ರೆಡ್ ಆರ್ಮಿಯಲ್ಲಿ KING ಹವಾ – ಪಂದ್ಯಗಳಿಗಷ್ಟೇ ಸೀಮಿತವಾದ್ರಾ ಕೊಹ್ಲಿ?
ನಿವೃತ್ತಿ.. ನಾಪತ್ತೆ.. ಮಾತು ನಿಜವಾಯ್ತಾ?

ರೆಡ್ ಆರ್ಮಿಯಲ್ಲಿ KING ಹವಾ – ಪಂದ್ಯಗಳಿಗಷ್ಟೇ ಸೀಮಿತವಾದ್ರಾ ಕೊಹ್ಲಿ?ನಿವೃತ್ತಿ.. ನಾಪತ್ತೆ.. ಮಾತು ನಿಜವಾಯ್ತಾ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖದರ್ ಈಗ ಸ್ಟಾರ್ಟ್ ಆಗಿದೆ. ಯಾಕಂದ್ರೆ ರೆಡ್ ಆರ್ಮಿಯಲ್ಲಿ ಕಿಂಗ್ ದರ್ಬಾರ್ ಶುರುವಾಗಿದೆ. ಬೆಂಗಳೂರು ಫ್ರಾಂಚೈಸಿಯ ಹಾರ್ಟ್​ಬೀಟ್ ವಿರಾಟ್ ಕೊಹ್ಲಿ ಟೀಂ ಸೇರಿದ್ದು ಪ್ರಾಕ್ಟೀಸ್ ಕೂಡ ಶುರು ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಕೊಹ್ಲಿಯದ್ದೇ ಸದ್ದು ಸುದ್ದಿ ಎಲ್ಲವೂ. ಇಂಟ್ರೆಸ್ಟಿಂಗ್ ಅಂದ್ರೆ ವಿರಾಟ್ ಕೊಹ್ಲಿ ಈಗ ಭಾರತದಲ್ಲಿ ಪಂದ್ಯಗಳಿಗಷ್ಟೇ ಸೀಮಿತವಾಗಿದ್ದಾರೆ. ಆವತ್ತು ಹೇಳಿದ್ದ ಮಾತು ನಿಜವಾದಂತಿದೆ.

ಇದನ್ನೂ ಓದಿ : HITಮ್ಯಾನ್ ಇದ್ರಷ್ಟೇ MIಗೆ ಲಕ್ – ಮೈದಾನದಲ್ಲಿದ್ರೆ ಗೆಲ್ಲುತ್ತಾ ಮುಂಬೈ?

18ನೇ ಸೀಸನ್​ನಲ್ಲಿ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿರೋ ಆರ್​ಸಿಬಿ ಫ್ರಾಂಚೈಸಿ ಈ ಸಲ ಮತ್ತೆ ಚಾಂಪಿಯನ್ ಪಟ್ಟಕ್ಕೇರೋ ಫೇವರೆಟ್ ಟೀಂ ಆಗಿದೆ. ಆಲ್ರೆಡಿ ತಾಲೀಮು ಕೂಡ ಭರ್ಜರಿಯಾಗೇ ನಡೀತಿದೆ. ಆರ್​ಸಿಬಿಯ ಐಕಾನಿಕ್ ಪ್ಲೇಯರ್ ವಿರಾಟ್ ಕೊಹ್ಲಿ ಕೂಡ ಜಾಯ್ನ್ ಆಗಿದ್ದಾರೆ. ಹೊಸ ಹೇರ್​ಸ್ಟೈಲ್​ನಲ್ಲಿ ಫಿಟ್ ಌಂಡ್ ಫೈನ್ ಆಗಿ ಟೀಂ ಸೇರಿರೋ ವಿರಾಟ್ ಸೆಂಟ್ರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾರೆ. ಇನ್ನು ಹೊರಗೆ ಆಲ್ರೆಡಿ ಜೆರ್ಸಿ ಕ್ರೇಜ್ ಸ್ಟಾರ್ಟ್ ಆಗಿದ್ದು ಕೆಲವೆಡೆ ಪೂಮಾ ಜೆರ್ಸಿಗಳು ಸೋಲ್ಡ್​ಔಟ್ ಆಗಿದ್ರೆ ಪುಟ್ಟ ಬಾಲಕಿಯೊಬ್ಬಳು ಆರ್​ಸಿಬಿ ಜೆರ್ಸಿಗಾಗಿ ಹಠ ಹಿಡಿದು ಆ ನಂತ್ರ ಅದೇ ಜೆರ್ಸಿ ಧರಿಸಿ ಖುಷಿಯಾದ ವಿಡಿಯೋ ಕೂಡ ವೈರಲ್ ಆಗ್ತಿದೆ.

ನೆಟ್ಸ್ ನಲ್ಲಿ ಪ್ರಾಕ್ಟೀಸ್ ಸ್ಟಾರ್ಟ್ ಮಾಡಿದ ಕಿಂಗ್!

ಐಪಿಎಲ್​ನ ಹಾಲಿ ಚಾಂಪಿಯನ್ ಆರ್‌ಸಿಬಿ ಕ್ಯಾಂಪ್​ನಲ್ಲಿ ಕೆಲ ವಿದೇಶೀ ಆಟಗಾರರನ್ನ ಹೊರತುಪಡಿಸಿ ಉಳಿದೆಲ್ಲ ಆಟಗಾರರು ಬೆಂಗಳೂರಿಗೆ ಆಗಮಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೋಟೋಶೂಟ್, ಪ್ರಾಕ್ಟೀಸ್ ಎಲ್ಲವೂ ನಡೀತಿದೆ. ಇಂಗ್ಲೆಂಡ್‌ನ ಜೋರ್ಡನ್ ಕಾಕ್ಸ್, ಜಿತೇಶ್ ಶರ್ಮ, ವಿರಾಟ್ ಕೊಹ್ಲಿ, ಕೃನಾಲ್ ಪಾಂಡ್ಯ, ಸುಯಶ್ ಶರ್ಮ, ದೇವದತ್ ಪಡಿಕ್ಕಲ್, ಭುವನೇಶ್ವರ್ ಕುಮಾರ್ ಹಾಗೂ ವೆಂಕಟೇಶ್ ಅಯ್ಯರ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಯಶ್ ದಯಾಳ್ ಈ ಸೀಸನ್‌ನಲ್ಲಿ ಕಣಕ್ಕಿಳಿತಾರಾ ಇಲ್ವಾ ಅನ್ನೋ ಬಗ್ಗೆ  ಫ್ರಾಂಚೈಸಿ ಆಗ್ಲಿ ಅಥವಾ ಬಿಸಿಸಿಐ ಆಗ್ಲಿ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಗುಟ್ಟಾಗಿ ಮದುವೆ ಆಗಿರುವ ಯಶ್ ದಯಾಳ್, ಮುಂಬೈನಲ್ಲಿ ಫ್ರಾಂಚೈಸಿ ಆಯೋಜಿಸಿದ್ದ ಪೂರ್ವಸಿದ್ಧತಾ ಶಿಬಿರದಲ್ಲೂ ಭಾಗಿ ಆಗಿರಲಿಲ್ಲ. ಇನ್ನು ಕೊಹ್ಲಿ ಬಂದ ಬಳಿಕ ಆರ್​ಸಿಬಿಯಲ್ಲಿ ಮತ್ತಷ್ಟು ರಂಗು ಹೆಚ್ಚಾಗಿದೆ. ಐಪಿಎಲ್‌ಗಾಗಿ ಲಂಡನ್‌ನಲ್ಲಿ ಪ್ರೀ ಪ್ರಿಪರೇಷನ್ ಆರಂಭಿಸಿದ್ದ ಕೊಹ್ಲಿ, ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನ ಶೇರ್ ಮಾಡಿದ್ರು. ಕಳೆದ ವರ್ಷ ಕಾಲ್ತುಳಿತದ ಬಳಿಕ ಒಂದ್ಸಲ ಮಾತ್ರ ಬೆಂಗಳೂರಿಗೆ ಬಂದಿದ್ರು. ಅದೂ ಕೂಡ  ವಿಜಯ್ ಹಜಾರೆ ಟ್ರೋಫಿ ಪಂದ್ಯಕ್ಕಾಗಿ. ಆ ನಂತ್ರ ಈಗ ಮತ್ತೆ ಬಂದಿದ್ದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯವನ್ನಾಡಲಿದ್ದಾರೆ. ಆರ್​ಸಿಬಿ ಮ್ಯಾಚ್ ಅಂದ್ರೆ ಅಲ್ಲಿ ವಿರಾಟ್ ಕೊಹ್ಲಿ ಖದರ್ ಇರ್ಲೇಬೇಕು. ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತರಬೇತಿಯಲ್ಲಿ ಭಾಗಿಯಾಗಿದ್ದಾರೆ. ಕೊಹ್ಲಿಯವ್ರ ಕೆಲ ಫೋಟೋಗಳನ್ನ ಆರ್​ಸಿಬಿ ಫ್ರಾಂಚೈಸಿ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿದೆ.

ಪಂದ್ಯಗಳನ್ನು ಆಡಲು ಮಾತ್ರನಾ ಕೊಹ್ಲಿ ಭಾರತಕ್ಕೆ ಬರೋದು?

ವಿರಾಟ್ ಕೊಹ್ಲಿ ಈಗ ಪಂದ್ಯಗಳು ಇದ್ದಾಗ ಮಾತ್ರವೇ ಕಾಣಿಸಿಕೊಳ್ತಿದ್ದಾರೆ. ಉಳಿದಂತೆ ಅವ್ರ ಪತ್ತೆಯೇ ಇರೋದಿಲ್ಲ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಬಳಿಕ ಲಂಡನ್​ಗೆ ಹಾರಿದ್ದ ಕೊಹ್ಲಿ ಆ ನಂತ್ರ ಆಶ್ರಮಕ್ಕೆ ಭೇಟಿ ನೀಡಲು ಒಮ್ಮೆ ಬಂದಿದ್ರು. ಈಗ ಐಪಿಎಲ್​ಗಾಗಿ ಮತ್ತೆ ಭಾರತಕ್ಕೆ ಬಂದಿದ್ದಾರೆ. ಸಚಿನ್ ತೆಂಡೂಲ್ಕರ್ ಅವ್ರ ಪುತ್ರ ಅರ್ಜುನ್ ತೆಂಡೂಲ್ಕರ್ ಮದುವೆಗಾಗ್ಲಿ ಅಥವಾ ಶಿಖರ್ ಧವನ್, ಕುಲ್ದೀಪ್ ಯಾದವ್ ಮದುವೆಗಳಿಗಾಗ್ಲಿ, ಟಿ-20 ವಿಶ್ವಕಪ್ ಪಂದ್ಯಗಳು ಭಾರತದಲ್ಲೇ ನಡೆದ್ರೂ ಯಾವ ಪಂದ್ಯದ ಟೈಮಲ್ಲೂ ಕಾಣಿಸಿಕೊಂಡಿರಲಿಲ್ಲ. ಫೈನಲ್​ ಮ್ಯಾಚ್​ಗೂ ಅವ್ರ ಪ್ರಸೆನ್ಸ್ ಇರ್ಲಿಲ್ಲ. ಅಷ್ಟೇ ಬಿಸಿಸಿಐನ ವಾರ್ಷಿಕ ನಮನ್ ಅವಾರ್ಡ್ಸ್ ನಲ್ಲಿ ಕೊಹ್ಲಿ ಸುಳಿವೇ ಇರ್ಲಿಲ್ಲ. ಸೋ ಇದನ್ನೆಲ್ಲಾ ನೋಡಿದ್ರೆ ವಿರಾಟ್ ಕೊಹ್ಲಿ ಆವತ್ತು ಆಡಿದ್ದ ಮಾತು ನಿಜವಾಗುತ್ತಾ ಅನ್ನೋ ಆತಂಕ ಶುರುವಾಗಿದೆ.

ನಿವೃತ್ತಿ ಬಳಿಕ ಸ್ವಲ್ಪ ಸಮಯದವರೆಗೆ ನಾನು ಕಾಣಿಸಲ್ಲ ಎಂದಿದ್ದ ಕೊಹ್ಲಿ!

2024ರ ಐಪಿಎಲ್ ವೇಳೆ ವಿರಾಟ್ ಕೊಹ್ಲಿ ಹೇಳಿದ್ದ ಮಾತು ಸಾಕಷ್ಟು ಸದ್ದು ಮಾಡಿತ್ತು. ರಾಯಲ್ ಗಾಲಾ ಡಿನ್ನರ್ ನಲ್ಲಿ ಮಾತನಾಡಿದ್ದ ಕೊಹ್ಲಿ ಅಚ್ಚರಿಯ ಹೇಳಿಕೆ ನೀಡಿದ್ರು. ಅದೂ ಕೂಡ ತಮ್ಮ ನಿವೃತ್ತಿ ಹಾಗೂ ನಿವೃತ್ತಿ ನಂತರದ ನಿರ್ಧಾರಗಳು ಶಾಕಿಂಗ್ ಎನಿಸುವಂತಿತ್ತು. ಕ್ರೀಡಾಪಟುವಾಗಿ, ನಾವು ನಮ್ಮ ವೃತ್ತಿಜೀವನಕ್ಕೆ ಒಂದು ಡೆಡ್​ಲೈನ್ ಅಂತಾ ಇರುತ್ತೆ. ಆ ದಿನ ಅಯ್ಯೋ ನಾನು ಏನ್ ಮಾಡಿದ್ದೇನೆ ಅನ್ಕೊಂಡು ನನ್ನ ವೃತ್ತಿಜೀವನವನ್ನು ಕೊನೆಗೊಳಿಸಲು ನಾನು ಬಯಸುವುದಿಲ್ಲ. ಯಾಕೆಂದರೆ ನಾನು ಯಾವಾಗ್ಲೂ ಇದೇ ಥರ ಇರೋಕೆ ಆಗಲ್ಲ. ಹಾಗಾಗಿ ನಾನು ಯಾವುದೇ ಕೆಲಸವನ್ನು ಇನ್ ಕಂಪ್ಲೀಟ್ ಆಗೋಕೆ ಬಿಡಲ್ಲ. ಯಾಕಂದ್ರೆ ಆ ನಂತ್ರ ನಾನು ರಿಗ್ರೇಟ್ ಆಗ್ಬೋದು. ಒಮ್ಮೆ ನನ್ನ ಕೆಲಸ ಮುಗಿದರೆ ನಾನು ನಿವೃತ್ತಿ ಘೋಷಿಸುತ್ತೇನೆ. ನೀವು ಸ್ವಲ್ಪ ಸಮಯದವರೆಗೆ ನನ್ನನ್ನು ನೋಡುವುದಿಲ್ಲ. ಹಾಗಾಗಿ ನಾನು ಆಟವಾಡುವವರೆಗೂ ನನ್ನ ಎಲ್ಲವನ್ನೂ ನೀಡಲು ಬಯಸುತ್ತೇನೆ. ಯಾವುದೇ ವಿಷಾದವಿಲ್ಲದೆ ವೃತ್ತಿಜೀವನವನ್ನು ಕೊನೆಗೊಳಿಸಲು ಇಚ್ಛಿಸಿದ್ದೇನೆ ಎಂದಿದ್ರು. ಸೋ ಇದೇ ಮಾತುಗಳೇ ಈಗ ಅಭಿಮಾನಿಗಳನ್ನೂ ಕಾಡ್ತಿದೆ. ವಿರಾಟ್ ಆಲ್ರೆಡಿ ಟಿ-20ಐ ಹಾಗೇ ಟೆಸ್ಟ್ ಪಂದ್ಯಗಳಿಗೆ ಗುಡ್ ಬೈ ಹೇಳಿದ್ದಾರೆ. ಏಕದಿನ ಮತ್ತು ಐಪಿಎಲ್ ನಲ್ಲಿ ಮಾತ್ರ ಆಡ್ತಿದ್ದಾರೆ. ಬಹುಶಃ ಎಲ್ಲಾ ಮಾದರಿಗೂ ಗುಡ್ ಬೈ ಹೇಳಿದ್ರೆ ಒಂದಷ್ಟು ವರ್ಷ ಯಾರ ಕಣ್ಣಿಗೂ ಬೀಳಲ್ವೇನೋ ಎನ್ನೋ ಚರ್ಚೆ ನಡೀತಿದೆ. ಕ್ರಿಕೆಟ್​ಗಾಗಿ ಎಲ್ಲವನ್ನೂ ಕೊಟ್ಟಿರೋ ಕೊಹ್ಲಿ ತಮಗಾಗಿ ಹಾಗೇ ತಮ್ಮವರಿಗಾಗಿ ಒಂದಷ್ಟು ವರ್ಷಗಳನ್ನ ಮೀಸಲಿಡೋ ಪ್ಲ್ಯಾನ್​ನಲ್ಲಿದ್ದಾರೆ.

ಚಿನ್ನಸ್ವಾಮಿಯಲ್ಲಿ ಆಡೋದಂದ್ರೆ ಕೊಹ್ಲಿಗೆ ಅಚ್ಚುಮೆಚ್ಚು!

ಬೆಂಗಳೂರು ಹಾಗೇ ಚಿನ್ನಸ್ವಾಮಿ ಅಂದ್ರೆ ಕೊಹ್ಲಿ ಅಚ್ಚುಮೆಚ್ಚು. ನನ್ನ ಸೆಕೆಂಡ್ ಹೋಂ ಅಂತಾ ಸಾಕಷ್ಟು ಸಲ ಹೇಳಿಕೊಂಡಿದ್ದಾರೆ. ಇನ್ನು ಈ ಬಾರಿ ಒಟ್ಟಾರೆಯಾಗಿ ಆರ್‌ಸಿಬಿ ತನ್ನ ತವರಿನ 7 ಪಂದ್ಯಗಳ ಪೈಕಿ 5 ಪಂದ್ಯಗಳನ್ನು ಚಿನ್ನಸ್ವಾಮಿಯಲ್ಲಿ ಆಡಲಿದೆ. ಇನ್ನೆರಡು ಪಂದ್ಯಗಳು ರಾಯ್ಪುರದಲ್ಲಿ ನಡೆಯಲಿವೆ. ಐಪಿಎಲ್‌ಗೂ ಮುನ್ನ ಆರ್‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮ ಸಹ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆಯಬೇಕಿದೆ. ಕಳೆದ ವರ್ಷ ಜೂನ್‌ನಲ್ಲಿ ಉಂಟಾದ ಕಾಲ್ತುಳಿತದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣ ಗೊಂದಲದ ಗೂಡಾಗಿತ್ತು. ಬಟ್ ಈಗ ಎಲ್ಲಾ ವಿಘ್ನ ಕಳೆದು ಇಲ್ಲೇ ಪಂದ್ಯಗಳನ್ನ ಆಡ್ತಿರೋದು ಕೊಹ್ಲಿಗೂ ಖುಷಿ ಇದೆ.

Shantha Kumari

Leave a Reply

Your email address will not be published. Required fields are marked *