ಜಾತಿ ತಂತ್ರಕ್ಕೆ ಸಿಲುಕಿದ್ರಾ ಯದುವೀರ್? – ಮೈಸೂರಲ್ಲಿ ಸಿದ್ದು ಪ್ಲ್ಯಾನ್ ವರ್ಕೌಟ್?
ಟಿಕೆಟ್ ವಿಚಾರವಾಗಿಯೇ ಹಲ್ಚಲ್ ಸೃಷ್ಟಿಸಿದ್ದ ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ಮಹಾರಾಜರ ಎಂಟ್ರಿಯಿಂದ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ. ಸಿಎಂ ಸಿದ್ದರಾಮಯ್ಯಗೆ ತವರು ಕ್ಷೇತ್ರದ ಗೆಲುವು ಪ್ರತಿಷ್ಠೆಯಾಗಿದ್ರೆ ಅತ್ತ ಬಿಜೆಪಿಗೆ ಮತ್ತೆ ಕ್ಷೇತ್ರವನ್ನ ಉಳಿಸಿಕೊಳ್ಳೋ ಸವಾಲು ಇದೆ. ಇದೀಗ ಕಾಂಗ್ರೆಸ್ ನಾಯಕರು ಯದುವೀರ್ ಒಡೆಯರ್ರನ್ನ ಒಕ್ಕಲಿಗರ ವ್ಯೂಹದಲ್ಲಿ ಸಿಲುಕಿಸಿ ತಮ್ಮ ಅಭ್ಯರ್ಥಿಯನ್ನ ಗೆಲ್ಲಿಸೋಕೆ ಮಾಸ್ಟರ್ಪ್ಲ್ಯಾನ್ ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ಹಿಂದಿನಿಂದ್ಲೂ ಒಕ್ಕಲಿಗ ಸಮುದಾಯ ಯಾರ ಬೆಂಬಲಕ್ಕೆ ನಿಲ್ಲುತ್ತಾರೋ ಅವರಿಗೆ ಗೆಲುವು ಖಚಿತ ಎನ್ನುವಂತಿದೆ. ಬಿಜೆಪಿಯಿಂದ ರಾಜವಂಶಸ್ಥ ಯದುವೀರ್ ಒಡೆಯರ್ ಕಣದಲ್ಲಿದ್ರೆ ಕಾಂಗ್ರೆಸ್ ಎಂ.ಲಕ್ಷ್ಮಣ್ ಅವರನ್ನು ಅಖಾಡಕ್ಕೆ ಇಳಿಸಿದೆ. ತಮ್ಮ ತವರು ಜಿಲ್ಲೆಯಾದ ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕು ಎಂಬ ಹಠದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ. ಇದೇ ಕಾರಣಕ್ಕೆ ವಾರಗಟ್ಟಲೆ ಅಲ್ಲೇ ಇದ್ದು ಅಭ್ಯರ್ಥಿ ಪರ ಮತಬೇಟೆ ನಡೆಸಿದ್ದಾರೆ. ಇದರ ನಡುವೆ ಒಕ್ಕಲಿಗ ಸಮುದಾಯ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರಿಗೆ ದೊಡ್ಡ ಶಾಕ್ ನೀಡಿದೆ.
ಇದನ್ನೂ ಓದಿ: ವಿಕಸಿತ ಭಾರತಕ್ಕಾಗಿ ಎನ್‌ಡಿಎ ಅಭ್ಯರ್ಥಿಗಳನ್ನು ಬೆಂಬಲಿಸಿ – ಪ್ರಧಾನಿ ಮೋದಿ
ಲಕ್ಷ್ಮಣ್ ಗೆ ಒಕ್ಕಲಿಗರ ವೋಟ್!
ಮೈಸೂರು- ಕೊಡಗು ಹಾಲಿ ಸಂಸದ, ಒಕ್ಕಲಿಗ ಸಮುದಾಯದ ನಾಯಕ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿಲ್ಲ. ಅವರಿಗೆ ಟಿಕೆಟ್ ನಿರಾಕರಿಸಿದ್ದಕ್ಕಾಗಿ ಈಗಾಗಲೇ ಮೈಸೂರಿನಲ್ಲಿ ಮತ್ತು ಒಕ್ಕಲಿಗ ಸಮುದಾಯದಲ್ಲಿ ಅಸಮಾಧಾನ ಇತ್ತು. ಇದನ್ನೇ ಅಸ್ತ್ರವಾಗಿ ಕಾಂಗ್ರೆಸ್ ತನ್ನ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಇದರ ಪರಿಣಾಮವಾಗಿಯೇ ಒಕ್ಕಲಿಗ ಸಮುದಾಯ ಪಕ್ಷದ ವಿರುದ್ಧ ತಿರುಗಿಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದೆ. ಒಕ್ಕಗಲಿಗ ಅಭ್ಯರ್ಥಿಯನ್ನು ಕಡೆಗಣಿಸಿದ ಬಿಜೆಪಿಯ ವಿರುದ್ಧ ಕಾಂಗ್ರೆಸ್ ಪಕ್ಷ ಒಕ್ಕಲಿಗ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಕಟವರ್ತಿ ಎಂ.ಲಕ್ಷ್ಮಣ್ ಅವರನ್ನು ಕಣಕ್ಕೆ ಇಳಿಸಿದೆ. ಇದೀಗ ಮೈಸೂರು ಒಕ್ಕಲಿಗ ಸಂಘದ ಅಧ್ಯಕ್ಷ ಮರಿ ಸ್ವಾಮಿ ಅವರು ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್ ಅವರನ್ನು ಬೆಂಬಲಿಸುವುದಾಗಿ ಘೋಷಣೆ ಮಾಡಿದ್ದಾರೆ. ಹಾಲಿ ಸಂಸದ ಪ್ರತಾಪ್ ಸಿಂಹ ಅವರು ಒಕ್ಕಲಿಗ ಸಮುದಾಯದಿಂದ ಬಂದಿದ್ದರಿಂದ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಒಕ್ಕಲಿಗರನ್ನು ವ್ಯವಸ್ಥಿತವಾಗಿ ಬದಿಗೊತ್ತಲಾಗಿದೆ ಮತ್ತು ಆದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಹಾಗೂ ಎಂ ಲಕ್ಷ್ಮಣ್ ಅವರು ಕಾಂಗ್ರೆಸ್ ಅಭ್ಯರ್ಥಿ ಎಂಬ ಕಾರಣಕ್ಕೆ ನಾವು ಅವರನ್ನು ಬೆಂಬಲಿಸುತ್ತಿಲ್ಲ. ಲಕ್ಷ್ಮಣ್ ಅವರು ಒಕ್ಕಲಿಗರು, ಅವರು ಒಕ್ಕಲಿಗರ ಸಂಘದಿಂದಲು ಸ್ಪರ್ಧೆ ಮಾಡಿದ್ದಾರೆ. ಹೀಗಾಗಿ ಪಕ್ಷಾತೀತವಾಗಿ ಒಕ್ಕಲಿಗ ಅಭ್ಯರ್ಥಿಗೆ ಮತ ನೀಡುತ್ತೇವೆ ಎಂದಿದ್ದಾರೆ.
ಇತ್ತೀಚೆಗಷ್ಟೇ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮಣ್ ಪರ ಪ್ರಚಾರ ಮಾಡಿದ್ದ ಸಿದ್ದರಾಮಯ್ಯ, ಲಕ್ಷ್ಮಣ್ ಒಕ್ಕಲಿಗ ಸಮುದಾಯದವರು ಎಂದು ಒತ್ತಿ ಹೇಳಿದ್ದರು. ಇದಕ್ಕೆ ಬಿಜೆಪಿ ನಾಯಕರು, ಲಕ್ಷ್ಮಣ ಒಕ್ಕಲಿಗರಲ್ಲ ಎಂದು ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಸಿಎಂ ಸಿದ್ದರಾಮಯ್ಯ, ಲಕ್ಷ್ಮಣ್ ಒಕ್ಕಲಿಗರಾಗಿ ಹುಟ್ಟಿ ಕುವೆಂಪು ಆಶಯ ಪಾಲಿಸುತ್ತಿದ್ದಾರೆ ಎಂದಿದ್ದರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸುಮಾರು 15 ಲಕ್ಷ ಮತದಾರರು ಇದ್ದಾರೆ. ಅವರಲ್ಲಿ 4 ಲಕ್ಷಕ್ಕೂ ಹೆಚ್ಚು ಒಕ್ಕಲಿಗರು ಬಳಿಕ ಲಿಂಗಾಯತರು, ದಲಿತರು ಮತ್ತು ಒಬಿಸಿಗಳು ಇದ್ದಾರೆ. ಅಲ್ಲದೆ, 1.5 ಲಕ್ಷ ಮುಸ್ಲಿಂ ಸಮುದಾಯದ ಮತಗಳು ಮತ್ತು 1 ಲಕ್ಷ ಬ್ರಾಹ್ಮಣ ಮತದಾರರಿದ್ದಾರೆ. ಒಕ್ಕಲಿಗ ಮತಗಳೇ ನಿರ್ಣಾಯಕ ಆಗಿರೋದ್ರಿಂದ ಕಾಂಗ್ರೆಸ್ ನಾಯಕರು ಜಾತಿ ಲೆಕ್ಕಾಚಾರ ಹಾಕಿಯೇ ಅಭ್ಯರ್ಥಿಯನ್ನ ಹಾಕಿದ್ದಾರೆ. ಒಂದ್ಕಡೆ ಸತತ ಎರಡು ಬಾರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿರುವುದರಿಂದ ಕ್ಷೇತ್ರ ಉಳಿಸಿ ಕೊಳ್ಳಲು ಬಿಜೆಪಿ ನಾಯಕರು ಹೋರಾಟ ನಡೆಸುತ್ತಿದ್ದಾರೆ. ಇವರಿಗೆ ಜೆಡಿಎಸ್ ನಾಯಕರು ಮತ್ತು ಕಾರ್ ಕರ್ತರು ಸಾಥ್ ನೀಡುತ್ತಿದ್ದಾರೆ. ಇತ್ತ ಮುಖ್ಯ ಮಂತ್ರಿ ಸಿದ್ದರಾಮಯ್ಯ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕು ಎಂದು ಪಣತೊಟ್ಟಿದ್ದಾರೆ. ಈ ಪ್ರತಿಷ್ಠೆಯ ಗುದ್ದಾಟದಲ್ಲಿ ಜಾತಿ ರಾಜಕಾರಣವೂ ಎಂಟ್ರಿಯಾಗಿದ್ದು, ಯಾರಿಗೆ ಪ್ಲಸ್ ಆಗುತ್ತೆ ಅನ್ನೋದೇ ಈಗಿರುವ ಪ್ರಶ್ನೆ.