ಮನೆಯಿಂದಲೇ ಮತದಾನ ಯಶಸ್ವಿ – ರಾಜ್ಯದಲ್ಲಿ ಮತದಾನ ಮಾಡಿದವರೆಷ್ಟು ಮಂದಿ?

ಮನೆಯಿಂದಲೇ ಮತದಾನ ಯಶಸ್ವಿ – ರಾಜ್ಯದಲ್ಲಿ ಮತದಾನ ಮಾಡಿದವರೆಷ್ಟು ಮಂದಿ?

ಬೆಂಗಳೂರು: ಏಪ್ರಿಲ್ 29 ರಿಂದ ರಾಜ್ಯದಲ್ಲಿ 80 ವರ್ಷ ಮೇಲ್ಪಟ್ಟವರಿಗೆ ಹಾಗೂ ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ನೀಡಿದ್ದು, ಬ್ಯಾಲೆಟ್ ಪೇಪರ್ ವೋಟಿಂಗ್ ಬಹುತೇಕ ಯಶಸ್ವಿಯಾಗಿದೆ. ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ ಮೇ 4 ರವರೆಗೆ 80 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರ ಪೈಕಿ ಶೇ. 92 ರಷ್ಟು ಮಂದಿ ಮತದಾನ ಮಾಡಿದ್ದಾರೆ.

ಇದನ್ನೂ ಓದಿ: ಹಿರಿಯ ನಾಗರಿಕರಿಗೆ ಚುನಾವಣಾ ಆಯೋಗದಿಂದ ವಿಶೇಷ ಸೌಲಭ್ಯ – ಮನೆ ಬಾಗಿಲಿಗೆ ಬರಲಿದೆ ಕ್ಯಾಬ್..!

ಎಂಬತ್ತು ವರ್ಷ ತುಂಬಿದ ನಾಗರಿಕರಿಗೆ ಹಾಗೂ ಅಂಗವಿಕಲರು ಬ್ಯಾಲೆಟ್ ಪೇಪರ್ ಮೂಲಕ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿತ್ತು. ಹೀಗಾಗಿ ರಾಜ್ಯದಲ್ಲಿ ಒಟ್ಟು 80,250 ಮಂದಿ ಮನೆಯಿಂದಲೇ ಮತದಾನ ಮಾಡುವ ಆಯ್ಕೆಯನ್ನು ಆರಿಸಿಕೊಂಡಿದ್ದರು. 80 ವರ್ಷ ಮೇಲ್ಪಟ್ಟ 80,250 ಮಂದಿ ಹಾಗೂ 19,279 ಅಂಗವಿಕಲರು ಮನೆಯಿಂದಲೇ ಮತದಾನ ಆಯ್ಕೆ ಮಾಡಿಕೊಂಡಿದ್ದರು. ಇದೀಗ ಬ್ಯಾಲೆಟ್ ಪೇಪರ್ ಮತದಾನ ಬಹುತೇಕ ಯಶಸ್ವಿಯಾಗಿದೆ.

ಮನೆಯಿಂದಲೇ ಮತದಾನಕ್ಕೆ ನೋಂದಾಯಿಸಿಕೊಂಡಿದ್ದ 80 ವರ್ಷ ಮೇಲ್ಪಟ್ಟ 80,250 ಮಂದಿ ಪೈಕಿ ಈವರೆಗೆ 73,743 ಮಂದಿ ಮತ ಚಲಾಯಿಸಿದ್ದಾರೆ. ಇದರೊಂದಿಗೆ ಶೇ 91.89ರಷ್ಟು ಜನ ಮತದಾನ ಮಾಡಿದಂತಾಗಿದೆ. ಇನ್ನು ಮನೆಯಿಂದಲೇ ಮತದಾನ ಮಾಡಲು 19,279 ಅಂಗವಿಕಲರು ನೋಂದಣಿ ಮಾಡಿಸಿಕೊಂಡಿದ್ದರು. ಅವರ ಪೈಕಿ 17,943 ಮಂದಿ ಮೇ 4ರ ವರೆಗೆ ಮತ ಚಲಾಯಿಸಿದ್ದಾರೆ. ಇದರೊಂದಿಗೆ ಶೇ 93.7ರಷ್ಟು ಮತದಾನವಾದಂತಾಗಿದೆ. ಒಟ್ಟಾರೆಯಾಗಿ ಶೇ 92.12ರಷ್ಟು ಮತದಾನವಾದಂತಾಗಿದೆ. ಮನೆಯಿಂದಲೇ ಮತದಾನ ಶನಿವಾರ (ಮೇ 6) ಸಂಜೆಗೆ ಕೊನೆಗೊಳ್ಳಲಿದೆ ಎಂದು ಆಯೋಗ ತಿಳಿಸಿದೆ.

ಏಪ್ರಿಲ್ 29ರಿಂದ ಮನೆಯಿಂದಲೇ ಮತದಾನ ಆರಂಭವಾಗಿದ್ದು, ಚುನಾವಣಾ ಆಯೋಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತದಾರರ ಮನೆಗೆ ತೆರಳಿ ಬ್ಯಾಲೆಟ್ ಪೇಪರ್ ನೀಡಿ ಮತ ಪಡೆದುಕೊಂಡು ವಾಪಸಾಗುತ್ತಿದ್ದಾರೆ. ಮನೆಯಿಂದಲೇ ಮತದಾನದ ಮೂಲಕ ಪಡೆಯಲಾಗಿರುವ ಮತಗಳನ್ನು ಸ್ಟ್ರಾಂಗ್​ ರೂಮ್​​ಗಳಲ್ಲಿ ಭದ್ರವಾಗಿ ಇರಿಸಲಾಗಿದ್ದು, ಮೇ 13ರಂದು ಮತ ಎಣಿಕೆ ದಿನ ತೆರೆಯಲಾಗುವುದು ಎಂದು ಆಯೋಗ ಹೇಳಿದೆ.

suddiyaana