ಏಕೈಕ ಹೆಣ್ಣು ಮಗುವಿನ ಪೋಷಕರಿಗೆ ಬಂಪರ್ – ಸರ್ಕಾರದಿಂದ ಸಿಗುತ್ತೆ ಲಕ್ಷಾಂತರ ರೂಪಾಯಿ ಪ್ರೋತ್ಸಾಹ ಧನ!
ದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆ ಪಿಡುಗು ಇನ್ನೂ ನಿಂತಿಲ್ಲ. ಹೆಣ್ಣು ಭ್ರೂಣ ಎಂದು ಗೊತ್ತಾಗುತ್ತಿದ್ದಂತೆ ಅದನ್ನು ಹತ್ಯೆ ಮಾಡುತ್ತಿದ್ದಾರೆ. ಹೆಣ್ಣು ಭ್ರೂಣ ಹತ್ಯೆ ಪಿಡುಗನ್ನು ನಿಲ್ಲಿಸುವ ನಿಟ್ಟಿನಲ್ಲಿ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ. ಇದೀಗ ಹಿಮಾಚಲ ಪ್ರದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆ ಪಿಡುಗನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಅಲ್ಲಿನ ಸರ್ಕಾರ ಹೊಸ ಯೋಜನೆಯೊಂದನ್ನು ಜನರಿಗೆ ಪರಿಚಯಿಸಿದೆ. ಏಕೈಕ ಹೆಣ್ಣು ಮಗುವಿನ ಪೋಷಕರಿಗೆ 2 ಲಕ್ಷ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಘೋಷಿಸಿದೆ.
ಈ ಬಗ್ಗೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದ ಸಿಂಗ್ ಸುಖು ಮಾಹಿತಿ ನೀಡಿದ್ದಾರೆ. ಇಂದಿರಾ ಗಾಂಧಿ ಬಾಲಿಕಾ ಸುರಕ್ಷಾ ಯೋಜನೆಯಡಿ ಪ್ರೋತ್ಸಾಹಧನವನ್ನು ಈಗಿರುವ 35,000 ದಿಂದ 2 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಸುಖು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಪೂರ್ಣ ನಿದ್ರೆಗೆ ಜಾರಿದ ವಿಕ್ರಮ್, ಪ್ರಜ್ಞಾನ್ – ಚಂದ್ರಯಾನ – 3 ಕಾರ್ಯಾಚರಣೆ ಸಂಪೂರ್ಣ ಸ್ಥಗಿತ?
ಒಂದು ಹೆಣ್ಣು ಮಗು ಜನಿಸಿದ ನಂತರ ಕುಟುಂಬ ಯೋಜನೆ ಅಳವಡಿಸಿಕೊಳ್ಳುವ ಪೋಷಕರಿಗೆ 2 ಲಕ್ಷ, ಎರಡು ಹೆಣ್ಣು ಮಕ್ಕಳ ನಂತರ ಇನ್ನೊಂದು ಮಗು ಬೇಡ ಎಂದು ನಿರ್ಧರಿಸುವವರಿಗೆ 1 ಲಕ್ಷ ನೀಡಲಾಗುವುದು ಎಂದು ಸುಖು ತಿಳಿಸಿದ್ದಾರೆ.
2018-20ರ ಮಾದರಿ ನೋಂದಣಿ ವ್ಯವಸ್ಥೆಯ ಮಾಹಿತಿಯ ಪ್ರಕಾರ, ಹಿಮಾಚಲ ಪ್ರದೇಶದಲ್ಲಿ ಲಿಂಗ ಅನುಪಾತವು 950ರಷ್ಟಿದೆ. ಇದು ದೇಶದ ಮೂರನೇ ಅತ್ಯುತ್ತಮ ಸಂಖ್ಯೆಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ತಮ್ಮ ಸರ್ಕಾರವು 21 ವರ್ಷ ವಯಸ್ಸಿನ ನಂತರ ಮದುವೆಯಾಗುವ ಹುಡುಗಿಯರಿಗೆ ಪ್ರೋತ್ಸಾಹ ಧನವನ್ನು ನೀಡುವ ಬಗ್ಗೆಯೂ ಯೋಚಿಸುತ್ತಿದೆ ಎಂದು ಅವರು ಹೇಳಿದರು.