ಎರಡನೇ ಹಂತದ ಮತದಾನ ಆರಂಭ – ರಾಯಚೂರು, ಬೀದರ್‌ನಲ್ಲಿ ಕೈಕೊಟ್ಟ ಮತಯಂತ್ರಗಳು
2024ನೇ ಸಾಲಿನ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದೆ. ಕರ್ನಾಟಕದ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಮತದಾನ ಆರಂಭಕ್ಕೂ ಮುನ್ನ ಹಲವೆಡೆ ಮತಯಂತ್ರಗಳು ಕೈಕೊಟ್ಟಿವೆ. ಇದರಿಂದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಗರಂ ಆಗಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಎರಡನೇ ಹಂತದ ಮತದಾನ ಆರಂಭ – ಬಿಸಿಗಾಳಿ ಎದುರಿಸಲು ಚುನಾವಣಾ ಆಯೋಗದಿಂದ ವಿಶೇಷ ವ್ಯವಸ್ಥೆ
ಎಲ್ಲಾ ಕಡೆಗಳಲ್ಲಿ ನಿಗಧಿಯಾದಂತೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಬೇಕಿತ್ತು. ಆದರೆ ಬೀದರ್ ನಗರದ ನ್ಯಾಷನಲ್ ಕಾಲೇಜಿನರುವ ಮತಗಟ್ಟೆ ಸಂಖೆ 151 ರಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಈ ಹಿನ್ನೆಲೆ ಮತದಾನ ಪ್ರಾರಂಭವಾದರೂ ಇನ್ನೂ ಮತದಾನ ನಡೆಯದ ಕಾರಣ ಮತದಾರರು ಚುನಾವಣಾಧಿಕಾರಿಗಳು ಹಾಗೂ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನೀವು ಏನು ಕೆಲಸ ಮಾಡುತ್ತಿದ್ದೀರಿ.. ಮೊದಲೇ ನೋಡೋಕೆ ಆಗಲ್ವಾ ಎಂದು ಮತದಾರರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮತ್ತೊಂದೆಡೆ ರಾಯಚೂರಿನ ಸಿಂಧನೂರು ತಾಲೂಕಿನ ಕಲ್ಮಂಗಿ ಮತಗಟ್ಟೆಯಲ್ಲೂ ಮತಯಂತ್ರ ಕೈಕೊಟ್ಟಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾಗಬೇಕಿದ್ದ ಮತದಾನ ಅರ್ಧ ಗಂಟೆ ವಿಳಂಬವಾಗಿದೆ. ಮತದಾನ ಮಾಡಲು ಮತಗಟ್ಟೆ ಕೇಂದ್ರ ಮುಂದೆ ಜನ ಕಾದು ಕುಳಿದ ಪ್ರಸಂಗ ನಡೆಯಿತು. ಸಿಬ್ಬಂದಿ ಮತ ಯಂತ್ರ ಸರಿಪಡಿಸಿದ ಬಳಿಕ ಮತದಾನ ಪ್ರಕ್ರಿಯೆ ಶುರುವಾಗಿದೆ.