ತೆಲಂಗಾಣ ವಿಧಾನಸಭೆ ಚುನಾವಣೆಗೆ ಮತದಾನ – ಮತಗಟ್ಟೆಯಲ್ಲಿ ಮೂರು ಪಕ್ಷಗಳ ಕಾರ್ಯಕರ್ತರ ಮಧ್ಯೆ ಮಾರಾಮಾರಿ!

ತೆಲಂಗಾಣ ವಿಧಾನಸಭೆ ಚುನಾವಣೆಗೆ ಮತದಾನ – ಮತಗಟ್ಟೆಯಲ್ಲಿ ಮೂರು ಪಕ್ಷಗಳ ಕಾರ್ಯಕರ್ತರ ಮಧ್ಯೆ ಮಾರಾಮಾರಿ!

ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. 119 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಜನರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಈ ನಡುವೆ ಮತಗಟ್ಟೆಯೊಂದರಲ್ಲಿ ಮೂರು ಪಕ್ಷದ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ.

ಇದನ್ನೂ ಓದಿ: ತೆಲಂಗಾಣ ವಿಧಾನಸಭೆ ಚುನಾವಣೆ – ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ವೋಟ್‌ ಮಾಡಿದ ಸ್ಟಾರ್ಸ್‌

ಜನಗಾಂವ್‍ನ ಮತಗಟ್ಟೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಬಿಆರ್ ಎಸ್ ಕಾರ್ಯಕರ್ತರ  ನಡುವೆ ಮಾರಾಮಾರಿ ನಡೆದಿದೆ. ಮೂರು ಪಕ್ಷದ ಕಾರ್ಯಕರ್ತರು ಮತಗಟ್ಟೆಯ ಹೊರಗೆ ಪರಸ್ಪರ ತಳ್ಳಿಕೊಳ್ಳುತ್ತಾ ಗಲಾಟೆ ನಡೆಸಿದ್ದಾರೆ. ಘಟನೆ ನಡೆಯುತ್ತಿದ್ದಂತೆಯೇ ಮತಗಟ್ಟೆಯಲ್ಲಿದ್ದ ಪೊಲೀಸರು ಕೂಡಲೇ ಮಧ್ಯಪ್ರವೇಶ ಮಾಡಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಕಾರ್ಯಕರ್ತರ ನಡುವಿನ ಗಲಾಟೆಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ವರದಿಯಾಗಿದೆ. ಮತಗಟ್ಟೆಯಲ್ಲಿ ನಡೆಯುತ್ತಿರುವ ಗಲಾಟೆಯ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಗಢ, ಮಿಜೋರಾಂಗಳಲ್ಲಿ ನ.7 ರಿಂದ ನವೆಂಬರ್ 25ರ ಒಳಗೆ ಮತದಾನ ಮುಕ್ತಾಯವಾಗಿದೆ. ತೆಲಂಗಾಣದಲ್ಲಿ ಗುರುವಾರ ಮತದಾನ ನಡೆಯುತ್ತಿದೆ. ಈ ಮೂಲಕ ಪಂಚರಾಜ್ಯ ಚುನಾವಣೆಗೆ ತೆರೆ ಬೀಳಲಿದೆ. ಡಿಸೆಂಬರ್ 3 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

Shwetha M