ಅಮೆರಿಕ ಅಧ್ಯಕ್ಷ ಚುನಾವಣೆಯ ರೇಸ್‌ನಲ್ಲಿ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ! – ಟ್ರಂಪ್‌ಗೆ ಶಿಕ್ಷೆಯಾದ್ರೆ ಮಾತ್ರ ಅವಕಾಶ?
ವಾಷಿಂಗ್ಟನ್: ಜಗತ್ತಿನ ದೊಡ್ಡಣ್ಣ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸಜ್ಜಾಗುತ್ತಿದೆ. ಈ ಚುನಾವಣೆಯ ರೇಸ್‌ನಲ್ಲಿ ಭಾರತ ಮೂಲದ ವಿವೇಕ್ ರಾಮಸ್ವಾಮಿ ಎಂಬ 38ರ ಹರೆಯದ ವ್ಯಕ್ತಿಯ ಹೆಸರೂ ಮುನ್ನೆಲೆಗೆ ಬಂದಿದೆ. 2024ರ ಅಮೆರಿಕಾ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿಯಾಗಿ ವಿವೇಕ್ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು, ರಿಪಬ್ಲಿಕನ್ ಪಕ್ಷದ ಆಂತರಿಕ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಭಾರತೀಯ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ ಇದ್ದಾರೆ. ಒಂದು ವೇಳೆ ಚುನಾವಣೆಗೂ ಮೊದಲು ಟ್ರಂಪ್ ಶಿಕ್ಷೆಗೆ ಒಳಗಾದರೆ ವಿವೇಕ್‌ಗೆ ಅವಕಾಶದ ಬಾಗಿಲುಗಳು ತೆರೆಯಲಿವೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಇಸ್ರೋಗೆ ಮತ್ತೊಂದು ಯಶಸ್ಸು – ಚಂದ್ರಯಾನ-2 ಜೊತೆ ಸಂಪರ್ಕ ಸಾಧಿಸಿದ ವಿಕ್ರಮ್ ಲ್ಯಾಂಡರ್!
ರಿಪಬ್ಲಿಕನ್ ಪಕ್ಷದಲ್ಲಿ ಶೇ.56ರಷ್ಟುಮತ ಗಳಿಸಿಕೊಂಡಿರುವ ಟ್ರಂಪ್ ಅಧ್ಯಕ್ಷೀಯ ಚುನಾವಣೆಗೆ ಪಕ್ಷದ ಪ್ರಮುಖ ಅಭ್ಯರ್ಥಿಯಾಗಿದ್ದಾರೆ. ಶೇ.10ರಷ್ಟುಮತಗಳನ್ನು ಪಡೆದುಕೊಂಡಿರುವ ವಿವೇಕ್ ರಾಮಸ್ವಾಮಿ ಮತ್ತು ಫ್ಲೋರಿಡಾದ ಗವರ್ನರ್ ರಾನ್ ಡೆಸ್ಯಾಂಟಿಸ್ 2ನೇ ಸ್ಥಾನದಲ್ಲಿದ್ದಾರೆ. ಜೂನ್‌ನಲ್ಲಿ ಶೇ.21ರಷ್ಟುಮತ ಪಡೆದುಕೊಂಡಿದ್ದ ಡೆಸ್ಯಾಂಟಿಸ್ ಮತ ಇದೀಗ ಕುಸಿತ ಕಂಡಿದೆ.
ಬಹುತೇಕ ಅಮೆರಿಕನ್ನರಿಗೆ ಹೆಸರೇ ಗೊತ್ತಿಲ್ಲದಂತಹ ವ್ಯಕ್ತಿ ಇದ್ದಕ್ಕಿಂದ್ದಂತೆ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಹಲವು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ವೇಳೆ ಶಿಕ್ಷೆಗೆ ಒಳಗಾಗಿ ಚುನಾವಣೆಗೆ ಸ್ಪರ್ಧಿಸುವ ಅವಕಾಶವನ್ನು ಕಳೆದುಕೊಂಡರೆ, ಆ ಅವಕಾಶ 2ನೇ ಸ್ಥಾನದಲ್ಲಿರುವ ವಿವೇಕ್‌ಗೆ ಲಭ್ಯವಾಗಲಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.