ಬಿಜೆಪಿಯಿಂದ ಯತ್ನಾಳ್‌ಗೆ ಗೇಟ್‌ಪಾಸ್- 6 ವರ್ಷ ಉಚ್ಛಾಟನೆ, ವಿಜಯೇಂದ್ರಗೆ ಜಯ
ಹಿಂದೂ ಹುಲಿ.. ಮುಂದೇನು?

ಬಿಜೆಪಿಯಿಂದ ಯತ್ನಾಳ್‌ಗೆ ಗೇಟ್‌ಪಾಸ್-  6 ವರ್ಷ ಉಚ್ಛಾಟನೆ, ವಿಜಯೇಂದ್ರಗೆ ಜಯಹಿಂದೂ ಹುಲಿ.. ಮುಂದೇನು?

ಹಿಂದೂ ಫೈರ್ ಬ್ರ್ಯಾಂಡ್ ಎಂದು ಕರೆಸಿಕೊಳ್ಳುವ ಯತ್ನಾಳ್ ಎರಡನೇ ಬಾರಿಗೆ ಬಿಜೆಪಿಯಿಂದ ಉಚ್ಛಾಟನೆ ಆಗಿದ್ದಾರೆ.  ಶಿಸ್ತು ಸಮಿತಿ ನೀಡಿದ್ದ ಶೋಕಾಸ್‌ ನೋಟಿಸ್‌ಗೆ ಯಾವುದೇ ಉತ್ತರ ನೀಡದ ಕಾರಣ ಬಿಜೆಪಿ ಹೈಕಮಾಂಡ್‌  ಈ ನಿರ್ಧಾರವನ್ನು ಕೈಗೊಂಡಿದೆ. ತಕ್ಷಣವೇ ಈ ನಿರ್ಧಾರ ಜಾರಿಗೆ ಬಂದಿದ್ದು, 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ.

 ಶಾಸಕ ಸ್ಥಾನಕ್ಕೂ ಕುತ್ತು ಬರುತ್ತಾ?

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಆರೋಪಗಳನ್ನು ಮಾಡಿಕೊಂಡು ಬರುತ್ತಿದ್ದರು. ಅಲ್ಲದೇ ತಮ್ಮದೇ ಒಂದು ತಂಡ ಕಟ್ಟಿಕೊಂಡು ಪ್ರತ್ಯೇಕ ಸಭೆ ಮಾಡುತ್ತಿದ್ದರು. ಈ ಸಂಬಂಧ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿತ್ತು. ಆದರೂ ಯತ್ನಾಳ್​ ಸೈಲೆಂಟ್​ ಇರದೇ ತಮ್ಮ ಅಬ್ಬರ ಮುಂದುವರಿಸಿದ್ದರು. ಹೀಗಾಗಿ ಇತ್ತೀಚೆಗೆಷ್ಟೇ ಮತ್ತೊಂದು ಶೋಕಾಸ್ ನೀಡಲಾಗಿತ್ತು. ಅದಕ್ಕೆ ಉತ್ತರವನ್ನೂ ಕೊಟ್ಟಿದ್ದರು. ಇದೀಗ ದೆಹಲಿ ಬಿಜೆಪಿ ಹೈಕಮಾಂಡ್‌ಗೆ ಅವರ ಉತ್ತರದಿಂದ ಸೂಕ್ತ ಉತ್ತರ ಸಿಕ್ಕಿಲ್ಲವೆಂದು ಶಾಸಕ ಬಸನಗೌಡ ಪಾಟೀಲ್ ಅವರನ್ನು ಉಚ್ಛಾಟನೆ ಮಾಡಲಾಗಿದೆ. ಇನ್ನು ಅವರ ಶಾಸಕ ಸ್ಥಾನಕ್ಕೂ ಕುತ್ತು ಬರುತ್ತಾ ಎಂಬ ಪ್ರಶ್ನೆ ಶುರುವಾಗಿದೆ. ಶಾಸಕ ಸ್ಥಾನದಲ್ಲಿ ಅವರು ಸ್ವತಂತ್ರವಾಗಿ ಮುಂದುವರೆಯಬಹುದು. ಒಂದು ವೇಳೆ ಪಕ್ಷದ ಚಿಹ್ನೆಯಡಿ ಗೆದ್ದಿರುವುದು ತನಗೆ ಬೇಡವೆಂದು ರಾಜೀನಾಮೆ ಕೊಟ್ಟರೆ, ಶಾಸಕ ಸ್ಥಾನ ರದ್ದಾಗಿ ಪುನಃ ಚುನಾವಣೆಗೆ ಹೋಗಬಹುದು.

ಯತ್ನಾಳ್ ಉಚ್ಛಾಟನೆ ಆದೇಶದಲ್ಲಿ ಏನಿದೆ?

ಪಕ್ಷದ ಕೇಂದ್ರ ಶಿಸ್ತು ಸಮಿತಿಯು 2025 ಫೆಬ್ರವರಿ 10 ರಂದು ನೀಡಿದ್ದ ಶೋಕಾಸ್ ನೋಟಿಸ್‌ಗೆ ನಿಮ್ಮ ಪ್ರತಿಕ್ರಿಯೆಯನ್ನು ಪರಿಗಣಿಸಿದೆ ಮತ್ತು ಹಿಂದಿನ ಶೋಕಾಸ್ ನೋಟಿಸ್‌ಗಳಿಗೆ ಪ್ರತಿಕ್ರಿಯೆಯಾಗಿ ಉತ್ತಮ ನಡವಳಿಕೆ ಮತ್ತು ನಡವಳಿಕೆಯ ಭರವಸೆಗಳನ್ನು ನೀಡಿದ್ದರೂ ಸಹ, ನೀವು ಪಕ್ಷದ ಶಿಸ್ತಿನ ಪದೇ ಪದೇ ಉಲ್ಲಂಘಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ, ನಿಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದ ಜಾರಿಗೆ ಬರುವಂತೆ 6 ವರ್ಷಗಳ ಅವಧಿಗೆ ಉಚ್ಚಾಟಿಸಲು ನಿರ್ಧರಿಸಲಾಗಿದೆ ಮತ್ತು ನೀವು ಇಲ್ಲಿಯವರೆಗೆ ಹೊಂದಿದ್ದ ಯಾವುದೇ ಪಕ್ಷದ ಹುದ್ದೆಯಿಂದ ನಿಮ್ಮನ್ನು ತೆಗೆದುಹಾಕಲಾಗಿದೆ ಎಂದು ಬಿಜೆಪಿ ಕೇಂದ್ರ ಶಿಸ್ತು ಸಮಿತಿಯ ಕಾರ್ಯದರ್ಶಿ ಓಂ ಪಾಠಕ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯತ್ನಾಳ್  ಬಸನಗೌಡ ಪಾಟೀಲ್‌ ಯತ್ನಾಳ್‌ ಅವರದ್ದು ವಿವಾದಿತ ವ್ಯಕ್ತಿತ್ವವೆಂದೇ ಹೇಳಬಹುದು. ಇವರಿಗೆ ಉಚ್ಛಾಟನೆ ಹೊಸತೇನು ಅಲ್ಲ. 2015ರಲ್ಲಿ ನಡೆದ ವಿಜಯಪುರ-ಬಾಗಲಕೋಟೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದರು. ಇದಕ್ಕಾಗಿ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿತ್ತು. ಮತ್ತೆ 2018ರಲ್ಲಿ ಬಿಜೆಪಿಗೆ ಸೇರ್ಪಡೆಗೊಳಿಸಲಾಗಿತ್ತು. ಅಲ್ಲಿಂದ ಇಲ್ಲಿವರೆಗೆ ಬಿಜೆಪಿಯಲ್ಲಿರುವ ಯತ್ನಾಳ್ ಕಳೆದ 6-7  ವರ್ಷಗಳಲ್ಲಿ ವಿರೋಧಪಕ್ಷಕ್ಕಿಂತ ಹೆಚ್ಚಾಗಿ ಸ್ವಪಕ್ಷದವರನ್ನು ಟೀಕಿಸಿರುವುದೇ ಹೆಚ್ಚು ಇದು ಪಕ್ಷಕ್ಕೆ ಸಾಕಷ್ಟು ಡ್ಯಾಮೇಜ್ ತಂದು ಕೊಟ್ಟಿತ್ತು. ಅಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ನೇರವಾಗಿ ತೊಡೆತಟ್ಟಿ, ಬಾಯಿಗೆ ಬಂದಂತೆ ಬೈಯುತ್ತ, ರೇಬೆಲ್ ಟೀಂ ಕಟ್ಟಿಕೊಂಡಿದ್ರು ಇದು ಯತ್ನಾಳ್‌ ಉಚ್ಛಾಟನೆ ದೊಡ್ಡ ಕಾರಣವಾಗಿದೆ.

Kishor KV