ಕೊಹ್ಲಿಗೆ ಹೆಚ್ಚಾಯ್ತಾ ಲಂಡನ್ ಲವ್? – ಮ್ಯಾಚ್ ಇದ್ರಷ್ಟೇ ಭಾರತಕ್ಕೆ ವಿಸಿಟ್
ವಿರಾಟ್-ಅನುಷ್ಕಾ ಫ್ರೀಡಂ ಫ್ಯೂಚರ್
ವಿರಾಟ್ ಕೊಹ್ಲಿ. ಆಧುನಿಕ ಕ್ರಿಕೆಟ್ ಲೋಕದ ರಣಧೀರ. ಟೀಂ ಇಂಡಿಯಾ ಪಾಲಿಗೆ ಸೂಪರ್ ಸ್ಟಾರ್ ಪ್ಲೇಯರ್. ಕ್ರಿಕೆಟ್ ಲೋಕದಲ್ಲಿ ಒಂದು ದಂತಕತೆ. ಕೊಹ್ಲಿಯವ್ರ ಆಟ, ಮೈದಾನದೊಳಗಿನ ಎನರ್ಜಿ, ಅವ್ರ ಫಿಟ್ ನೆಸ್, ಡೆಡಿಕೇಷನ್, ಅಗ್ರೆಶನ್, ಸೆಲೆಬ್ರೇಷನ್ ಅಬ್ಬಬ್ಬಾ.. ನೋಡೋದೇ ಮಜಾ. ಅಭಿಮಾನಿಗಳ ಪಾಲಿಗೆ ಹೀರೋ ಆಗಿರೋ ಅದೇ ಕಿಂಗ್ ಕೊಹ್ಲಿ ಏಕಲವ್ಯನಂತೆ ಬೆಳೆಯುತ್ತಿರೋ ನೂರಾರು ಯಂಗ್ ಕ್ರಿಕೆಟರ್ಸ್ ಗೆ ದ್ರೋಣಾಚಾರ್ಯರೂ ಹೌದು. ಭಾರತದಲ್ಲಿ ಕ್ರಿಕೆಟ್ ಗೆ ಇಷ್ಟರ ಮಟ್ಟಿಗೆ ಕ್ರೇಜ್ ಬರೋಕೆ ವಿರಾಟ್ ಕೊಹ್ಲಿ ಕೂಡ ಒನ್ ಆಫ್ ದಿ ಮೇನ್ ರೀಸನ್. ಬಟ್ ಅದೇ ವಿರಾಟ್ ಕೊಹ್ಲಿ ಭಾರತದೊಂದಿಗಿನ ನಂಟು ಕಳ್ಕೊಳ್ತಿದ್ದಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಶಾಶ್ವತವಾಗಿ ಭಾರತವನ್ನ ಬಿಟ್ಟು ಹೋಗ್ತಾರಾ ಅನ್ನೋ ಅನುಮಾನ ಶುರುವಾಗಿದೆ. ಅಷ್ಟಕ್ಕೂ ಅಭಿಮಾನಿಗಳಿಗೆ ಇಂಥಾದ್ದೊಂದು ಆತಂಕ ಶುರುವಾಗಿರೋದು ಯಾಕೆ? ವಿರಾಟ್ ಫಾರಿನ್ ನಲ್ಲೇ ಸೆಟಲ್ ಆಗೋದು ನಿಜನಾ? ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿ ಬಳಿಕ ಅನುಮಾನ ದುಪ್ಪಟ್ಟಾಗಿದ್ದು ಯಾಕೆ? ರನ್ ಮಷಿನ್ ಸುತ್ತ ಸುಳಿದಾಡ್ತಿರೋ ಡೌಟ್ಸ್ ಏನು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಗಿಲ್ಲಿ ಕಿತ್ತೋಗಿರೋ ನಟ – Dolo 650 ಶಶಿರೇಖಾ ಎಡವಟ್ಟು
ಕ್ರಿಕೆಟ್ ಅಂದ್ರೆ ಭಾರತೀಯರಿಗೆ ಥಟ್ ಅಂತಾ ನೆನಪಾಗೋದೇ ವಿರಾಟ್ ಕೊಹ್ಲಿ. ಅಷ್ಟೇ ಯಾಕೆ ವಿದೇಶಗಳಲ್ಲೂ ಕೂಡ ವಿರಾಟ್ ಕೊಹ್ಲಿಗೆ ಕೋಟ್ಯಂತರ ಫ್ಯಾನ್ಸ್ ಇದ್ದಾರೆ. ಕ್ರಿಕೆಟ್ ಲೋಕದಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನ ಹೊಂದಿರೋ ವಿರಾಟ್ ಕೊಹ್ಲಿ ಈಗಾಗ್ಲೇ ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಗುಡ್ ಬೈ ಹೇಳಿದ್ದಾರೆ. ಸದ್ಯ ಟೆಸ್ಟ್ ಮತ್ತು ಏಕದಿನ ಮಾದರಿಯಲ್ಲಿ ಮಾತ್ರ ಕಾಣಿಸಿಕೊಳ್ತಿದ್ದಾರೆ. ಇನ್ನು ಎರಡ್ಮೂರು ವರ್ಷಗಳ ಬಳಿಕ ಎಲ್ಲಾ ಮಾದರಿಯ ಕ್ರಿಕೆಟ್ನಿಂದಲೂ ದೂರವಾಗುವ ಸಾಧ್ಯತೆ ಇದೆ. ಬಟ್ ಈಗ ಕಾಡ್ತಿರೋ ಪ್ರಶ್ನೆ ಅಂದ್ರೆ ನಿವೃತ್ತಿ ಬಳಿಕ ವಾಟ್ ನೆಕ್ಸ್ಟ್ ಅನ್ನೋದು. ಈ ವಾಟ್ ನೆಕ್ಸ್ಟ್ ಅನ್ನೋದಕ್ಕೆ ಬರ್ತಿರೋ ಉತ್ತರವೇ ಹಾರಿಬಲ್ ಆಗಿದೆ. ಅದುವೇ ವಿರಾಟ್ ಫಾರಿನ್ನಲ್ಲೇ ಸೆಟಲ್ ಆಗ್ತಾರೆ. ಅದೂ ಕೂಡ ಲಂಡನ್‌ಗೆ ಶಿಫ್ಟ್ ಆಗ್ತಾರೆ ಅನ್ನೋ ಸುದ್ದಿ. ಅದಕ್ಕೆ ಪುಷ್ಠಿ ನೀಡುವಂತಿದೆ ವಿರಾಟ್ರ ನಡೆ ಕೂಡ.
ಬಾಂಗ್ಲಾ ಟೆಸ್ಟ್ ಸರಣಿ ಮುಗಿದ ಬೆನ್ನಲ್ಲೇ ಲಂಡನ್ ಗೆ ಹಾರಿದ ಕೊಹ್ಲಿ!
ನೀವು ಇತ್ತೀಚಿನ ಎರಡ್ಮೂರು ವರ್ಷಗಳಿಂದ ವಿರಾಟ್ ಕೊಹ್ಲಿಯವ್ರ ಪರ್ಸನಲ್ ಲೈಫ್ ಬಗ್ಗೆ ಗಮನಿಸಿದ್ರೆ ನಿಮಗೂ ಕೂಡ ಈ ಪ್ರಶ್ನೆ ಕಾಡ್ತಾನೇ ಇರುತ್ತೆ. ವಿರಾಟ್ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಇದ್ದಿದ್ದಕ್ಕಿಂತ ಹೆಚ್ಚಾಗಿ ಲಂಡನ್ನಲ್ಲೇ ಇರ್ತಾರೆ. ಮ್ಯಾಚ್ಗಳು ಇದ್ದಾಗಷ್ಟೇ ಭಾರತಕ್ಕೆ ವಿಸಿಟ್ ಹಾಕ್ತಿದ್ದಾರೆ. ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆರಂಭಕ್ಕೂ ನಾಲ್ಕು ದಿನಗಳ ಮುನ್ನ ಚೆನ್ನೈಗೆ ಬಂದಿದ್ದ ವಿರಾಟ್ ಅಭ್ಯಾಸ ಪಂದ್ಯಗಳಲ್ಲಿ ಭಾಗಿಯಾಗಿದ್ರು. ಆನಂತ್ರ ಚೆಪಾಕ್ ಮೈದಾನದಲ್ಲಿ ಮೊದಲ ಮ್ಯಾಚ್ ಮುಗಿಸಿ ಕಾನ್ಪುರದಲ್ಲಿ ನಡೆದ ಎರಡನೇ ಟೆಸ್ಟ್ ಮ್ಯಾಚ್ನಲ್ಲಿ ಆಡಿದ್ರು. ಕಾನ್ಪುರದ ಪಂದ್ಯ ಮುಗಿಯುತ್ತಿದ್ದಂತೆ ಮತ್ತೆ ಲಂಡನ್‌ಗೆ ಹಾರಿದ್ದಾರೆ. ಲಂಡನ್ನಲ್ಲೇ ಇರುವ ಪತ್ನಿ, ಮಕ್ಕಳ ಜೊತೆ ಟೈಂ ಸ್ಪೆಂಡ್ ಮಾಡ್ತಿದ್ದಾರೆ.
ಲಂಡನ್ ನಲ್ಲೇ ಸೆಟಲ್ ಆಗಲು ಸಿದ್ಧವಾದ್ರಾ ವಿರಾಟ್?
ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಎರಡನೇ ಮಗುವಿಗೆ ಪ್ರೆಗ್ನೆಂಟ್ ಆದಾಗಿನಿಂದ್ಲೂ ಲಂಡನ್ನಲ್ಲೇ ಇದ್ರು. ಮಗ ಅಕಾಯ್ ಹುಟ್ಟಿದ್ದೂ ಕೂಡ ಅಲ್ಲಿಯೇ. ಅನುಷ್ಕಾ ಶರ್ಮಾ ಗರ್ಭಿಣಿಯಾಗಿದ್ದಾಗ ಸಾಕಷ್ಟು ಸಮಯವನ್ನು ಲಂಡನ್‌ನಲ್ಲಿ ಕಳೆದರು. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಜನಿಸಿದ ಐದು ದಿನಗಳ ನಂತರ ತಮ್ಮ ಮಗು ಹುಟ್ಟಿರುವ ಬಗ್ಗೆ ಘೋಷಣೆ ಮಾಡಿದ್ದರು. ಅಲ್ಲಿಯವರೆಗೆ, ಅಕಾಯ್ ಅವರ ಜನನದ ಬಗ್ಗೆ ಅಭಿಮಾನಿಗಳಿಗೆ ಯಾವುದೇ ಸುಳಿವು ಇರಲಿಲ್ಲ. ಬಾಲಿವುಡ್ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಿಂದ ಅನುಷ್ಕಾ ಶರ್ಮಾ ಕೂಡ ದೂರವುಳಿದಿರುವುದು ಊಹಾಪೋಹ ಹೆಚ್ಚಾಗಲು ಕಾರಣವಾಗಿದೆ. ಕುಟುಂಬದ ಜೊತೆ ಸಮಯ ಕಳೆಯಬೇಕು ಇನ್ನು ಮುಂದೆ ಹೆಚ್ಚು ಸಿನಿಮಾ ಮಾಡಲ್ಲ ಎಂದು ಅನುಷ್ಕಾ ಹೇಳಿಕೊಂಡಿದ್ರು. ಹೀಗಾಗೇ ವಿರಾಟ್ ದಂಪತಿ ಲಂಡನ್ ನಲ್ಲಿಯೇ ನೆಲೆಸುವ ಪ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.
ಟಿ-20 ವಿಶ್ವಕಪ್ ಚಾಂಪಿಯನ್ ಸೆಲೆಬ್ರೇಷನ್ ಮುಗಿಸಿ ಲಂಡನ್ ಗೆ ಹಾರಿದ್ರು!
ವಿರಾಟ್ ಕೊಹ್ಲಿಯವ್ರ ಈ ಲಂಡನ್ ಲವ್ ನಿನ್ನೆ ಮೊನ್ನೆಯದಲ್ಲ. ಐಪಿಎಲ್ ಮುಗಿಸಿ ಲಂಡನ್‌ಗೆ ಹಾರಿದ್ದ ವಿರಾಟ್ ಪತ್ನಿ ಅನುಷ್ಕಾ ಮತ್ತು ಮಕ್ಕಳ ಜೊತೆ ಅಲ್ಲೇ ಇದ್ರು. ಅದಾದ ಬಳಿಕ ಟೀಂ ಇಂಡಿಯಾ ಬಾಯ್ಸ್ ಟಿ-20 ವಿಶ್ವಕಪ್ಗಾಗಿ ಅಮೆರಿಕಕ್ಕೆ ಹಾರಿದ್ರು. ಆ ಬಳಿಕ ವಿರಾಟ್ ಲಂಡನ್ನಿಂದಲೇ ಅಮೆರಿಕಕ್ಕೆ ತೆರಳಿ ತಂಡವನ್ನ ಕೂಡಿಕೊಂಡಿದ್ರು. ಭಾರತ ತಂಡ ಚಾಂಪಿಯನ್ ಪಟ್ಟಕ್ಕೇರಿದ ಮೇಲೆ ಬಾರ್ಬಡೋಸ್‌ನಿಂದ ಭಾರತ ತಂಡದ ಜೊತೆ ಆಗಮಿಸಿದ ವಿರಾಟ್ ಕೊಹ್ಲಿ, ಮುಂಬೈನಲ್ಲಿ ನಡೆದ ತಂಡದ ಜೊತೆ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ರು. ಆ ಬಳಿಕ ಎಲ್ಲಾ ಕ್ರಿಕೆಟಿಗರು ಮನೆಗೆ ತೆರಳಿದರೆ, ಕೊಹ್ಲಿ ಮಾತ್ರ ಮತ್ತೆ ಲಂಡನ್‌ಗೆ ತೆರಳಿದ್ದರು. ಬಳಿಕ ಅಲ್ಲಿಂದಲೇ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗಾಗಿ ಲಂಕಾಗೆ ತೆರಳಿ ಸಿರೀಸ್ ಮುಗೀತಿದ್ದಂತೆ ಮತ್ತೆ ಲಂಡನ್‌ಗೆ ವಾಪಸ್ ಆಗಿದ್ರು.
ಲಂಡನ್ ಬೀದಿಗಳಲ್ಲಿ ಸಾಮಾನ್ಯರಂತೆ ಓಡಾಡುವ ವಿರಾಟ್ ಕೊಹ್ಲಿ!
ವಿರಾಟ್ ಕೊಹ್ಲಿ ಎಂಥಾ ಸ್ಟಾರ್ ಆಟಗಾರ ಅನ್ನೋದು ನಮ್ಗೆ ನಿಮ್ಗೆಲ್ಲಾ ಗೊತ್ತಿರೋ ವಿಚಾರವೇ. ಅವ್ರು ಕ್ರೀಡಾಂಗಣದಲ್ಲಿ ಆಡುವಾಗಲೇ ಹೈ ಸೆಕ್ಯೂರಿಟಿ ನಡುವೆಯೂ ಅಭಿಮಾನಿಗಳು ಸ್ಟೇಡಿಯಂನೊಳಗೆ ನುಗ್ಗಿ ವಿರಾಟ್ ಬಳಿ ಓಡ್ತಾರೆ. ಅವ್ರನ್ನ ನೋಡ್ಬೇಕು, ಒಂದ್ಸಲ ಆದ್ರೂ ಮುಟ್ಟಬೇಕು ಅನ್ನೋ ಕನಸು ಕಾಣ್ತಾರೆ. ಆದ್ರೆ ವಿರಾಟ್ಗೆ ಈ ರೀತಿ ಬದುಕೋದು ಇಷ್ಟ ಇಲ್ಲ. ಸಾಮಾನ್ಯ ಜನರಂತೆ ಬೀದಿ ಬೀದಿಗಳಲ್ಲಿ ಸುತ್ತಾಡ್ಬೇಕು. ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಕೂತು ಫ್ಯಾಮಿಲಿ ಜೊತೆ ಸಮಯ ಕಳೀಬೇಕು ಅಂತಾ. ಆದ್ರೆ ಭಾರತದಲ್ಲಿ ಇದು ಸಾಧ್ಯವಾಗದೇ ಇರೋ ಮಾತು. ಯಾಕಂದ್ರೆ ವಿರಾಟ್ ಕಂಡ್ರೆ ಅವ್ರ ಸುತ್ತ ಅಭಿಮಾನಿಗಳೇ ದಂಡೇ ಸೇರುತ್ತೆ. ಆದ್ರೆ ಲಂಡನ್‌ನಲ್ಲಿ ಹಾಗಲ್ಲ. ಮಕ್ಕಳ ಜೊತೆ ಸಾಮಾನ್ಯರಂತೆ ರಸ್ತೆಗಳಲ್ಲಿ ಓಡಾಡಬಹುದು. ಬೇಕೆನಿಸಿದ್ದನ್ನ ಖರೀದಿ ಮಾಡಬಹುದು. ಇದೇ ಕಾರಣಕ್ಕೆ ವಿರಾಟ್ ದಂಪತಿ ಲಂಡನ್ನ ಹೆಚ್ಚು ಇಷ್ಟ ಪಡ್ತಾರೆ. ಅಲ್ದೇ ಆವತ್ತು ವಿರಾಟ್ ಹೇಳಿದ್ದ ಮಾತು ಕೂಡ ಟೆನ್ಷನ್ ಹೆಚ್ಚುವಂತೆ ಮಾಡಿದೆ. ನಾನು ಕ್ರಿಕೆಟ್ನಿಂದ ನಿವೃತ್ತಿ ಪಡೆದ ಬಳಿಕ ಒಂದಷ್ಟು ದಿನಗಳ ಕಾಲ ನೀವ್ಯಾರು ನನ್ನನ್ನ ನೋಡೋದಿಲ್ಲ ಎಂದಿದ್ರು. ಬಹುಶಃ ಅವ್ರ ಮಾತಿನ ಅರ್ಥ ಇದೇ ಇರ್ಬೇಕು ಅನ್ನೋ ಚರ್ಚೆಯೂ ಇದೆ.
ಒಟ್ನಲ್ಲಿ ವಿರಾಟ್ ಲಂಡನ್ ಪ್ರೀತಿ ವಿಚಾರ ಆಗಾಗ್ಗೆ ಸದ್ದು ಮಾಡ್ತಾನೇ ಇದೆ. ಮೂಲತಃ ನವದೆಹಲಿಯವರಾಗಿರುವ ವಿರಾಟ್ ಅಲ್ಲಿಯೂ ಮನೆಯನ್ನು ಹೊಂದಿದ್ದಾರೆ. ಅವರ ತಾಯಿ, ಸಹೋದರ ಮತ್ತು ಕುಟುಂಬಸ್ಥರು ದೆಹಲಿಯಲ್ಲೇ ವಾಸಿಸುತ್ತಿದ್ದಾರೆ. ಇದಲ್ಲದೇ ವಿರಾಟ್ ಮತ್ತು ಅನುಷ್ಕಾ ಕೂಡ ಮುಂಬೈನಲ್ಲಿ ಮನೆ ಹೊಂದಿದ್ದಾರೆ. ಹೀಗಿದ್ರೂ ಕೂಡ ಫ್ರೀಯಾಗಿ, ಜಾಲಿಯಾಗಿ, ಫ್ಯಾಮಿಲಿ ಜೊತೆ ಸುತ್ತಾಡ್ಬೇಕು, ಮಕ್ಕಳ ಜೊತೆ ಹೊರಗಿನ ಪ್ರಪಂಚದಲ್ಲಿ ಸುತ್ತಾಡ್ಬೇಕು ಅಂತಾ ಲಂಡನ್ ಸೆಲೆಕ್ಟ್ ಮಾಡಿಕೊಳ್ತಿದ್ದಾರೆ. ಆದ್ರೆ ಈ ಲಂಡನ್ ಲವ್ನಿಂದಾಗಿ ಅಲ್ಲಿಯೇ ಸೆಟಲ್ ಆಗದೆ ಇದ್ರೆ ಸಾಕು ಅನ್ನೋದೇ ಕೋಟ್ಯಂತರ ಭಾರತೀಯರು ಮತ್ತು ಅಭಿಮಾನಿಗಳ ಆಶಯ. ಸದ್ಯ ಬಾಂಗ್ಲಾ ಬಳಿಕ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನ ಟೀಂ ಇಂಡಿಯಾ ಆಡಬೇಕಿದೆ. ಅಕ್ಟೋಬರ್ 16 ರಿಂದ ಟೆಸ್ಟ್ ಸರಣಿ ಆರಂಭವಾಗಲಿದ್ದು, ಮೊದಲನೇ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಕೊಹ್ಲಿಗೆ ಬೆಂಗಳೂರು ತುಂಬಾನೇ ಸ್ಪೆಷಲ್ ಆಗಿರೋದ್ರಿಂದ ಹೆಚ್ಚಿನ ಸಂಖ್ಯೆಯಲ್ಲಿ ಫ್ಯಾನ್ಸ್ ಕೂಡ ಬರೋ ನಿರೀಕ್ಷೆ ಇದೆ.