ಕೊಹ್ಲಿ – ಗಿಲ್ ಭರ್ಜರಿ ಜೊತೆಯಾಟ – ಭಾರತಕ್ಕೆ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್‌ಗಳ ಜಯ

ನ್ಯೂಜಿಲೆಂಡ್ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳ ಗೆಲುವು ದಾಖಲಿಸಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆಯನ್ನು ಪಡೆದಿದೆ. ಕೈಲ್ ಜೇಮಿಸನ್ ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಕಿವೀಸ್ ತಂಡ ಕೊನೆಯವರೆಗೂ ಹೋರಾಟವನ್ನು ನೀಡಿತ್ತಾದರೂ ಅಂತಿಮವಾಗಿ ಸೋಲು ಒಪ್ಪಿಕೊಂಡಿತು.
ಭಾನುವಾರ ವಡೋದರದ ಬಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 301 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ಶುಭಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿಯ ಅರ್ಧಶತಕಗಳ ಬಲದಿಂದ 49 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 306 ರನ್‌ಗಳನ್ನು ಗಳಿಸಿ ಗೆಲುವಿನ ನಗೆ ಬೀರಿತು. ಚೇಸಿಂಗ್‌ನಲ್ಲಿ ಭಾರತದ ಪರ ಅದ್ಭುತವಾಗಿ ಬ್ಯಾಟ್ ಮಾಡಿದ ವಿರಾಟ್ ಕೊಹ್ಲಿ, 91 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 93 ರನ್ ಗಳಿಸಿ ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ: ಗುಜರಾತ್ ಜೈಂಟ್ಸ್‌ಗೆ ಎರಡನೇ ಗೆಲುವು – ಕೈ ಬಂದ ಪಂದ್ಯ ಕಳೆದುಕೊಂಡ ಡೆಲ್ಲಿ
ಇನಿಂಗ್ಸ್ ಆರಂಭಿಸಿದ್ದ ರೋಹಿತ್ ಶರ್ಮಾ 26 ರನ್ ಗಳಿಸಿ ಉತ್ತಮ ಆರಂಭ ಪಡೆದಿದ್ದರು, ಆದರೆ, ಕೈಲ್ ಜೇಮಿಸನ್ ಎಸೆತದಲ್ಲಿ ಔಟ್ ಆದರು. ಬಳಿಕ ಎರಡನೇ ವಿಕೆಟ್‌ಗೆ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಶುಭಮನ್ ಗಿಲ್ ನಿರ್ಣಾಯಕ ಜೊತೆಯಾಟವನ್ನು ಆಡಿದರು. ಈ ಜೋಡಿ ಕಿವೀಸ್ ದಾಳಿಯನ್ನು ಸಮರ್ಥವಾಗಿ ಎದುರಿಸಿರು ಹಾಗೂ 118 ರನ್‌ಗಳ ಜೊತೆಯಾಟವನ್ನು ಆಡಿ ತಂಡವನ್ನು 150ರ ಗಡಿಯನ್ನು ದಾಟಿಸಿತು. ಭರ್ಜರಿ ಬ್ಯಾಟಿಂಗ್ ನಡೆಸಿದ ಗಿಲ್, 71 ಎಸೆತಗಳಲ್ಲಿ 56 ರನ್‌ಗಳನ್ನು ಕಲೆ ಹಾಕಿದರು.
ಬಳಿಕ ಗಾಯದಿಂದ ಗುಣಮುಖರಾಗಿ ಭಾರತ ತಂಡಕ್ಕೆ ಮರಳಿದ ಶ್ರೇಯಸ್ ಅಯ್ಯರ್ ಕೂಡ ನಿರಾಶೆ ಮೂಡಿಸಲಿಲ್ಲ. ಅವರು ಆಡಿದ 47 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 49 ರನ್ ಗಳಿಸಿದರು. ಆದರೆ, ಅರ್ಧಶತಕದಂಚಿನಲ್ಲಿ ಅವರು, ಕೈಲ್ ಜೇಮಿಸನ್‌ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಕೆಎಲ್ ರಾಹುಲ್ ಹಾಗೂ ಹರ್ಷಿತ್ ರಾಣಾ ತಲಾ 29 ರನ್‌ಗಳನ್ನು ಗಳಿಸಿ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ನ್ಯೂಜಿಲೆಂಡ್ ತಂಡದ ಪರ ಮೂವರು ಬ್ಯಾಟ್ಸ್‌ಮನ್‌ಗಳ ಅರ್ಧಶತಕವನ್ನು ಬಾರಿಸಿದ್ದರು. ಡೆವೋನ್ ಕಾನ್ವೆ, ಹೆನ್ರಿ ನಿಕೋಲ್ಸ್ ಹಾಗೂ ಡ್ಯಾರಿಲ್ ಮಿಚೆಲ್ ನಿರ್ಣಾಯಕ ಅರ್ಧಶತಕಗಳ ಬಲದಿಂದ ನ್ಯೂಜಿಲೆಂಡ್ ತನ್ನ ಪಾಲಿನ 50 ಓವರ್‌ಗಳಿಗೆ 8 ವಿಕೆಟ್ ನಷ್ಟಕ್ಕೆ 300 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಭಾರತಕ್ಕೆ 301 ರನ್‌ಗಳ ಗುರಿಯನ್ನು ನೀಡಿತ್ತು.

ನೋಡಿರಿ

