ಟೆಸ್ಟ್ ನ ಬೆಸ್ಟ್ ಕ್ಯಾಪ್ಟನ್ ವಿರಾಟ್ – ಕೊಹ್ಲಿಗಿದ್ದ ಅದೃಷ್ಟ ರೋಹಿತ್ ಗೆ ಬದಲಾಗಿದ್ದೆಲ್ಲಿ?
ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಆಸ್ಟ್ರೇಲಿಯಾ ಪಾಲಾದ ಮೇಲೆ ಭಾರತದಲ್ಲಿ ಕ್ಯಾಪ್ಟನ್ಸಿ ವಿಚಾರ ಹಾಟ್ ಟಾಪಿಕ್ ಆಗಿದೆ. ರೆಡ್ ಬಾಲ್ನಲ್ಲಿ ದಶಕದಿಂದಲೂ ಪಾರುಪತ್ಯ ಮೆರೆಯುತ್ತಿದ್ದ ಭಾರತ ಇದೀಗ ಪಾತಾಳಕ್ಕೆ ಕುಸಿದಿರೋ ಬಗ್ಗೆ ಕ್ರಿಕೆಟ್ ಎಕ್ಸ್ಪರ್ಟ್ಸ್ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. 8 ವರ್ಷಗಳ ಕಾಲ ರೆಡ್ ಬಾಲ್ ಕ್ರಿಕೆಟ್‌ನ ನಾಯಕನಾಗಿದ್ದ ಕೊಹ್ಲಿ ಅತೀ ಹೆಚ್ಚು ಬಾರಿ ತಂಡವನ್ನ ಗೆಲುವಿನ ದಡ ಸೇರಿಸಿದ್ದಾರೆ.
ಇದನ್ನೂ ಓದಿ : ಬಾರ್ಡರ್ ಗೆ ಆಹ್ವಾನ ಗವಾಸ್ಕರ್ ಗೆ ಅವಮಾನ – ಟ್ರೋಫಿ ಹೆಸರಿಗೂ ಮರ್ಯಾದೆ ಕೊಟ್ಟಿಲ್ವಾ ಆಸ್ಟ್ರೇಲಿಯಾ?
ಧೋನಿ ಬಳಿಕ ಕ್ಯಾಪ್ಟನ್ಸಿ.. 8 ವರ್ಷಗಳ ಕಾಲ ಉತ್ತಮ ಪ್ರದರ್ಶನ!
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ ಮೊದಲ ನಾಯಕ ವಿರಾಟ್ ಕೊಹ್ಲಿ. 2014-15ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಎಂ.ಎಸ್ ಧೋನಿ ಸರಣಿ ಮಧ್ಯದಲ್ಲೇ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ರು. ಈ ವೇಳೆ ಒಲಿದು ಬಂದ ನಾಯಕತ್ವವನ್ನ ಯಶಸ್ವಿಯಾಗಿ ಮುನ್ನಡೆಸಿದ್ದ ಕೊಹ್ಲಿ ಭಾರತ ಟೆಸ್ಟ್ ಕ್ರಿಕೆಟ್‌ನ ಸಾರ್ವಕಾಲಿಕ ಬೆಸ್ಟ್ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ. ವಿರಾಟ್ ಕೊಹ್ಲಿ 68 ಪಂದ್ಯಗಳಲ್ಲಿ ಭಾರತವನ್ನ ಮುನ್ನಡೆಸಿದ್ದು, ಇದರಲ್ಲಿ ಭಾರತ 40 ಪಂದ್ಯಗಳನ್ನ ಗೆದ್ದಿದೆ. 17 ಪಂದ್ಯಗಳಲ್ಲಿ ಸೋತಿದೆ ಮತ್ತು 11 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿವೆ. ಭಾರತ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಶೇಕಡಾ 58.82ರಷ್ಟು ಗೆಲುವಿನ ಸರಾಸರಿ ಹೊಂದಿದೆ. ಭಾರತ ಪರ ಅತಿ ಹೆಚ್ಚು ಟೆಸ್ಟ್ ಪಂದ್ಯ ಗೆಲ್ಲಿಸಿಕೊಟ್ಟ ನಾಯಕನಾಗಿರುವ ವಿರಾಟ್ ಕೊಹ್ಲಿ, ವಿಶ್ವದಲ್ಲಿ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಮತ್ತು ಆಸ್ಟ್ರೇಲಿಯಾದ ಬೆಸ್ಟ್ ಕ್ಯಾಪ್ಟನ್ ರಿಕಿ ಪಾಂಟಿಂಗ್, ಸ್ಟೀವ್ ಸ್ಮಿತ್ ನಂತರದಲ್ಲಿ ಅತಿ ಹೆಚ್ಚು ಪಂದ್ಯ ಗೆಲ್ಲಿಸಿಕೊಟ್ಟ ನಾಯಕ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ವಿರಾಟ್ ಕೊಹ್ಲಿ 2022ರಲ್ಲಿ ಟೆಸ್ಟ್ ಕ್ರಿಕೆಟ್ ನಾಯಕತ್ವಕ್ಕೆ ದಿಢೀರ್ ರಾಜೀನಾಮೆ ನೀಡಿದ್ರು. ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಏಕದಿನ ನಾಯಕತ್ವದಿಂದ ವಜಾಗೊಂಡಿದ್ದ ವಿರಾಟ್, ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತ ಬಳಿಕ ದೀರ್ಘ ಸ್ವರೂಪದ ಕ್ರಿಕೆಟ್‌ಗೂ ರಾಜೀನಾಮೆ ಕೊಟ್ಟಿದ್ರು.
ಕೊಹ್ಲಿ ಜೊತೆ ತಂಡದಲ್ಲಿದ್ದ ಆಟಗಾರರಿಂದಲೂ ಉತ್ತಮ ಪ್ರದರ್ಶನ!
ಹೌದು. ವಿರಾಟ್ ಕೊಹ್ಲಿ ಒಂದೂ ಐಸಿಸಿ ಟ್ರೋಫಿಗಳನ್ನ ಗೆಲ್ಲದೇ ಇರಬಹುದು. ಬಟ್ ಭಾರತದ ಪರ ಯಶಸ್ವೀ ನಾಯಕ ಎನಿಸಿಕೊಂಡಿದ್ದಾರೆ. ಯಾಕಂದ್ರೆ ಆ ಟೈಮಲ್ಲಿ ಕೊಹ್ಲಿ ಅದ್ಭುತ ಪ್ರದರ್ಶನ ನೀಡ್ತಿದ್ರು. ಹಾಗೇ ಭಾರತವು ಪೇಸ್ ಮತ್ತು ಸ್ಪಿನ್ ವಿಭಾಗಗಳಲ್ಲಿ ಬೌಲಿಂಗ್ ದಾಳಿಯನ್ನು ಹೆಚ್ಚಿಸಿಕೊಂಡಿತ್ತು. ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಉಮೇಶ್ ಯಾದವ್ ಮತ್ತು ರವೀಂದ್ರ ಜಡೇಜಾರಂತಹ ಬೆಂಕಿ ಬೌಲರ್ಸ್ ಇದ್ರು. ಕರುಣ್ ನಾಯರ್, ವೃದ್ಧಿಮಾನ್ ಸಹ, ರೋಹಿತ್ ಶರ್ಮಾ, ಶಿಖರ್ ಧವನ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆಯಂಥ ಆಟಗಾರರು ಟೆಸ್ಟ್ ಕ್ರಿಕೆಟ್‌ನಲ್ಲಿ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ದರು. ಹೀಗಾಗಿ ಕೊಹ್ಲಿ ಇಡೀ ತಂಡದ ಸಪೋರ್ಟ್ ಸಿಕ್ತಾ ಇತ್ತು.
ದ್ರಾವಿಡ್ ಟೈಮಲ್ಲಿ ಅಬ್ಬರ.. ಗಂಭೀರ್ ಬಂದ್ಮೇಲೆ ರೋಹಿತ್ ಡಲ್!
ರೋಹಿತ್ ಶರ್ಮಾ ನಾಯಕತ್ವದಲ್ಲಿ ಇದುವರೆಗೆ ಟೀಂ ಇಂಡಿಯಾ 133 ಪಂದ್ಯಗಳನ್ನ ಆಡಿದೆ. ಈ ಪೈಕಿ 95 ಪಂದ್ಯಗಳನ್ನ ಗೆದ್ದಿದ್ರೆ 32ರಲ್ಲಿ ಸೋತಿದೆ. 3 ಮ್ಯಾಚ್ ಡ್ರಾ ಆದ್ರೆ 2 ಫಲಿತಾಂಶ ಕಂಡಿಲ್ಲ. ಟೆಸ್ಟ್ ನಲ್ಲಿ 24 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿರೋ ರೋಹಿತ್ 12 ಪಂದ್ಯಗಳಲ್ಲಿ ಗೆಲ್ಲಿಸಿಕೊಟ್ಟಿದ್ದಾರೆ. 9 ಪಂದ್ಯಗಳನ್ನ ಸೋತಿದ್ರೆ 3 ಮ್ಯಾಚ್ ಡ್ರಾನಲ್ಲಿ ಅಂತ್ಯ ಕಂಡಿವೆ. ವಿನ್ನಿಂಗ್ ಪರ್ಸೆಂಟೇಜ್ 50 ಇದೆ. ಇನ್ನು ರೋಹಿತ್ ಶರ್ಮಾ ರಾಹುಲ್ ದ್ರಾವಿಡ್ ಅವ್ರು ಹೆಡ್ ಕೋಚ್ ಆಗಿದ್ದಾಗ 14 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನ ಮುನ್ನಡೆಸಿದ್ದಾರೆ. ಈ ಪೈಕಿ 10 ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ. ಇಲ್ಲಿ ಗೆಲುವಿನ ಶೇಕಡಾವಾರು 70ಕ್ಕೂ ಹೆಚ್ಚಿದೆ. ಬಟ್ ಗಂಭೀರ್ ಕೋಚ್ ಆದ್ಮೇಲೆ ರೋಹಿತ್ ಗೆಲುವಿಗಿಂತ ಸೋಲೇ ಹೆಚ್ಚಾಗಿ ಕಂಡಿದ್ದಾರೆ. ಗಂಭೀರ್ ಹೆಡ್ ಕೋಚ್ ಆದ ಮೇಲೆ 10 ಟೆಸ್ಟ್ ಪಂದ್ಯಗಳ ಪೈಕಿ 8 ಪಂದ್ಯಗಳಲ್ಲಿ ಟೀಂ ಲೀಡ್ ಮಾಡಿದ್ದಾರೆ. ಇದ್ರಲ್ಲಿ 2 ಪಂದ್ಯ ಅಷ್ಟೇ ಗೆದ್ದಿರೋದು. ಅದೂ ಬಾಂಗ್ಲಾ ಸರಣಿ ವೇಳೆ. ಉಳಿದಂತೆ 6 ಪಂದ್ಯ ಸೋತಿದ್ದಾರೆ. ಸೋ ಗೆಲುವಿನ ಶೇಕಡಾವಾರು ಜಸ್ಟ್ 20 ಪರ್ಸೆಂಟ್ ಅಷ್ಟೇ ಇದೆ.