2026ರಲ್ಲಿ KING ನಡೆದಿದ್ದೇ ದಾರಿ – ಚರಿತ್ರೆ ಸೃಷ್ಟಿಸೋ ಅವತಾರಗಳೆಷ್ಟು?
ODI, IPLನಲ್ಲಿ ವಿರಾಟ ರೂಪ

2026ರಲ್ಲಿ KING ನಡೆದಿದ್ದೇ ದಾರಿ – ಚರಿತ್ರೆ ಸೃಷ್ಟಿಸೋ ಅವತಾರಗಳೆಷ್ಟು?ODI, IPLನಲ್ಲಿ ವಿರಾಟ ರೂಪ

ಟೀಂ ಇಂಡಿಯಾ ಅಷ್ಟೇ ಅಲ್ಲದೆ ಇಡೀ ಕ್ರಿಕೆಟ್ ಜಗತ್ತಿನಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನ ಹೊಂದಿರೋ ಆಟಗಾರ ಅಂದ್ರೆ ಅದು ವಿರಾಟ್ ಕೊಹ್ಲಿ. ಕ್ರಿಕೆಟ್ ಕರಿಯರ್​​ನಲ್ಲಿ ದಾಖಲೆಗಳನ್ನೇ ಮೆಟ್ಟಿಲು ಮಾಡ್ಕೊಂಡು ಬೆಳೆದಿರೋ ವಿರಾಟ್ ಪ್ರಸ್ತುತ ತಮ್ಮ ಜರ್ನಿಯ ಅಂತ್ಯದಲ್ಲಿದ್ದಾರೆ. ಭಾರತದ ಪರ ಏಕದಿನ ಫಾರ್ಮೆಟ್​ನಲ್ಲಿ ಮಾತ್ರ ಕಣಕ್ಕಿಳೀತಿದ್ದಾರೆ. 2025ರಲ್ಲಿ ಸಾಕಷ್ಟು ಹೆಜ್ಜೆಗುರುತುಗಳನ್ನ ಮೂಡಿಸಿರೋ ವಿರಾಟ್ ಈ ವರ್ಷ ಮತ್ತಷ್ಟು ರೆಕಾರ್ಡ್ಸ್​ ಬ್ರೇಕ್ ಮಾಡುವಂಥ ಚಾನ್ಸಸ್ ಇದೆ.

ಇದನ್ನೂ ಓದಿ : ಗೀಳಿಡದ ಗಿಲ್ Vs ಪ್ರಚಂಡ ಪಡಿಕ್ಕಲ್ – ವಿಜಯ್ ಹಜಾರೆಯಲ್ಲೂ PRINCE ಫೇಲ್

2025ನೇ ವರ್ಷ ವಿರಾಟ್ ಕೊಹ್ಲಿ ಪಾಲಿಗೆ ಎಂದೆಂದಿಗೂ ನೆನಪಿನಲ್ಲಿಡಬೇಕಾದ ವರ್ಷ. ಟೆಸ್ಟ್ ಕ್ರಿಕೆಟ್​​ಗೆ ವಿದಾಯ ಘೋಷಣೆ ಮಾಡಿದ್ರು. ಚಾಂಪಿಯನ್ಸ್ ಟ್ರೋಫಿಯನ್ನ ಗೆದ್ದು ಬೀಗಿದ್ರು. ಏಕದಿನ ಮಾದರಿಯಲ್ಲಿ ಹೈಯೆಸ್ಟ್ ರನ್ ಸ್ಕೋರರ್​​ಗಳ ಪಟ್ಟಿಯಲ್ಲಿ ಭಾರತದ ನಂಬರ್ 1 ಬ್ಯಾಟರ್ ಆದ್ರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಬಾರಿಗೆ ಕಪ್ ಗೆದ್ದಿತ್ತು. 37ನೇ ವಯಸ್ಸಿನಲ್ಲೂ ರೆಡ್ ಹಾಟ್ ಫಾರ್ಮ್​ನಲ್ಲಿರೋ ವಿರಾಟ್ ಈ ವರ್ಷ ಕೂಡ ಹಲವು ಮೈಲುಗಳನ್ನ ಸೃಷ್ಟಿಸಲಿದ್ದಾರೆ.

ವೇಗವಾಗಿ 28,000 ಅಂತಾರಾಷ್ಟ್ರೀಯ ರನ್‌ ಗಳು ಕಂಪ್ಲೀಟ್!

2026ರಲ್ಲಿ ವಿರಾಟ್ ಕೊಹ್ಲಿ ಸಾಧಿಸಬಹುದಾದ ಅತ್ಯಂತ ಮಹತ್ವದ ಮೈಲಿಗಲ್ಲುಗಳಲ್ಲಿ ಇದು ಒಂದು.ಈ ವರ್ಷ 28,000 ಅಂತರರಾಷ್ಟ್ರೀಯ ರನ್‌ಗಳನ್ನು ತಲುಪಿದ ಅತ್ಯಂತ ವೇಗದ ಕ್ರಿಕೆಟಿಗನಾಗಬಹುದು. ಪ್ರಸ್ತುತ, ಕೊಹ್ಲಿ 623 ಇನ್ನಿಂಗ್ಸ್‌ಗಳಲ್ಲಿ ಅಂದ್ರೆ ಎಲ್ಲಾ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27,975 ರನ್ ಗಳಿಸಿದ್ದಾರೆ. 28,000 ರನ್‌ಗಳ ಗಡಿಯನ್ನು ತಲುಪಲು ಅವರಿಗೆ 25 ರನ್‌ಗಳ ಅಗತ್ಯವಿದೆ. ಸಚಿನ್ ತೆಂಡೂಲ್ಕರ್ 644 ಇನ್ನಿಂಗ್ಸ್‌ಗಳಲ್ಲಿ 28,000 ಅಂತರರಾಷ್ಟ್ರೀಯ ರನ್‌ಗಳನ್ನು ಗಳಿಸಿದ್ರೆ, ಕುಮಾರ್ ಸಂಗಕ್ಕಾರ 666 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ. ಹೀಗಾಗಿ ಸಚಿನ್ ಅವ್ರ ದಾಖಲೆಯನ್ನ ಕೊಹ್ಲಿ ಬ್ರೇಕ್ ಮಾಡಬಹುದು.

ಏಕದಿನ ಕ್ರಿಕೆಟ್‌ನಲ್ಲಿ 15,000 ರನ್ ಗಳಿಸಿದ ಎರಡನೇ ಆಟಗಾರ!

ಇನ್ನು ಏಕದಿನ ಮಾದರಿಯಲ್ಲಿ ಸಾಮ್ರಾಟನಾಗಿ ಮೆರೆಯುತ್ತಿರೋ ಕೊಹ್ಲಿ ಮತ್ತೊಂದು ದಾಖಲೆಯ ಸನಿಹದಲ್ಲಿದ್ದಾರೆ. ಸಚಿನ್ ತೆಂಡೂಲ್ಕರ್ ಬಳಿಕ ಏಕದಿನ ಪಂದ್ಯಗಳಲ್ಲಿ 15,000 ರನ್ ಗಳಿಸಿದ ಎರಡನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಬಹುದು. 308 ಏಕದಿನ ಪಂದ್ಯಗಳಿಂದ 14,557 ರನ್ ಗಳಿಸಿದ್ದು, ಸಾರ್ವಕಾಲಿಕ ಏಕದಿನ ರನ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಸಚಿನ್ 18,426 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. 15,000 ರನ್‌ಗಳ ಗಡಿ ತಲುಪಲು ಕೊಹ್ಲಿಗೆ ಇನ್ನೂ 443 ರನ್‌ಗಳ ಅಗತ್ಯವಿದೆ. 2026 ರಲ್ಲಿ ಭಾರತ  18 ಏಕದಿನ ಪಂದ್ಯಗಳನ್ನು ಆಡುವ ನಿರೀಕ್ಷೆಯಿದೆ. ಬಹುಶಃ ಈ ಇನ್ನಿಂಗ್ಸ್​ಗಳಲ್ಲಿ ಕೊಹ್ಲಿ ಈ ದಾಖಲೆಯನ್ನ ತಲುಪಬಹುದು,.

ಐಪಿಎಲ್‌ನಲ್ಲಿ 9,000 ರನ್ ಗಳಿಸಿದ ಮೊದಲ ಬ್ಯಾಟ್ಸ್‌ ಮನ್!

ಆರ್‌ಸಿಬಿ ತಂಡದ ದಂತಕಥೆ ಕೊಹ್ಲಿ ಐಪಿಎಲ್​ನಲ್ಲೂ ದಾಖಲೆಯ  ಸನಿಹದಲ್ಲಿದ್ದಾರೆ.  ಕೊಹ್ಲಿ ಪ್ರಸ್ತುತ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ, 267 ಪಂದ್ಯಗಳಿಂದ 8,661 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ 9,000 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಆಗಲು 339 ರನ್‌ಗಳ ಅಗತ್ಯವಿದೆ.   2008 ರಲ್ಲಿ ಲೀಗ್ ಪ್ರಾರಂಭವಾದಾಗಿನಿಂದ, ಅವರು ಆರ್‌ಸಿಬಿಯನ್ನು ಮಾತ್ರ ಪ್ರತಿನಿಧಿಸಿದ್ದಾರೆ ಮತ್ತು ಹತ್ತತ್ರ ಎರಡು ದಶಕಗಳಿಂದ ಅವರ ಬ್ಯಾಟಿಂಗ್ ತಂಡದ ಬೆನ್ನೆಲುಬಾಗಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ!

ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರನಾಗಲು ಹಾಗೇ ಕುಮಾರ್ ಸಂಗಕ್ಕಾರ ಅವರನ್ನು ಹಿಂದಿಕ್ಕಲು ಕೆಲವೇ ರನ್‌ಗಳ ದೂರದಲ್ಲಿದ್ದಾರೆ. ಸಂಗಕ್ಕಾರ ತಮ್ಮ ವೃತ್ತಿಜೀವನವನ್ನು 28,016 ಅಂತರರಾಷ್ಟ್ರೀಯ ರನ್‌ಗಳೊಂದಿಗೆ ನಿವೃತ್ತಿ ಘೋಷಿಸಿದ್ರು. ಕೊಹ್ಲಿ ಪ್ರಸ್ತುತ 27,975 ರನ್‌ಗಳೊಂದಿಗೆ ಇದ್ದಾರೆ. ಎರಡನೇ ಸ್ಥಾನಕ್ಕೆ ಏರಲು ಕೊಹ್ಲಿಗೆ ಕೇವಲ 42 ರನ್‌ಗಳ ಅಗತ್ಯವಿದೆ.

ನ್ಯೂಜಿಲೆಂಡ್ ವಿರುದ್ಧ ಭಾರತದ ಪರ ಅತಿ ಹೆಚ್ಚು ಏಕದಿನ ರನ್!

ವಿರಾಟ್ ಕೊಹ್ಲಿ ಮತ್ತೊಂದು ದಾಖಲೆಯನ್ನು ಮುರಿಯುವ ಹತ್ತಿರದಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಭಾರತದ ಪರ ಅತಿ ಹೆಚ್ಚು ಏಕದಿನ ರನ್ ಗಳಿಸಿದ ಆಟಗಾರನಾಗಿ ಸಚಿನ್ ತೆಂಡೂಲ್ಕರ್ ಅವರನ್ನು ಮೀರಿಸಲು ಅವಕಾಶ ಇದೆ. ಕಿವೀಸ್ ವಿರುದ್ಧದ 42 ಏಕದಿನ ಪಂದ್ಯಗಳಲ್ಲಿ ಸಚಿನ್ 1,750 ರನ್ ಗಳಿಸಿದ್ದಾರೆ. ಆದರೆ ಕೊಹ್ಲಿ ಈಗಾಗಲೇ ಕೇವಲ 33 ಪಂದ್ಯಗಳಲ್ಲಿ 1,657 ರನ್ ಗಳಿಸಿದ್ದಾರೆ. ಅಂದ್ರೆ 100 ಕ್ಕಿಂತ ಕಡಿಮೆ ರನ್​ಗಳೇ ಬೇಕು. ಮುಂಬರುವ ಏಕದಿನ ಸರಣಿಯಲ್ಲೇ ಕೊಹ್ಲಿ ಈ ದಾಖಲೆಯನ್ನ ಬ್ರೇಕ್ ಮಾಡಬಹುದು.  ಹೀಗೆ 2026ರಲ್ಲೂ ಕೊಹ್ಲಿ ಹತ್ತಾರು ದಾಖಲೆಗಳನ್ನ ಮುರಿಯೋ ಅವಕಾಶ ಹೊಂದಿದ್ದಾರೆ.

Shantha Kumari