ರಣಜಿಯಲ್ಲೂ ಕೈಕೊಟ್ಟ ಕೊಹ್ಲಿ – BCCIಗೆ ಶುರುವಾಯ್ತು ಅಸಲಿ ಸವಾಲು
13 ವರ್ಷಗಳ ಬಳಿಕ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ದೆಹಲಿ ಪರವಾಗಿ ರಣಜಿ ಪಂದ್ಯವನ್ನಾಡಲು ಮೈದಾನಕ್ಕೆ ಇಳಿದಿದ್ದಾರೆ. ಕೊಹ್ಲಿ ರೀ ಎಂಟ್ರಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳೂ ನಾಚಿಸುವಷ್ಟು ಅಭಿಮಾನಿಗಳ ಸಾಗರವೇ ಸೇರಿತ್ತು. ಅರುಣ್ ಜೇಟ್ಲಿ ಮೈದಾನದ ಮೂಲೆ ಮೂಲೆಯಲ್ಲೂ ಜನರ ದಂಡು. ಡೊಮೆಸ್ಟಿಕ್ ಕ್ರಿಕೆಟ್‌ನಲ್ಲಿ ಈ ಮಟ್ಟಿಗಿನ ಜನಜಾತ್ರೆ ನೋಡಿ ಪೊಲೀಸರೇ ಬೆಸ್ತು ಬಿದ್ದಿದ್ರು. ಹೀಗೆ ಇಡೀ ವಿಶ್ವಕ್ರಿಕೆಟ್ಟೇ ರಣಜಿಯತ್ತ ತಿರುಗಿ ನೋಡಿದ್ರೆ ವಿರಾಟ್ ಕೊಹ್ಲಿ ಮತ್ತೊಮ್ಮೆ ನಿರಾಸೆ ಮೂಡಿಸಿದ್ರು.
ಇದನ್ನೂ ಓದಿ : PAK ಬಣ್ಣ ಬಯಲಿಗೆಳೆದ ಪತ್ರಿಕೆ – ಗಬ್ಬೆದ್ದ ಮೈದಾನಗಳಲ್ಲೇ ICC ಟೂರ್ನಿ
ರಣಜಿಯಲ್ಲಿ ಮೈದಾನಕ್ಕೆ ಇಳಿಯುವ ವಿರಾಟ್ ಕೊಹ್ಲಿಯನ್ನ ನೋಡೋಕಂತ್ಲೇ ಅರುಣ್ ಜೇಟ್ಲಿ ಮೈದಾನದಲ್ಲಿ ಜನಸಾಗರವೇ ನೆರೆದಿತ್ತು. ಕ್ರೀಡಾಂಗಣದ ಒಳಗೆ ಮತ್ತು ಹೊರಗೆ, ಅಭಿಮಾನಿಗಳ ಉತ್ಸಾಹ ಮತ್ತು ಕೊಹ್ಲಿ ಪರ ಘೋಷಣೆಗಳು ಮುಗಿಲುಮುಟ್ಟಿತ್ತು. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಕೊಹ್ಲಿ ಪೋಸ್ಟರ್ಗಳು, ಫೋಟೋಗಳೇ ರಾರಾಜಿಸುತ್ತಿದ್ವು. ಆರಂಭದಲ್ಲಿ ಕೆಲವೇ ಸ್ಟ್ಯಾಂಡ್ಗಳಲ್ಲಿ ಮಾತ್ರ ಫ್ಯಾನ್ಸ್ ಎಂಟ್ರಿಗೆ ಅವಕಾಶವಿತ್ತು. ಹಾಗಿದ್ರೂ, ಸುಮಾರು 16 ಸಾವಿರ ಕ್ರಿಕೆಟ್ ಫ್ಯಾನ್ಸ್ ಸ್ಟೇಡಿಯಂನಲ್ಲಿ ಜಮಾಯಿಸಿದರು. ರಣಜಿ ಟ್ರೋಫಿ ಪಂದ್ಯಕ್ಕೆ ಅರುಣ್ ಜೇಟ್ಲಿ ಸ್ಟೇಡಿಯಂ ಹೌಸ್ಫುಲ್ ಆಗಿದ್ದು ಇತಿಹಾಸದಲ್ಲೇ ಇದೇ ಮೊದಲು ಅನ್ಸುತ್ತೆ. ಅದ್ರಲ್ಲೂ ಒಬ್ಬ ಅಭಿಮಾನಿಯಂತೂ ಮೈದಾನಕ್ಕೆ ನುಗ್ಗಿದ್ದ. ಕೊಹ್ಲಿಯತ್ತ ಓಡಿ ಹೋಗಿ ಅವ್ರ ಪಾದ ಮುಟ್ಟಿ ನಮಸ್ಕರಿದ್ದ. ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ಮೈದಾನದಿಂದ ಹೊರಗೆ ಎಳೆದುಕೊಂಡು ಹೋಗಿದ್ರು. ಈ ವೇಳೆ ಒಬ್ಬ ಸಿಬ್ಬಂದಿ ಆ ಯುಕವನ ತಲೆಗೆ ಹೊಡೆದಿದ್ರು. ಈ ವೇಳೆ ಕೊಹ್ಲಿ ಆತನಿಗೆ ಏನೂ ಮಾಡಬಾರದು ಎಂದು ಕೈಸನ್ನೆ ಮೂಲಕ ಭದ್ರತಾ ಸಿಬ್ಬಂದಿಗಳಿಗೆ ಸೂಚಿಸಿದ್ರು.
ಇಲ್ಲಿ ಇನ್ನೊಂದು ಅಚ್ಚರಿಯ ವಿಚಾರ ಅಂದ್ರೆ ಕ್ರೀಡಾಂಗಣದ 15 ಮತ್ತು 16ನೇ ಗೇಟ್ ಮೂಲಕ ನಾರ್ತ್ ಎಂಡ್ ಸ್ಟ್ಯಾಂಡಿಗೆ ಉಚಿತ ಪ್ರವೇಶ ಘೋಷಿಸಲಾಗಿತ್ತು. ಹೀಗಾಗಿ ಮೈದಾನದೊಳಗೆ ಪ್ರವೇಶಿಸಲು ಜನರ ದಂಡೇ ಹರಿದು ಬಂದಿತ್ತು. ವಿರಾಟ್ ಕೊಹ್ಲಿ ಪ್ರದರ್ಶನ ನೋಡಲು ಜನರು ಮೈದಾನದೊಳಗೆ ನುಗ್ಗಲು ಯತ್ನಿಸಿದ್ದದ್ದರು. ಇದ್ರಿಂದ ಸಣ್ಣಮಟ್ಟದ ಕಾಲ್ತುಳಿತ ಸಂಭವಿಸಿ ಮೂವರು ಗಾಯಗೊಂಡಿದ್ರು. ಅಭಿಮಾನಿಗಳ ಗದ್ದಲದ ವೇಳೆ, ಪೊಲೀಸ್ ವಾಹನಗಳಿಗೂ ಹಾನಿಯಾಗಿವೆ ಎಂದು ವರದಿಯಾಗಿದೆ. ಅಷ್ಟಕ್ಕೂ ಇವ್ರೆಲ್ಲಾ ಬಂದಿದ್ದೇ ಕೊಹ್ಲಿ ಆಟ ನೋಡೋಕೆ. ದೆಹಲಿ ಪೊಲೀಸರು ಊಹಿಸದೇ ಇದ್ದಷ್ಟು ಅಭಿಮಾನಿಗಳು, ಕ್ರೀಡಾಂಗಣದ ಸುತ್ತ ಜಮಾಯಿಸಿದ್ದರು. ಇಂಟ್ರೆಸ್ಟಿಂಗ್ ಅಂದ್ರೆ ಮುಂಜಾನೆ 3 ಗಂಟೆಯಿಂದಲೇ ಕ್ರೀಡಾಂಗಣದ ಹೊರಗೆ ಜನ ಸಾಲುಗಟ್ಟಿ ನಿಂತಿದ್ದರು ಎಂದು ಕ್ರೀಡಾಂಗಣದ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ. ಕೊಹ್ಲಿಯನ್ನು ಕಾಣಲು ಅರುಣ್ ಜೇಟ್ಲಿ ಸ್ಟೇಡಿಯಂನ ಹೊರಗೆ ಸುಮಾರು 2 ಕಿಮೀ ವರೆಗೂ ಸಾಲಿನಲ್ಲಿ ನಿಂತಿದ್ರು. ಅಷ್ಟೇ ಅಲ್ಲದೆ ಮೈದಾನದ ಹೊರಗೆ ಅಭಿಮಾನಿಗಳು ಆರ್ ಸಿಬಿ ಆರ್ ಸಿಬಿ ಅಂತಾ ಘೋಷಣೆಗಳನ್ನ ಕೂಗಿದ್ರು.
ಗುರುವಾರವೇ ವಿರಾಟ್ ಬ್ಯಾಟಿಂಗ್ ಮಾಡ್ತಾರೆ ಅನ್ಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಯಾಕಂದ್ರೆ ರೇಲ್ವೇಸ್ ತಂಡ ಮೊದಲು ಬ್ಯಾಟಿಂಗ್ ಮಾಡಿದ್ದರಿಂದ ದೆಹಲಿ ಪರ ಆಡ್ತಿದ್ದ ವಿರಾಟ್ಗೆ ಚಾನ್ಸ್ ಸಿಕ್ಕಿರಲಿಲ್ಲ. ಹೀಗಾಗಿ ಶುಕ್ರವಾರ ಎರಡನೇ ದಿನದ ಇನ್ನಿಂಗ್ಸ್ನಲ್ಲಿ ವಿರಾಟ್ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸ್ತಾರೆ ಅಂತಾ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಲಗ್ಗೆ ಇಟ್ಟಿದ್ರು. ಆದ್ರೆ ಆ ಕ್ಯೂರಿಯಾಸಿಟಿ ಹೆಚ್ಚು ಹೊತ್ತು ಉಳಿಲೇ ಇಲ್ಲ. 15 ಎಸೆತಗಳಲ್ಲಿ ಆರು ರನ್ ಗಳಿಸಿ ಔಟ್ ಆಗಿದ್ದಾರೆ. ಬಲಗೈ ವೇಗಿ ಹಿಮಾಂಶು ಸಾಂಗ್ವಾನ್ ಅವರ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ್ರು.
ಅಷ್ಟಕ್ಕೂ ಕೊಹ್ಲಿಯನ್ನ ಕ್ಲೀನ್ ಬೌಲ್ಡ್ ಮಾಡಿ ಸಾವಿರಾರು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದು ರೈಲ್ವೇಸ್ ಟೀಮ್ನ ಹಿಮಾಂಶು ಸಾಂಗ್ವಾನ್. ಅಷ್ಟಕ್ಕೂ ಯಾರು ಈತ ಅನ್ನೋ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹುಡುಕಾಟ ಶುರುವಾಗಿದೆ. 29 ವರ್ಷದ ಸಾಂಗ್ವಾನ್ 1995 ರಲ್ಲಿ ದೆಹಲಿಯಲ್ಲಿ ಜನಿಸಿದರು. ಟೀಂ ಇಂಡಿಯಾ ಪರ ಆಡಲು ಕಾಯುತ್ತಿರುವ ಹಿಮಾಂಶು ದೇಶಿಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 2019-20ರಲ್ಲಿ ರೈಲ್ವೇಸ್ ಪರ ರಣಜಿಗೆ ಪಾದಾರ್ಪಣೆ ಮಾಡಿದ ಹಿಮಾಂಶು ಇದುವರೆಗೆ 23 ಪ್ರಥಮ ದರ್ಜೆ ಪಂದ್ಯಗಳಲ್ಲಿ ಒಟ್ಟು 77 ವಿಕೆಟ್ ಪಡೆದಿದ್ದಾರೆ. ಹಾಗೆಯೇ 17 ಲಿಸ್ಟ್ ಎ ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಇವುಗಳ ಹೊರತಾಗಿ ದೇಶೀಯ ಟಿ20ಯಲ್ಲಿ 5 ವಿಕೆಟ್ ಪಡೆದಿದ್ದಾರೆ. ದೇಶೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಮೊದಲು ದೆಹಲಿ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು.