ಅಮೆರಿಕ ಅಧ್ಯಕ್ಷೀಯ ಚುನಾವಣಾ ರೇಸ್ನಿಂದ ಹಿಂದೆ ಸರಿದ ಭಾರತ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ!

ಭಾರತ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ ಅಮೆರಿಕ ಅಧ್ಯಕ್ಷೀಯ ಚುನಾವಣಾ ರೇಸ್ನಿಂದ ಹಿಂದೆ ಸರಿದಿದ್ದಾರೆ. ಸದ್ಯಕ್ಕೆ ಈ ಅಧ್ಯಕ್ಷೀಯ ಪ್ರಚಾರವನ್ನು ನಿಲ್ಲಿಸಲಿದ್ದೇವೆ. ನಾನು ಡೊನಾಲ್ಡ್ ಟ್ರಂಪ್ಗೆ ಕರೆ ಮಾಡಿ ಅವರ ಗೆಲುವಿಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.
ಹೌದು, ಈ ವರ್ಷ ಯುಎಸ್ ಅಧ್ಯಕ್ಷೀಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಪರವಾಗಿ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದ ವಿವೇಕ್ ರಾಮಸ್ವಾಮಿ ಅವರು ಯುಎಸ್ ಅಧ್ಯಕ್ಷೀಯ ರೇಸ್ನಿಂದ ಹೊರಗುಳಿದಿದ್ದಾರೆ. ಅಯೋವಾ ರಿಪಬ್ಲಿಕನ್ ಸಭೆ ನಂತರ ಡೊನಾಲ್ಡ್ ಟ್ರಂಪ್ಗೆ ತಮ್ಮ ಬೆಂಬಲ ಘೋಷಿಸಿದ್ದಾರೆ.
ಇದನ್ನೂ ಓದಿ: ಸಿಲಿಂಡರ್ ಗೆ ಬೈ ಬೈ.. ಒಲೆಯಲ್ಲೇ ಅಡುಗೆ! – ಮೋದಿ ಉಜ್ವಲ ಕನಸಿಗೆ ಕೊಳ್ಳಿ ಇಟ್ಟಿದ್ಯಾರು?
ರಾಮಸ್ವಾಮಿ ಅವರು ಫೆಬ್ರವರಿ 2023 ರಲ್ಲಿ ಯುಎಸ್ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿ ಎನ್ನುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದರು. ತಮ್ಮ ನಿಲುವುಗಳ ಮೂಲಕ ರಿಪಬ್ಲಿಕನ್ ಮತದಾರರು ಮತ್ತು ಬೆಂಬಲಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಅವರ ಪ್ರಚಾರ ಕಾರ್ಯತಂತ್ರವು ಮಾಜಿ ಅಧ್ಯಕ್ಷ ಟ್ರಂಪ್ ಅವರ ನೀತಿಯನ್ನು ನಿಕಟವಾಗಿ ಪ್ರತಿಬಿಂಬಿಸುತ್ತದೆ. ಹಿಂದಿನ ಚುನಾವಣೆಗಳಲ್ಲಿ ಟ್ರಂಪ್ ಅವರನ್ನು ಯಶಸ್ಸಿನತ್ತ ಮುನ್ನಡೆಸಿದ್ದ ಸಂಪ್ರದಾಯವಾದಿ ವಲಯದ ಗಮನ ಸೆಳೆಯಲು ರಾಮಸ್ವಾಮಿ ಪ್ರಯತ್ನಿಸಿದ್ದರು.
ಓಹಿಯೋ ಮೂಲದ ರಾಮಸ್ವಾಮಿ, ಕೇರಳದಿಂದ ವಲಸೆ ಹೋಗಿದ್ದ ಕುಟುಂಬವೊಂದರ ಪುತ್ರ. ಟ್ರಂಪ್ ಅವರ ಖ್ಯಾತಿಯಿಂದ ಹೆಚ್ಚು ಪ್ರಾಬಲ್ಯ ಹೊಂದಿರುವ ರಿಪಬ್ಲಿಕನ್ ಕ್ಷೇತ್ರದಲ್ಲಿ ಅನಿರೀಕ್ಷಿತ ಸ್ಪರ್ಧಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು. ಅಯೋವಾದಲ್ಲಿ ರಾಮಸ್ವಾಮಿ ಅವರ ವಿರುದ್ಧದ ಅಲೆಯಿದೆ. ಅಯೋವಾದಲ್ಲಿ ಇವರು ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಸುಮಾರು 7.7% ಮತಗಳನ್ನು ಪಡೆದಿದ್ದಾರೆ.