ರಷ್ಯಾ-ಉಕ್ರೇನ್, ಹಮಾಸ್-ಇಸ್ರೇಲ್ ಯುದ್ಧಕ್ಕೆ ಜಗತ್ತೇ ಬೆಲೆ ತೆರಬೇಕಾ? -ವಿಶ್ವ ಆರ್ಥಿಕ ಹಿಂಜರಿತದ ಎಚ್ಚರಿಕೆ!

ರಷ್ಯಾ-ಉಕ್ರೇನ್, ಹಮಾಸ್-ಇಸ್ರೇಲ್ ಯುದ್ಧಕ್ಕೆ ಜಗತ್ತೇ ಬೆಲೆ ತೆರಬೇಕಾ? -ವಿಶ್ವ ಆರ್ಥಿಕ ಹಿಂಜರಿತದ ಎಚ್ಚರಿಕೆ!

ರಷ್ಯಾ-ಉಕ್ರೇನ್ ಯುದ್ಧ ಶುರುವಾಗಿ 2 ವರ್ಷಗಳಾಗ್ತಾ ಬಂತು. ಹಮಾಸ್-ಇಸ್ರೇಲ್ ಸಂಘರ್ಷಕ್ಕೆ ತಿಂಗಳು ತುಂಬಿತು. ಆದ್ರೆ ನಾಲ್ಕೂ ದೇಶಗಳು ಯುದ್ಧೋತ್ಸಾಹ ತೋರುತ್ತಿವೆಯೇ ಹೊರತು ಕದನವಿರಾಮದ ಬಗ್ಗೆ ಯೋಚನೆಯನ್ನೂ ಮಾಡ್ತಿಲ್ಲ. ಬೆಂಕಿಗೆ ತುಪ್ಪ ಸುರಿದಂತೆ ಇತರೆ ರಾಷ್ಟ್ರಗಳು ಶಸ್ತ್ರಾಸ್ತ್ರಗಳನ್ನೂ ಪೂರೈಸುತ್ತಿವೆ. ಆದ್ರೆ ಈ ಎರಡು ಯುದ್ಧಗಳು ಇಡೀ ಜಗತ್ತಿಗೆ ಮಾರಕವಾಗುತ್ತಿವೆ. ದೀರ್ಘಕಾಲದ ಈ ಬಿಕ್ಕಟ್ಟು ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಎಡೆ ಮಾಡಿಕೊಡುತ್ತಿದೆ ಎಂಬ ಆಘಾತಕಾಗಿ ಸತ್ಯವನ್ನ ಆರ್ಥಿಕ ತಜ್ಞರು ಹೊರಹಾಕಿದ್ದಾರೆ. ವಿಶ್ವದ ಅತಿದೊಡ್ಡ ಅಸೆಟ್ ಮ್ಯಾನೇಜರ್ ಎನಿಸಿದ ಅಮೆರಿಕದ ಬ್ಲ್ಯಾಕ್​ರಾಕ್​ನ ಸಿಇಒ ಲ್ಯಾರಿ ಫಿಂಕ್ ಮತ್ತು ಜೆಪಿ ಮಾರ್ಗನ್ ಸಂಸ್ಥೆಯ ಛೇರ್ಮನ್ ಜೇಮೀ ಡಿಮೋನ್ ಯುದ್ಧದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಯುದ್ಧ ನಡೆಯುತ್ತಿರೋದು ನಾಲ್ಕು ರಾಷ್ಟ್ರಗಳ ನಡುವೆ. ರಷ್ಯಾ-ಉಕ್ರೇನ್ ಮತ್ತು ಹಮಾಸ್-ಇಸ್ರೇಲ್ ನಡುವೆ. ಯಾವುದೋ ನಾಲ್ಕು ರಾಷ್ಟ್ರಗಳು ಯುದ್ಧ ಮಾಡಿಕೊಂಡ್ರೆ ಅದು ಜಗತ್ತಿನ ಮೇಲೆ ಹೇಗೆ ಪರಿಣಾಮ ಬೀರುತ್ತೆ ಅಂತಾ ನಿಮಗೆ ಅನ್ನಿಸಬಹುದು. ಆದ್ರೆ ಇಲ್ಲೇ ಇರೋದು ಟ್ವಿಸ್ಟ್. ಈಗ ಪ್ರಕೃತಿಯನ್ನೇ ನೋಡಿ. ಪ್ರಕೃತಿಯ ಸಕಲ ಜೀವಿಗಳಿಗೂ ಒಂದಕ್ಕೊಂದು ಲಿಂಕ್ ಇದೆ. ಅಂದ್ರೆ ಕೀಟಗಳನ್ನು ಜಿರಲೆ ತಿನ್ನುತ್ತೆ, ಜಿರಲೆಯನ್ನ ಕಪ್ಪೆ ತಿನ್ನುತ್ತದೆ, ಕಪ್ಪೆಯನ್ನ ಹಾವು, ಹಾಗೂ ಹಾವನ್ನ ಹದ್ದು ತಿನ್ನುತ್ತೆ ಅನ್ನೋ ಪಾಠ ಇತ್ತಲ್ಲ ಇದೂ ಹಾಗೆಯೇ.  ವಿಶ್ವದ ಎಲ್ಲಾ ದೇಶಗಳಿಗೂ ಒಂದಲ್ಲ ಒಂದು ರೀತಿ ಕನೆಕ್ಷನ್ ಇರುತ್ತೆ. ಎಲ್ಲೋ ಒಂದು ದೇಶದಲ್ಲಾಗುವ ವಿದ್ಯಾಮಾನಗಳು ಪ್ರಪಂಚವನ್ನೇ ಅಲುಗಾಡಿಸುವಷ್ಟರ ಮಟ್ಟಿಗೆ ಪರಿಣಾಮ ಬೀರುತ್ತವೆ. ಈಗ ರಷ್ಯಾ ಉಕ್ರೇನ್ ಯುದ್ಧ ಹಾಗೂ ಹಮಾಸ್ ಇಸ್ರೇಲ್ ಕದನವೂ ಅಂಥದ್ದೇ ಪರಿಸ್ಥಿತಿ ಸೃಷ್ಟಿಸುತ್ತೆ ಅನ್ನೋದು ತಜ್ಞರ ಆತಂಕ. 2020ರ ಆರಂಭದಲ್ಲಿ ಕೊವಿಡ್ ವೈರಸ್ ನಿಂದ ಇಡೀ ಜಗತ್ತೇ ಮುಗ್ಗರಿಸಿದೆ. ತಿಂಗಳುಗಟ್ಟಲೆ ಲಾಕ್​ಡೌನ್ ಮಾಡಿ ಆರ್ಥಿಕವಾಗಿ ಬಹಳಷ್ಟು ಹಿಂದಕ್ಕೆ ಹೋಗಿದೆ. ಇನ್ನೇನು ಎಲ್ಲವೂ ಯಥಾಸ್ಥಿತಿಗೆ ಬರುತ್ತಿದೆ ಅನ್ನುವಷ್ಟರಲ್ಲೇ ಎರಡು ಯುದ್ಧಗಳು ನಡೆಯುತ್ತಿವೆ. ಯುದ್ಧಗಳು ಕೂಡ ಒಂದು ರೀತಿಯ ಸಾಂಕ್ರಾಮಿಕ ರೋಗದಂತೆಯೇ. ಇದೇ ಕಾರಣಕ್ಕೆ ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ವಿಶ್ವದ ಅತಿದೊಡ್ಡ ಅಸೆಟ್ ಮ್ಯಾನೇಜರ್ ಎನಿಸಿದ ಬ್ಲ್ಯಾಕ್​ರಾಕ್​ನ ಸಿಇಒ ಲ್ಯಾರಿ ಫಿಂಕ್ ಮತ್ತು ಜೆಪಿ ಮಾರ್ಗನ್ ಸಂಸ್ಥೆಯ ಛೇರ್ಮನ್ ಜೇಮೀ ಡಿಮೋನ್ ಹೇಳಿರುವ ಅಂಶ ಏನು ಅನ್ನೋ ಬಗ್ಗೆ ಇಲ್ಲಿದೆ ಮಾಹಿತಿ.

ಇದನ್ನೂ ಓದಿ : ಹಮಾಸ್‌ – ಇಸ್ರೇಲ್‌ ದಾಳಿಯನ್ನೇ ಲಾಭ ಮಾಡಿಕೊಂಡ ಹುಚ್ಚುದೊರೆ! – ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದ್ಯಾ ಉತ್ತರ ಕೊರಿಯಾ?

ಎರಡು ಯುದ್ಧಗಳಿಂದಾಗಿ ವಿಶ್ವ ಆರ್ಥಿಕ ಹಿಂಜರಿತ ಉಂಟಾಗುವ ಆತಂಕ ಎದುರಾಗಿದೆ ಎಂದು ಜಾಗತಿಕ ಹಣಕಾಸು ತಜ್ಞರು ಆತಂಕ ಹೊರ ಹಾಕಿದ್ದಾರೆ. 2022ರ ಫೆಬ್ರವರಿ 24ರಂದು ರಷ್ಯಾ ಉಕ್ರೇನ್ ಯುದ್ಧ ಆರಂಭವಾಗಿತ್ತು. ಇನ್ನು 2023ರ ಅಕ್ಟೋಬರ್ 7ರಿಂದ ಹಮಾಸ್ ಮತ್ತು ಇಸ್ರೇಲ್ ನಡುವೆ ಕದನ ಶುರುವಾಗಿದೆ. ಹಾಗಂತ ಈ ಎರಡು ಯುದ್ಧಗಳು ಕ್ಷಿಪ್ರವಾಗಿ ನಡೆದು ಮುಗಿದು ಹೋಗುವಂತಹವಲ್ಲ. ದೀರ್ಘಕಾಲ ಇರಲಿರುವ ಇದೇ ಬಿಕ್ಕಟ್ಟು ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಕಾರಣವಾಗುತ್ತೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದಾಗಲೇ ಶಾಂತಿಯ ದಾರಿ ತಪ್ಪಿತ್ತು. ಜಾಗತಿಕ ರಾಜಕೀಯ ವಿದ್ಯಮಾನಗಳು ನಮ್ಮ ಜೀವನವನ್ನು ನಿರ್ದೇಶಿಸುತ್ತವೆ. ಆದ್ರೆ ಯುದ್ಧದಿಂದಾಗಿ ವಿಶ್ವಾದ್ಯಂತ ಭರವಸೆ ಕಡಿಮೆ ಆಗುತ್ತಿದೆ, ಭಯ ಹೆಚ್ಚುತ್ತಿದೆ. ಧೀರ್ಘಕಾಲದ ಭಯ ಹೆಚ್ಚಾದಾಗ ಜನರು ಖರ್ಚು ಮಾಡಲು ಹಿಂದೇಟು ಹಾಕುತ್ತಾರೆ ಇದ್ರಿಂದ ಆರ್ಥಿಕ ಹಿಂಜರಿತ ಉಂಟಾಗುತ್ತದೆ. ಇದೇ ರೀತಿ ಭಯ ಹೆಚ್ಚುತ್ತಿದ್ದರೆ ಐರೋಪ್ಯ ಹಿಂಜರಿತ ಮತ್ತು ಅಮೆರಿಕದ ಹಿಂಜರಿತ ಹೆಚ್ಚಳವಾಗುತ್ತದೆ. 1938ರ ಬಳಿಕ ಜಗತ್ತು ಈಗ ಅತಿದೊಡ್ಡ ಗಂಭೀರ ಬಿಕ್ಕಟ್ಟು ಎದುರಿಸುತ್ತಿದೆ ಎಂಬ ಆತಂಕ ಹೊರಹಾಕಿದ್ದಾರೆ.

ಹಣಕಾಸು ತಜ್ಞರು ಹೊರ ಹಾಕಿರುವ ಇದೇ ವಿಚಾರ ಈಗ ಆತಂಕಕ್ಕೆ ಕಾರಣವಾಗಿದೆ. ಕೊವಿಡ್ 19 ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳುತ್ತಿರುವ ಜಾಗತಿಕ ಆರ್ಥಿಕತೆಯ ಮೇಲೆ ರಷ್ಯಾ-ಉಕ್ರೇನ್ ಯುದ್ಧ ಸಾಕಷ್ಟು ಪ್ರಭಾವ ಬೀರಿದೆ. ಪ್ರಮುಖ ಇಂಧನ ಉತ್ಪಾದಕ ರಷ್ಯಾ ಮತ್ತು ಪ್ರಮುಖ ಕೃಷಿ ಉತ್ಪಾದಕ ಉಕ್ರೇನ್ ಒಳಗೊಂಡಿರುವ ಯುದ್ಧವು ಇಂಧನ ಬೆಲೆ, ಜಾಗತಿಕ ಆಹಾರದ ಕೊರತೆ ಮತ್ತು ಹಣದುಬ್ಬರಕ್ಕೆ ಕಾರಣವಾಗಿದೆ. ಜಾಗತಿಕ ಬೆಳವಣಿಗೆಯು 2022 ರಲ್ಲಿ 3.5 ಪ್ರತಿಶತದಷ್ಟಿತ್ತು. ಆದ್ರೆ 2023 ರಲ್ಲಿ 3 ಪ್ರತಿಶತಕ್ಕೆ ಮತ್ತು 2024 ರಲ್ಲಿ 2.9 ಪ್ರತಿಶತಕ್ಕೆ ನಿಧಾನವಾಗುತ್ತದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಅಂದ್ರೆ IMF ಅಂದಾಜಿಸಿದೆ, ಇದು ಐತಿಹಾಸಿಕ ಸರಾಸರಿಯಾದ 3.8 ಶೇಕಡಾಕ್ಕಿಂತ ಕಡಿಮೆಯಾಗಲಿದೆ. ಇದು ಹೀಗೇ ಮುಂದುವರಿದ್ರೆ ಗ್ಲೋಬಲ್ ರಿಸೆಷನ್ ಶುರುವಾಗುತ್ತದೆ ಅನ್ನೋ ಭಯ ಇದೆ. ಅಷ್ಟಕ್ಕೂ ಆರ್ಥಿಕ ಹಿಂಜರಿತ ಎಂದರೇನು..? ಜಿಡಿಪಿಗೂ ಇದಕ್ಕೂ ಲಿಂಕ್ ಇದ್ಯಾ..? ಇದರ ಎಫೆಕ್ಟ್ ಏನು.? ಇದನ್ನ ಸರಿದೂಗಿಸುವುದು ಹೇಗೆ ಅನ್ನೋದನ್ನೂ ನಾವಿಲ್ಲಿ ತಿಳಿದುಕೊಳ್ಳಬೇಕಾಗುತ್ತೆ.

ಯಾವುದೇ ದೇಶದ ಜಿಡಿಪಿ ಸತತವಾಗಿ 2 ತ್ರೈಮಾಸಿಕಗಳು ಅಂದ್ರೆ 6 ತಿಂಗಳು ನಿರಂತರವಾಗಿ ಕುಸಿಯುತ್ತಲೇ ಸಾಗಿದರೆ ಆರ್ಥಿಕ ಹಿಂಜರಿತ ಶುರು ಎಂದರ್ಥ. ಆರ್ಥಿಕ ಹಿಂಜರಿತ ಶುರುವಾದರೆ ಆ ದೇಶದ ಜಿಡಿಪಿ ಕೂಡ ಕುಸಿದಿದೆ ಎಂದೇ ಅರ್ಥ. ಜಿಡಿಪಿ ಅಂದರೆ ಗ್ಯಾಸ್‌ ಡೊಮೆಸ್ಟಿಕ್ ಪ್ರೊಡಕ್ಷನ್ ಅಥವಾ ಒಟ್ಟು ರಾಷ್ಟ್ರೀಯ ಉತ್ಪನ್ನ ಎಂದರ್ಥ. ಒಂದು ದೇಶದ ಅರ್ಥವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪತ್ತಿಯಾಗುವ ಎಲ್ಲಾ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯಮಾಪನದ ಮೇಲೆ ಈ ಜಿಡಿಪಿ ಅವಲಂಬಿತವಾಗಿರುತ್ತೆ. ಕೃಷಿ ಉತ್ಪನ್ನ, ಕೈಗಾರಿಕಾ ಉತ್ಪನ್ನ, ಬ್ಯಾಂಕಿಂಗ್ & ಹಣಕಾಸು ವಲಯದಲ್ಲಿನ ವಹಿವಾಟು, ಜನರ ಸಂಬಳ, ಆಮದು, ರಫ್ತು ಎಲ್ಲವೂ ಸೇರಿ ಲೆಕ್ಕ ಹಾಕಿದಾಗ ಜಿಡಿಪಿ ಎಷ್ಟಿದೆ ಎನ್ನುವ ಲೆಕ್ಕ ಸಿಗುತ್ತದೆ. ಆದರೆ ಆರ್ಥಿಕ ಹಿಂಜರಿತ ಉಂಟಾದಾಗ, ಜನ ಖರ್ಚು ಮಾಡೋದನ್ನೇ ಕಡಿಕೆ ಮಾಡುತ್ತಾರೆ. ದುಬಾರಿ ಖರ್ಚುಗಳಾದ ಮನೆ, ಕಟ್ಟಡಗಳನ್ನ ನಿರ್ಮಾಣ ಮಾಡಲ್ಲ. ಕಾರು ಸೇರಿದಂತೆ ಇತರೆ ವಾಹನಗಳ ಖರೀದಿಯಲ್ಲೂ ಕುಸಿತವಾಗುತ್ತೆ. ಹಿಂಜರಿತ ಮತ್ತಷ್ಟು ಹೆಚ್ಚಾದಾಗ ತಮ್ಮ ದಿನಬಳಕೆಯ ವಸ್ತುಗಳನ್ನ ಖರೀದಿಸಲೂ ಜನ ಹಿಂದೇಟು ಹಾಕುತ್ತಾರೆ. ಹಣ ಖರ್ಚು ಮಾಡಲು ಜನ ಹಿಂದೇಟು ಹಾಕಿದಾಗ ಹಣದ ವಹಿವಾಟು ಅನಿವಾರ್ಯವಾಗಿ ಕಡಿಮೆ ಆಗುತ್ತೆ. ಯಾವಾಗ ದುಡ್ಡಿನ ಹರಿವು ಕಡಿಮೆಯಾಗುತ್ತೋ ಆಗ ಕಂಪನಿಗಳ ಉತ್ಪನ್ನಗಳಿಗೆ ಡಿಮ್ಯಾಂಡ್ ಇರೋದಿಲ್ಲ. ಅಂತಾ ಟೈಮಲ್ಲಿ ಕಂಪನಿಗಳ ಉತ್ಪನ್ನಗಳು ಮಾರಾಟ ಆಗಲ್ಲ, ಅನಿವಾರ್ಯವಾಗಿ ಉತ್ಪಾದನೆಯನ್ನ ಕಮ್ಮಿ ಮಾಡಬೇಕಾಗುತ್ತೆ. ಉತ್ಪಾದನೆ ಕುಸಿತವಾದ ಮೇಲೆ ಉದ್ಯೋಗಿಗಳು ಯಾಕೆ ಅಂತಾ ಕಂಪನಿಗಳು ಕೆಲಸಗಾರರನ್ನ ಕೆಲಸದಿಂದ ಕಿತ್ತು ಹಾಕುತ್ತಾರೆ. ಆದ್ರೆ ಮತ್ತದೇ ಆದಾಯವಿಲ್ಲದೆ ಜನ ಖರ್ಚು ಮಾಡಲು ಹಿಂದೇಟು ಹಾಕುತ್ತಾರೆ. ಜನ ಹೆಚ್ಚೆಚ್ಚು ನಿರುದ್ಯೋಗಿಗಳಾಗೋದ್ರಿಂದ ದುಡ್ಡಿನ ಓಡಾಟವೂ ಕಡಿಮೆಯಾಗುತ್ತದೆ. ಆಗ ಆಟೋಮೆಟಿಕಲಿ ಆರ್ಥಿಕ ಹಿಂಜರಿತ ಶುರುವಾಗುತ್ತದೆ.

ಇನ್ನು ಈ ಆರ್ಥಿಕ ಹಿಂಜರಿತವನ್ನ ಕಂಟ್ರೋಲ್ ಗೆ ತರೋದು ಜನರ ಕೈಯಲ್ಲೇ ಇದೆ. ತಮ್ಮ ಖರ್ಚು ವೆಚ್ಚಗಳನ್ನು ಆದ್ಯತೆಯ ಅನುಸಾರ ವಿಂಗಡಿಸಬೇಕಾಗುತ್ತದೆ. ಮಾಸಿಕ ಬಜೆಟ್‌ ಮಾಡಿಕೊಂಡ್ರೆ ಇನ್ನೂ ಒಳ್ಳೆಯದು. ತುಂಬಾ ಖರ್ಚು ಮಾಡಿ ಮಾಡುವ ಕೆಲವೊಂದು ಕಾರ್ಯಕ್ರಮಗಳಿಗೆ ಕಡಿವಾಣ ಹಾಕಬಹುದು. ಬ್ಲೂಮ್‌ ಬರ್ಗ್‌ ಸಮೀಕ್ಷೆ ಪ್ರಕಾರ ಸದ್ಯದ ಮಟ್ಟಿಗೆ ಭಾರತದಲ್ಲಿ ಆರ್ಥಿಕ ಹಿಂಜರಿತದ ಸಾಧ್ಯತೆ ಕಡಿಮೆ. ಯಾಕಂದ್ರೆ ಭಾರತವು ಕೊವಿಡ್ ‌19 ಬಿಕ್ಕಟ್ಟಿನಂತಹ ದೊಡ್ಡ ಸವಾಲನ್ನೇ ಎದುರಿಸಿದೆ. ಜತೆಗೆ ಸರ್ಕಾರ ಮತ್ತು ಆರ್‌ಬಿಐ ಹಲವು ಆರ್ಥಿಕ ಸುಧಾರಣೆಯ ಕ್ರಮಗಳನ್ನು ಕೈಗೊಂಡಿದ್ದು, ಇತರ ಹಲವು ದೇಶಗಳಿಗೆ ಹೋಲಿಸಿದರೆ ಭಾರತದ ಸ್ಥಿತಿಗತಿ ಉತ್ತಮವಾಗಿದೆ. ಆದರೆ ಇತರೆ ರಾಷ್ಟ್ರಗಳ ನಡುವಿನ ಯುದ್ಧ ಪರಿಣಾಮ ಬೀರಬಹುದು. ಇನ್ನು ಬ್ಲೂಮ್‌ಬರ್ಗ್ ಎಕನಾಮಿಕ್ಸ್‌ ವರದಿ ಹಮಾಸ್ ಇಸ್ರೇಲ್ ಯುದ್ಧದ ಮೂರು ಸನ್ನಿವೇಶಗಳ ಅಡಿಯಲ್ಲಿ ಜಾಗತಿಕ ಬೆಳವಣಿಗೆ ಮತ್ತು ಹಣದುಬ್ಬರದ ಮೇಲೆ ಅದರ ಸಂಭವನೀಯ ಪರಿಣಾಮವನ್ನು ತಿಳಿಸಿದೆ.

ಯುದ್ಧವು ರಷ್ಯಾ ಉಕ್ರೇನ್ ಮತ್ತು ಇಸ್ರೇಲ್ ಪ್ಯಾಲೆಸ್ತೀನ್ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರಬೇಕು. ಗಾಜಾ ಮತ್ತು ವೆಸ್ಟ್ ಬ್ಯಾಂಕ್‌ ಗೆ ಯುದ್ಧ ಸೀಮಿತವಾಗಿದ್ರೆ ಪರಿಣಾಮವೂ ಸೀಮಿತವಾಗಿಯೇ ಇರುತ್ತೆ. ತೈಲ ಬೆಲೆಗಳು, ಹಣದುಬ್ಬರ ಅಥವಾ ಬೆಳವಣಿಗೆಯಲ್ಲಿ ಯಾವುದೇ ತರಹ ಗಮನಾರ್ಹ ಬದಲಾವಣೆ ಆಗಲ್ಲ. ಗಾಜಾ, ವೆಸ್ಟ್ ಬ್ಯಾಂಕ್, ಸಿರಿಯಾ ಮತ್ತು ಲೆಬನಾನ್‌ ಗೆ ಯುದ್ಧ ಹಬ್ಬಿದರೆ ನಿಜಕ್ಕೂ ಪರಿಣಾಮ ಗಂಭೀರವಾಗಿರುತ್ತೆ. ಪಶ್ಚಿಮ ಏಷ್ಯಾದಲ್ಲಿ ಅಶಾಂತಿಯ ಸಂದರ್ಭದಲ್ಲಿ ತೈಲ ಬೆಲೆಗಳು ಹೆಚ್ಚಾಗಬಹುದು. ಇದರಿಂದ ಹಣದುಬ್ಬರವು 1.2 ಪಾಯಿಂಟ್‌ ಏರಿಕೆಯಾಗಬಹುದು ಹಾಗೂ ಜಿಡಿಪಿ 1 ಪಾಯಿಂಟ್ ಕುಸಿತ ಕಾಣಬಹುದು. ಕೊವಿಡ್ ನಂತರ ಈಗಾಗಲೇ ಜಗತ್ತು ನಿಧಾನಗತಿಯಲ್ಲಿ ಸಾಗುತ್ತಿದೆ. ಅಮೆರಿಕದ ಆರ್ಥಿಕತೆಯೂ ಮುಂದಿನ ದಿನಗಳಲ್ಲಿ ಕುಸಿತ ಕಾಣಬಹುದು ಎಂದು  ಬ್ಲೂಮ್‌ಬರ್ಗ್ ಎಕನಾಮಿಕ್ಸ್‌ ಎಚ್ಚರಿಕೆ ನೀಡಿದೆ. ಕೊವಿಡ್, ಯುದ್ಧ ಸೇರಿದಂತೆ ಈಗಾಗಲೇ ನಾನಾ ಕಾರಣಗಳಿಂದ ಹಣದುಬ್ಬರ ಅಥವಾ ಬೆಲೆ ಏರಿಕೆಯಾಗುತ್ತಿದೆ.  ಈಗಾಗಲೇ ಜಗತ್ತಿನ ನಾನಾ ರಾಷ್ಟ್ರಗಳಲ್ಲಿ ಹಣದುಬ್ಬರ ಹೆಚ್ಚುತ್ತಿದ್ದು, ಸೆಂಟ್ರಲ್‌ ಬ್ಯಾಂಕ್‌ಗಳು ಬಡ್ಡಿ ದರ ಏರಿಸಿದರೂ, ನಿರೀಕ್ಷಿತ ಮಟ್ಟದಲ್ಲಿ ಹಣದುಬ್ಬರ ಇಳಿಕೆಯಾಗುತ್ತಿಲ್ಲ. ಇದು ಆರ್ಥಿಕ ಹಿಂಜರಿತದ ಕಳವಳಕ್ಕೆ ಕಾರಣವಾಗಿದೆ. ದಿನ ನಿತ್ಯ ಬಳಕೆಯ ದಿನಸಿ ಪದಾರ್ಥಗಳಿಂದ ಆರಂಭಿಸಿ ಬಹುತೇಕ ವಸ್ತು ಮತ್ತು ಸೇವೆಗಳು ಹೆಚ್ಚುತ್ತಿರುವುದು ಇದೇ ಕಾರಣಕ್ಕೆ. ಸದ್ಯ ರಷ್ಯಾ ಉಕ್ರೇನ್ ಯುದ್ಧ ಹಾಗೂ ಇಸ್ರೇಲ್ ಹಮಾಸ್ ನಡುವಿನ ಕದನ ಭಾರತದ ಮೇಲೆ ಹಲವು ಪರಿಣಾಮಗಳನ್ನ ಬೀರುತ್ತದೆ.

ರಷ್ಯಾ ಮತ್ತು ಇರಾಕ್ ನಂತರ ಸೌದಿ ಅರೇಬಿಯಾ ಭಾರತಕ್ಕೆ ಕಚ್ಚಾ ತೈಲದ ಮೂರನೇ ಅತಿದೊಡ್ಡ ಪೂರೈಕೆದಾರ ರಾಷ್ಟ್ರವಾಗಿದೆ. ಸಂಸ್ಕರಿಸಿದ ಕಚ್ಚಾತೈಲವನ್ನು ಭಾರತ ಇಸ್ರೇಲ್‌ ಗೆ ಭೂಮಾರ್ಗದಲ್ಲಿ ಮತ್ತು ಸಮುದ್ರಮಾರ್ಗದಲ್ಲಿ ಸಪ್ಲೈ ಮಾಡುತ್ತೆ. ಉತ್ಪನ್ನಗಳನ್ನು ಸಾಗಿಸಲು ಹೆಚ್ಚಿನ ಮೊತ್ತದ ವಿಮೆಯನ್ನು ಮಾಡಿಸಬೇಕಾಗುತ್ತದೆ. ಇದರಿಂದ ಇಸ್ರೇಲ್‌ ಗೆ ರಫ್ತಾಗುವ ತೈಲೋತ್ಪನ್ನಗಳ ಬೆಲೆಯಲ್ಲಿ ಏರಿಕೆಯಾಗಲಿದೆ. ಆಗ  ಇಸ್ರೇಲ್ ಭಾರತದ ತೈಲೋತ್ಪನ್ನಗಳನ್ನು ಖರೀದಿಸಲು ಹಿಂದೇಟು ಹಾಕಬಹುದು. ಇದರಿಂದ ಭಾರತದ ರಫ್ತು ಪ್ರಮಾಣವು ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಇದರಿಂದ ತೈಲ ಮತ್ತು ಅನಿಲ ಪೂರೈಕೆ ಮತ್ತು ಬೆಲೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೆ ಯುದ್ಧದ ದೊಡ್ಡ ಪರಿಣಾಮ ಎಂದರೆ  ಭಾರತ-ಮಧ್ಯಪ್ರಾಚ್ಯ-ಯುರೋಪ್ ನಡುವಿನ ಆರ್ಥಿಕ ಕಾರಿಡಾರ್ ಒಪ್ಪಂದ. ಅರಬ್ ಜಗತ್ತು ಇಸ್ರೇಲ್ ವಿರುದ್ಧ ಒಗ್ಗೂಡಿದರೆ, ಭಾರತದ ಮೇಲೂ ಪರಿಣಾಮ ಬೀರುತ್ತದೆ. ಹೆಚ್ಚುತ್ತಿರುವ ತೈಲ ಬೆಲೆಗಳ ಪರಿಣಾಮವಾಗಿ ದೇಶದ ವ್ಯಾಪಾರದಲ್ಲೂ ಕೊರತೆ ಉಂಟಾಗುತ್ತದೆ. ಸರಕುಗಳ ರಫ್ತಿನಲ್ಲಿ ನಿಧಾನಗತಿ ಕಂಡುಬಂದರೆ ಸ್ಟಾಕ್ ಮಾರುಕಟ್ಟೆಗಳಲ್ಲಿ ಕುಸಿತ ಉಂಟಾಗಿ ಅನೇಕ ಹೂಡಿಕೆದಾರರು ತಮ್ಮ ಹಣವನ್ನು ಉದಯೋನ್ಮುಖ ಮಾರುಕಟ್ಟೆಗಳಿಂದ ಹಿಂಪಡೆಯುವ ಸಾಧ್ಯತೆ ಇರುತ್ತದೆ. ಸದ್ಯದ ಮಟ್ಟಿಗೆ ಯುದ್ಧವು ಆಯಾ ದೇಶಗಳಿಗೆ ಸೀಮಿತವಾಗಿದೆ. ಆದರೆ ಇಸ್ರೇಲ್ ಗಾಜಾ ಯುದ್ಧ ಮಾತ್ರ ಇತರೆ ರಾಷ್ಟ್ರಗಳಿಗೂ ಹಬ್ಬುವ ಸಾಧ್ಯತೆ ಇದೆ. ಮತ್ತೊಂದೆಡೆ ಭಾರತ ಮತ್ತು ಇಸ್ರೇಲ್‌ ನಡುವೆ ವ್ಯಾಪಾರ ಸಂಬಂಧ ಉತ್ತಮವಾಗಿದೆ. ಹಲವಾರು ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಎರಡೂ ದೇಶಗಳು ಸಂಬಂಧ ಹೊಂದಿವೆ. ಇದೀಗ ಹಮಾಸ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯಿಂದ ಭಾರತದ ವ್ಯಾಪಾರೋದ್ಯಮಕ್ಕೂ ಹೊಡೆತ ತಟ್ಟಲಿದೆ. ಒಟ್ಟಾರೆ ನಾಲ್ಕು ದೇಶಗಳ ನಡುವಿನ ಯುದ್ಧ ವಿಶ್ವ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡುತ್ತಿರೊದಂತೂ ಸುಳ್ಳಲ್ಲ.

Shantha Kumari