ಐಪಿಎಲ್ ನೀತಿ ಸಂಹಿತೆಯನ್ನು ಮೂರು ಬಾರಿ ಉಲ್ಲಂಘಿಸಿದ ವಿರಾಟ್ ಕೊಹ್ಲಿ – ಆರ್‌ಸಿಬಿ ಕೆಲ ಆಟಗಾರರ ಸಂಭಾವನೆಗಿಂತಲೂ ಹೆಚ್ಚು ದಂಡ ಕಟ್ಟಿದ ಕ್ರಿಕೆಟಿಗ..!
ಆರ್‌ಸಿಬಿ ತಂಡದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ದಂಡ ಕಟ್ಟಿದ್ದೇ ಹೆಚ್ಚಾಗಿದೆ. ಇದುವರೆಗೆ ನಡೆದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 3 ಬಾರಿ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಅಲ್ಲದೆ ಮೂರು ಬಾರಿ ಕೂಡ ದಂಡವನ್ನೂ ಸಹ ಪಾವತಿಸಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಚೆನ್ನಾಗಿಯೇ ಪ್ರದರ್ಶನ ನೀಡುತ್ತಿದೆ. ಜೊತೆೆಗೆ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕೂಡಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆಡಿರುವ 9 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 364 ರನ್ ಕಲೆಹಾಕಿದ್ದಾರೆ. 5 ಅರ್ಧಶತಕಗಳನ್ನು ಕೂಡ ಬಾರಿಸಿದ್ದಾರೆ. ಆಟದಲ್ಲಿ ಎಷ್ಟು ಚೆನ್ನಾಗಿ ಪ್ರದರ್ಶನ ತೋರಿದ್ದಾರೋ, ಹಾಗೆಯೇ ಕೆಲ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅತಿರೇಕದ ವರ್ತನೆಯನ್ನೂ ಮುಂದುವರೆಸಿದ್ದಾರೆ. ಈ 9 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 3 ಬಾರಿ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ.
ಇದನ್ನೂ ಓದಿ: ಕೊಹ್ಲಿ ಗಂಭೀರ್ ಜಗಳ – ಇಬ್ಬರಿಗೂ ಪಂದ್ಯದ ಶೇಕಡಾ 100ರಷ್ಟು ದಂಡ..!
ಅಲ್ಲದೆ ಮೂರು ಬಾರಿ ಕೂಡ ದಂಡವನ್ನೂ ಸಹ ಪಾವತಿಸಿದ್ದಾರೆ. ಏಪ್ರಿಲ್ 17 ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದರು. ಈ ರೀತಿಯ ಸಂಭ್ರಮವು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2 ರ ಅಡಿಯಲ್ಲಿ ಲೆವೆಲ್ 1 ಅಪರಾಧವಾಗಿದೆ. ಹೀಗಾಗಿ ವಿರಾಟ್ ಕೊಹ್ಲಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಇದಾದ ಬಳಿಕ ಏಪ್ರಿಲ್ 23 ರಂದು ನಡೆದ ರಾಜಸ್ಥಾನ್ ರಾಯಲ್ಸ್ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್‌ಗಾಗಿ ವಿರಾಟ್ ಕೊಹ್ಲಿ ಶಿಕ್ಷೆಗೆ ಗುರಿಯಾಗಿದ್ದರು. ಈ ಪಂದ್ಯದಲ್ಲಿ ಹಂಗಾಮಿ ನಾಯಕರಾಗಿ ಕಾಣಿಸಿಕೊಂಡಿದ್ದ ವಿರಾಟ್ ಕೊಹ್ಲಿ ನಿಗದಿತ ಸಮಯದೊಳಗೆ 20 ಓವರ್ ಪೂರ್ಣಗೊಳಿಸಿರಲಿಲ್ಲ. ಐಪಿಎಲ್‌ನ ಕನಿಷ್ಠ ಓವರ್ ರೇಟ್ ಅಪರಾಧಗಳ ಅಡಿಯಲ್ಲಿ ಕಿಂಗ್ ಕೊಹ್ಲಿಗೆ 24 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಇದೀಗ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆಯ ಲೆವೆಲ್-2 ಅಪರಾಧಕ್ಕಾಗಿ ವಿರಾಟ್ ಕೊಹ್ಲಿಗೆ ಪಂದ್ಯ ಶೇ.100 ರಷ್ಟು ದಂಡ ವಿಧಿಸಲಾಗಿದೆ. ಈ ಪಂದ್ಯದಲ್ಲಿ ಕೊಹ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಅವರೊಂದಿಗೆ ಮೈದಾನದಲ್ಲೇ ವಾಗ್ವಾದ ನಡೆಸಿದ್ದರು. ಈ ತಪ್ಪಿಗಾಗಿ ಕೊಹ್ಲಿಗೆ 1.07 ಕೋಟಿ ರೂ. ದಂಡ ವಿಧಿಸಲಾಗಿದೆ.
ಈ ಬಾರಿಯ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಒಟ್ಟು 1 ಕೋಟಿ 43 ಲಕ್ಷ ರೂ. ದಂಡವಾಗಿ ಪಾವತಿಸಿದ್ದಾರೆ. ಅಚ್ಚರಿ ಎಂದರೆ ಇದು ಆರ್‌ಸಿಬಿ ತಂಡದ ಕೆಲ ಆಟಗಾರರು ಪಡೆಯುವ ಸಂಭಾವನೆಗಿಂತ ಹೆಚ್ಚು. ಆರ್‌ಸಿಬಿ ಆಟಗಾರರಾದ ಮಹಿಪಾಲ್ ಲೋಮ್ರರ್ (95 ಲಕ್ಷ ರೂ.), ಸುಯಶ್ ಪ್ರಭುದೇಸಾಯಿ (30 ಲಕ್ಷ ರೂ.), ಕರ್ಣ್ ಶರ್ಮಾ (50 ಲಕ್ಷ ರೂ.), ಫಿನ್ ಅಲೆನ್ (80 ಲಕ್ಷ ರೂ.), ಸಿದ್ದಾರ್ಥ್ ಕೌಲ್ (75 ಲಕ್ಷ ರೂ.) ಸೇರಿದಂತೆ ಕೆಲ ಪ್ರಮುಖ ಆಟಗಾರರು ಪಡೆಯುವ ಮೊತ್ತಕ್ಕಿಂತಲೂ ಹೆಚ್ಚು ವಿರಾಟ್ ಕೊಹ್ಲಿ ದಂಡ ಪಾವತಿಸಿದ್ದಾರೆ.