸಧ್ಯ ಕ್ರಿಕೆಟ್ ಲೋಕಕ್ಕೆ ಗುಡ್‌ಬೈ ಹೇಳಿದ್ದಾರೆ. ಐಪಿಎಲ್‌ನಲ್ಲಿ ವಾರ್ನರ್ ಸ್ಫೋಟಕ ಬ್ಯಾಟಿಂಗ್ ನೋಡುವ ಅವಕಾಶ ಇನ್ನೂ ಇದೆ.