ಕೇರಳದಲ್ಲಿ ಉಲ್ಬಣಗೊಳ್ಳುತ್ತಿದೆ ಡೆಡ್ಲಿ ನಿಫಾ ವೈರಸ್ – ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ತೆರೆದ  ಚಿಕ್ಕಮಗಳೂರು ಜಿಲ್ಲಾಡಳಿತ

ಕೇರಳದಲ್ಲಿ ಉಲ್ಬಣಗೊಳ್ಳುತ್ತಿದೆ ಡೆಡ್ಲಿ ನಿಫಾ ವೈರಸ್ – ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ತೆರೆದ  ಚಿಕ್ಕಮಗಳೂರು ಜಿಲ್ಲಾಡಳಿತ

ಕೇರಳದಲ್ಲಿ ನಿಫಾ ವೈರಸ್ ಹಾವಳಿ ಹೆಚ್ಚಾಗುತ್ತಿದ್ದು ಈಗಾಗಲೇ ಮೂವರು ಮೃತಪಟ್ಟಿದ್ದಾರೆ. 6 ಜನರಲ್ಲಿ ಸೋಂಕು ದೃಢಪಟ್ಟಿದ್ದು 9 ವರ್ಷದ ಬಾಲಕನ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೈಸೂರು, ಚಾಮರಾಜನಗರ ಮಾತ್ರವಲ್ಲದೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲೂ ಭೀತಿ ಶುರುವಾಗಿದೆ. ಚಿಕ್ಕಮಗಳೂರಿನಲ್ಲಿ ನಿಫಾ ವಾರ್ಡ್ ತೆರೆಯಲಾಗಿದೆ.

ಇದನ್ನೂ ಓದಿ : ಕೇರಳದಲ್ಲಿ ನಿಫಾ ವೈರಸ್ ಆತಂಕ – ಕರ್ನಾಟಕ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

ನಿಫಾ ವೈರಸ್ ಉಲ್ಬಣಗೊಳ್ಳುತ್ತಿರುವುದರಿಂದ ಗಡಿಭಾಗದ ಜಿಲ್ಲೆಗಳ ಜಿಲ್ಲಾಡಳಿತಗಳು ಕಟ್ಟೆಚ್ಚರ ವಹಿಸಿದ್ದು, ಮೈಸೂರಿಗೆ ಆಗಮಿಸುವ ಕೇರಳಿಗರ ಮೇಲೆ ನಿಗಾ ಇರಿಸಲಾಗಿದೆ. ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ನಿಫಾ ವಾರ್ಡ್ ತೆರೆದಿದೆ. ಒಟ್ಟು ಆರು ಹಾಸಿಗೆಯ ವಾರ್ಡ್ ತೆರೆದು ಸಿದ್ಧತೆ ಮಾಡಿಕೊಂಡಿದೆ. ಕೇರಳ ರಾಜ್ಯದ ಪ್ರವಾಸಿಗರು ದಿನ ನಿತ್ಯ ಪ್ರವಾಸಿತಾಣಗಳಿಗೆ ಆಗಮಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಎಸ್​ಪಿ ಕಚೇರಿ ಸಮೀಪದ ನಗರಸಭೆ ಆವರಣದ ಮರಗಳಲ್ಲಿರುವ ನೂರಾರು ಸಂಖ್ಯೆಯಲ್ಲಿ ಬಾವಲಿಗಳು ವಾಸಿಸುತ್ತಿವೆ. ಹೀಗಾಗಿ ಚಿಕ್ಕಮಗಳೂರು ನಗರದ ಹೃದಯ ಭಾಗದಲ್ಲಿ ನಿಫಾ ವೈರಸ್ ಹರಡುವ ಆತಂಕ ಎದುರಾಗಿದೆ.

ಕೇರಳದಲ್ಲಿ ನಿಫಾ ವೈರಸ್ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಭಯಭೀತರಾಗದೆ ಎಚ್ಚರಿಕೆ ವಹಿಸುವಂತೆ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚಿಸಿದ್ದಾರೆ. ನಿಫಾ ವೈರಸ್ ನಿಯಂತ್ರಣ ಮತ್ತು ಬರ ಘೋಷಣೆಯ ಕುರಿತು ಚರ್ಚಿಸಲು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಾಸ್ತವಿಕ ಸಭೆಯಲ್ಲಿ ಸೂಚನೆ ನೀಡಿದರು. ನಂಜನಗೂಡು ಹಾಗೂ ಹೆಚ್.ಡಿ.ಕೋಟೆ ತಾಲೂಕಿನ ಬಾವಲಿಯಲ್ಲಿ ಕರ್ನಾಟಕ-ಕೇರಳ ಗಡಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಡಿಸಿ ಸಾರ್ವಜನಿಕರಿಗೆ ಭರವಸೆ ನೀಡಿದರು. ಕೇರಳದಿಂದ ಆಗಮಿಸುವ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಿ, ಜ್ವರ, ತಲೆನೋವು, ದೇಹನೋವು ಮುಂತಾದ ಲಕ್ಷಣಗಳಿದ್ದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.

ಮನೆಗಳ ಬಳಿ ಬಾವಲಿಗಳ ಆವಾಸಸ್ಥಾನಗಳಿದ್ದರೆ ಎಚ್ಚರಿಕೆ ವಹಿಸಲು ಸಲಹೆ ನೀಡಿದರು. ಹಕ್ಕಿಗಳು ಸೇವಿಸಿದ ಹಣ್ಣುಗಳನ್ನು ಸೇವಿಸಬಾರದು ಎಂದು ಸಾರ್ವಜನಿಕರಿಗೆ ಸೂಚಿಸಿದರು. ನಿಫಾ ವೈರಸ್ ಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Shantha Kumari