ಸಿದ್ದರಾಮಯ್ಯ ಭೇಟಿಯಾಗಿ ಚರ್ಚಿಸಿದ ‘ಹಳ್ಳಿ ಹಕ್ಕಿ’ ವಿಶ್ವನಾಥ್ – ಹಳೇ ಶತ್ರುಗಳ ನಡುವೆ ಸಂಧಾನ ನಡೆಯಿತಾ?

ಬೆಂಗಳೂರು : ಸಿದ್ದರಾಮಯ್ಯ ಹೆಸರು ಕೇಳಿದ್ರೆ ಉರಿದುರಿದು ಬೀಳುತ್ತಾ, ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ್ದ ಮಾಜಿ ಸಚಿವ ಹೆಚ್.ವಿಶ್ವನಾಥ್ ಇಂದು ಪ್ರತಿಪಕ್ಷ ನಾಯಕರನ್ನು ಭೇಟಿಯಾಗಿದ್ದಾರೆ. ಸಿದ್ದರಾಮಯ್ಯ ಆರೋಗ್ಯ ವಿಚಾರಿಸುವ ನೆಪದಲ್ಲಿ ಕುಮಾರ ಪಾರ್ಕ್‌ನಲ್ಲಿರುವ ವಿಪಕ್ಷ ನಾಯಕರ ನಿವಾಸಕ್ಕೆ ಭೇಟಿ ನೀಡಿರುವ ಹೆಚ್.ವಿಶ್ವನಾಥ್ ಕೆಲ ಹೊತ್ತು ಮಾತುಕತೆ ನಡೆಸಿದರು.
ಹಿಂದೆ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಸೇರ್ಪಡೆಯಾಗುವಾಗ ಹೆಚ್.ವಿಶ್ವನಾಥ್ ಮಹತ್ವದ ಪಾತ್ರವಹಿಸಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಮೇಲೆ ತಮ್ಮನ್ನು ಕಡೆಗಣಿಸಿದ್ದಾರೆ ಎಂಬ ಕಾರಣಕ್ಕೆ ಹೆಚ್.ವಿಶ್ವನಾಥ್ ಸಮಯ ಸಿಕ್ಕಾಗಲೆಲ್ಲಾ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಇದಕ್ಕೆ ಸಿದ್ದರಾಮಯ್ಯ ಸೊಪ್ಪು ಹಾಕದೇ ಇದ್ದಾಗ ಕಡೆಗೆ ಕಾಂಗ್ರೆಸ್ ತೊರೆದು ಜೆಡಿಎಸ್ ತೊರೆದಿದ್ದರು. ಅಲ್ಲದೆ 2018ರ ವಿಧಾನಸಭಾ ಚುನಾವಣೆಯ ವೇಳೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲಿಸುವಲ್ಲಿ ಹೆಚ್.ವಿಶ್ವನಾಥ್ ನೇತೃತ್ವದಲ್ಲಿ ಸಿದ್ದು ವಿರೋಧಿಗಳು ಒಗ್ಗೂಡಿದ್ದರು. ಇದೇ ಕಾರಣಕ್ಕೆ ರಾಹು-ಕೇತುಗಳೆಲ್ಲಾ ಸೇರಿ ತಮ್ಮನ್ನು ಸೋಲಿಸಿದರು ಎಂದು ಸಿದ್ದರಾಮಯ್ಯ ಈ ಹಿಂದೆ ಟೀಕಾ ಪ್ರಹಾರ ನಡೆಸಿದ್ದನ್ನು ಸ್ಮರಿಸಬಹುದು.
ಇಂದು ಸಿದ್ದರಾಮಯ್ಯ ಭೇಟಿಯಾಗಲು ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಸುದೀರ್ಘ ಕಾಲದ ಒಡನಾಡಿ ಹಾಗೂ ಆಪ್ತ ಸ್ನೇಹಿತರಾಗಿರುವ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಜೊತೆ ಹೆಚ್.ವಿಶ್ವನಾಥ್ ಬಂದಿದ್ದರು. ಹೂಗುಚ್ಚ ನೀಡಿ ಸಿದ್ದರಾಮಯ್ಯ ಅವರಿಗೆ ಶುಭ ಕೋರಿದ ಹೆಚ್.ವಿಶ್ವನಾಥ್ ಜೊತೆ ಪ್ರತಿಪಕ್ಷ ನಾಯಕರು ಕೆಲ ಹೊತ್ತು ಮಾತುಕತೆ ನಡೆಸಿದ್ದರು. ಹಾಗಿದ್ದರೂ ತಮ್ಮನ್ನು ಭೇಟಿಯಾಗಲು ಬಂದ ವಿಶ್ವನಾಥ್ ಜೊತೆ ಮಾತಾಡುವುದಕ್ಕಿಂತಲೂ ಹೆಚ್ಚಾಗಿ ಸಿದ್ದರಾಮಯ್ಯ ಅಕ್ಕಪಕ್ಕದಲ್ಲಿದ್ದ ಕಾಂಗ್ರೆಸ್ ನಾಯಕರ ಜೊತೆಗೇ ಮಾತುಕತೆ ನಡೆಸಿರುವುದು ಅವರಲ್ಲಿರುವ ಸಿಟ್ಟನ್ನು ತೋರಿಸುತ್ತಿತ್ತು.
ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನದ ವೇಳೆ ಮಹತ್ವದ ಪಾತ್ರವಹಿಸಿದ್ದ ಹೆಚ್.ವಿಶ್ವನಾಥ್, ಹುಣಸೂರಿನ ಬೈಎಲೆಕ್ಷನ್‌ನಲ್ಲಿ ಸೋತ ನಂತರ ಮಂತ್ರಿಸ್ಥಾನದಿಂದ ವಂಚಿತರಾಗಿದ್ದರು. ಇದಾದ ಮೇಲೆ ವಿಶ್ವನಾಥ್ ಸಿಟ್ಟು ಬಿಜೆಪಿ ಕಡೆಗೆ ತಿರುಗಿದ್ದು, ಇತ್ತೀಚೆಗೆ ಸ್ವಪಕ್ಷೀಯರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಭೇಟಿಯ ನಂತರ ಹಳ್ಳಿ ಹಕ್ಕಿ ಮತ್ತೆ ಮರಳಿ ಗೂಡಿಗೆ ಬರುತ್ತದಾ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಶುರುವಾಗಿದೆ.