ಇಂಗ್ಲೆಂಡ್ ಸರಣಿಗೂ ಮುನ್ನವೇ ಟೆಸ್ಟ್ ಗೆ ವಿರಾಟ್ ವಿದಾಯ? – ಟೀಂ ಇಂಡಿಯಾಗೆ ದೊಡ್ಡ ಹೊಡೆತ!

ಜೂನ್ 20ರಿಂದ ಭಾರತ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿಗೆ ಆಟಗಾರರ ಆಯ್ಕೆ ಕಸರತ್ತು ನಡೆಯುತ್ತಾ ಇರುವಾಗ್ಲೇ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ನಿವೃತ್ತಿಯ ಆಘಾತ ನೀಡಿದ್ರು. ಇದೀಗ ವಿರಾಟ್ ಕೊಹ್ಲಿ ಕೂಡ ವಿದಾಯದ ಸಂದೇಶ ಸಾರಿದ್ದಾರೆ. ಒಟ್ಟೊಟ್ಟಿಗೆ ಟಿ-20 ಫಾರ್ಮೆಟ್ಗೆ ಗುಡ್ ಬೈ ಹೇಳಿದ್ದ ಈ ಗೆಳೆಯರು ಈಗ ಒಟ್ಟೊಟ್ಟಿಗೆ ಟೆಸ್ಟ್ ಕ್ರಿಕೆಟ್ ಪಯಣವನ್ನೂ ಮುಗಿಸೋಕೆ ರೆಡಿಯಾಗಿದ್ದಾರೆ.
ಇದನ್ನೂ ಓದಿ : RCBಗೆ ಬ್ಯಾಡ್ ಲಕ್ – ಕಪ್ ಅಲ್ಲ ಲಾಲಿಪಾಪ್ ಟ್ರೋಲ್
ವಿರಾಟ್ ಕೊಹ್ಲಿ ಟೀಂ ಇಂಡಿಯಾ ಸ್ಟಾರ್ ಆಟಗಾರ. ಆದ್ರೀಗ ಅದೇ ವಿರಾಟ್ ದೀರ್ಘ ಸ್ವರೂಪದ ಕ್ರಿಕೆಟ್ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇಂಗ್ಲಿಷ್ ಪತ್ರಿಕೆಗಳ ವರದಿ ಪ್ರಕಾರ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸಕ್ಕೂ ಮೊದಲೇ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವ ನಿರ್ಧಾರ ಕೈಗೊಂಡಿದ್ದಾರೆ. ಅಷ್ಟೇ ಅಲ್ಲದೆ ವಿರಾಟ್ ಈಗಾಗ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಅಂದ್ರೆ BCCIಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತನ್ನನ್ನು ಆಯ್ಕೆ ಮಾಡಬೇಡಿ. ತಾನು ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತನಾಗಲು ನಿರ್ಧರಿಸಿದ್ದೇನೆ ಎಂದು ವಿರಾಟ್ ಕೊಹ್ಲಿ ಬಿಸಿಸಿಐ ಆಯ್ಕೆ ಸಮಿತಿಗೆ ತಿಳಿಸಿದ್ದಾರಂತೆ. ಆದ್ರೆ ವಿರಾಟ್ ನಿರ್ಧಾರಕ್ಕೆ ಬಿಸಿಸಿಐ ಸುತಾರಾಂ ಒಪ್ಪಿಲ್ಲ. ಇಂಗ್ಲೆಂಡ್ ಪ್ರವಾಸ ತುಂಬಾನೇ ಇಂಪಾರ್ಟೆಂಟ್ ಆಗಿರೋದ್ರಿಂದ ತಮ್ಮ ನಿರ್ಧಾರವನ್ನು ಮರು ಪರಿಶೀಲಿಸುವಂತೆ ವಿರಾಟ್ ಬಳಿ ಕೇಳಲಾಗಿದೆ. ಬಟ್ ಇದಕ್ಕೆ ವಿರಾಟ್ ಕಡೆಯಿಂದ ಯಾವುದೇ ಕ್ಲಾರಿಟಿ ಸಿಕ್ಕಿಲ್ಲ.
ನಿಜ ಹೇಳ್ಬೇಕಂದ್ರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೋಡೆತ್ತುಗಳಂತೆ ಟೀಂ ಇಂಡಿಯಾ ಪರ ದಶಕದ ಕಾಲ ಆಡಿಕೊಂಡು ಬಂದವ್ರು. ಆದ್ರೆ 2024-25ನೇ ಸಾಲಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ವೇಳೆ ಈ ಇಬ್ಬರು ಅನುಭವಿ ಆಟಗಾರರು ಬ್ಯಾಟಿಂಗ್ ವೇಳೆ ಸಾಕಷ್ಟು ಸ್ಟ್ರಗಲ್ ಪಟ್ಟಿದ್ರು. ಇದೇ ಕಾರಣಕ್ಕೆ ರೋಹಿತ್ ವಿದಾಯ ಹೇಳಿದ್ರು. ಇದೀಗ ಕೊಹ್ಲಿ ಕೂಡ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಆಸ್ಟ್ರೇಲಿಯಾ ಸರಣಿಯ ಮೊದಲ ಪಂದ್ಯದಲ್ಲಿ ಶತಕ ಗಳಿಸಿದ್ದ ಕೊಹ್ಲಿ ನಂತ್ರ ಫಾರ್ಮ್ ಕಳೆದುಕೊಂಡಿದ್ರು. ಇದೀಗ ನಿವೃತ್ತಿ ನಿರ್ಧಾರದಿಂದ ವಿರಾಟ್ ಜಿಂದೆ ಸರಿಯದೇ ಇದ್ರೆ ಟೀಂ ಇಂಡಿಯಾದಲ್ಲಿ ಮಿಡಲ್ ಆರ್ಡರ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಸಾಕಷ್ಟು ಡಿಫ್ರೆನ್ಸ್ ಕ್ರಿಯೇಟ್ ಆಗುತ್ತೆ. ಅದೂ ಅಲ್ದೇ ಸುಮಾರು 11 ವರ್ಷಗಳ ಕಾಲ ಟೆಸ್ಟ್ ತಂಡವನ್ನು ಮುನ್ನಡೆಸಿದ್ದ ರೋಹಿತ್ ಮತ್ತು ಕೊಹ್ಲಿಯಂಥ ಇಬ್ಬರು ಅನುಭವಿ ಆಟಗಾರರು ಒಟ್ಟೊಟ್ಟಿಗೆ ವಿದಾಯ ಹೇಳಿದ್ರೆ ತಂಡಕ್ಕೆ ಮಾರ್ಗದರ್ಶನ ನೀಡುವವರೇ ಇಲ್ಲದಾಗುತ್ತೆ. ಇದು ತಂಡಕ್ಕೂ ದೊಡ್ಡ ಹೊಡೆತ ನೀಡಲಿದೆ.
ವಿರಾಟ್ ಕೊಹ್ಲಿ ಮೂರೂ ಮಾದರಿಗಳಲ್ಲೂ ಸ್ಟಾರ್ ಬ್ಯಾಟ್ಸ್ಮನ್. 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಮಾಡಿದ್ರು. ಅಲ್ಲಿಂಗ ಈವರೆಗೂ 123 ಪಂದ್ಯಗಳ 210 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿದ್ದಾರೆ. 46.85ರ ಸರಾಸರಿಯಲ್ಲಿ 9,230 ರನ್ ಗಳಿಸಿದ್ದಾರೆ. ಈ ವೇಳೆ ವಿರಾಟ್ ಬ್ಯಾಟ್‌ನಿಂದ 7 ದ್ವಿಶತಕ, 30 ಶತಕ, 31 ಅರ್ಧಶತಕಗಳು ಬಂದಿವೆ. ಅಲ್ದೇ 2014ರಿಂದ 2022ರವರೆಗೆ ಟೀಂ ಇಂಡಿಯಾದ ನಾಯಕತ್ವವನ್ನೂ ವಹಿಸಿಕೊಂಡಿದ್ದ ಕೊಹ್ಲಿ, ಈ ಮಾದರಿಯಲ್ಲೂ ಭಾರತದ ಅತ್ಯುತ್ತಮ ನಾಯಕ ಎನಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಿದ 68 ಪಂದ್ಯಗಳಲ್ಲಿ ಭಾರತ 40ರಲ್ಲಿ ಜಯ ಸಾಧಿಸಿತ್ತು. 17ರಲ್ಲಿ ಸೋಲು ಕಂಡರೆ, ಉಳಿದ 11 ಡ್ರಾ ಆಗಿದ್ದವು.