RCB ಸೋಲಿಗೆ ಕೊಹ್ಲಿ ಕಾರಣ? – ಸ್ಟ್ರೈಕ್ ರೇಟ್ ಕಿಡಿ.. ಸೆಂಚುರಿಯೇ ತಪ್ಪಾ?

RCB ಸೋಲಿಗೆ ಕೊಹ್ಲಿ ಕಾರಣ? – ಸ್ಟ್ರೈಕ್ ರೇಟ್ ಕಿಡಿ.. ಸೆಂಚುರಿಯೇ ತಪ್ಪಾ?

ಬ್ಯಾಟ್ ಹಿಡಿದ್ರೆ ಬಿರುಗಾಳಿ. ಫೀಲ್ಡಿಂಗ್​ಗೆ ಇಳಿದ್ರೆ ಹಸಿದ ಹೆಬ್ಬುಲಿ. ವಿರಾಟ್ ಕೊಹ್ಲಿ ಗ್ರೌಂಡ್​ಗೆ ಬರ್ತಿದ್ದಾರೆ ಅಂದ್ರೆನೇ ಅದೊಂದು ಗತ್ತು. ಅಂಥಾದ್ದೊಂದು ಗಾಂಭೀರ್ಯ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಾಮ್ರಾಜ್ಯದ ಅಧಿಪತಿ ವಿರಾಟ್ ಕೊಹ್ಲಿ ಜಗತ್ತು ಕಂಡ ಸರ್ವಶ್ರೇಷ್ಠ ಆಟಗಾರ. ಯಾವ ಕ್ರಿಕೆಟರ್​ಗೂ ಸಿಗದಷ್ಟು ಪ್ರೀತಿ, ಕ್ರೇಜ್ ವಿರಾಟ್​​ಗೆ ಸಿಕ್ಕಿದೆ. ಆದ್ರೆ ವಿಪರ್ಯಾಸ ನೋಡಿ ವಿರಾಟ್ ಕೊಹ್ಲಿ ವಿರಾಟ ರೂಪ ಪ್ರದರ್ಶನ ಮಾಡುತ್ತಾ ದಾಖಲೆಗಳನ್ನ ಧೂಳೀಪಟ ಮಾಡ್ತಿದ್ರೆ ನಮ್ಮ ಆರ್​ಸಿಬಿ ಟೀಂ ಮಾತ್ರ ಪಾಯಿಂಟ್ಸ್ ಟೇಬಲ್​ನಲ್ಲಿ ಕುಸಿಯುತ್ತಲೇ ಸಾಗ್ತಿದೆ. ಅದ್ಯಾವ ಪುರುಷಾರ್ಥಕ್ಕೆ ಕೋಟಿ ಕೋಟಿ ತಗೊಂಡು ಟೀಮ್​ಗೆ ಬಂದವ್ರೆಲ್ಲಾ ತಂಡವನ್ನೇ ಮುಳುಗಿಸುತ್ತಿದ್ದಾರೆ. ಒಂದ್ಕಡೆ ಕೊಹ್ಲಿ ಆಟ ನೋಡಿ ಖುಷಿ ಪಡ್ಬೇಕೋ ಆರ್​​ಸಿಬಿ ಸೋಲು ನೋಡಿ ನೋವು ಪಡ್ಬೇಕು ಗೊತ್ತಾಗ್ತನೇ ಇಲ್ಲ. ಇದ್ರ ನಡುವೆ ಕೊಹ್ಲಿಯವ್ರ ಸೆಂಚುರಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಹಾಗಾದ್ರೆ ಆರ್​ಸಿಬಿ ಗೆಲುವು ವಿರಾಟ್​ಗೆ ಮಾತ್ರ ಬೇಕಾ..? ಉಳಿದವ್ರಿಗೆ ಯಾಕೆ ಆ ಕಿಚ್ಚು ಇಲ್ಲ ಏಕೆ..? ಮ್ಯಾನೇಜ್​ಮೆಂಡ್ ಮಾಡ್ತಿರೋ ಮಿಸ್ಟೇಕ್ಸ್ ಏನು..? ಈ ಕುರಿತ ಮಾಹಿತಿ ಇಲ್ಲಿದೆ..

ಇದನ್ನೂ ಓದಿ:   ಒಂದೇ ಮ್ಯಾಚ್ ನಲ್ಲಿ ಪಾಂಡ್ಯ ದಾಖಲೆ.. – ರೋಹಿತ್ ಗೆ ಬ್ಯಾಡ್ ಲಕ್

ಶನಿವಾರದ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ವಿರುದ್ಧ ಸೋಲುವ ಮೂಲಕ ಆರ್​ಸಿಬಿ ತಂಡ ಹ್ಯಾಟ್ರಿಲ್ ಸೋಲು ಕಂಡಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ಮತ್ತು ಹುಡುಗರು, ತಕ್ಕಮಟ್ಟಿಗೆ ಚೆನ್ನಾಗೇ ಬ್ಯಾಟ್ ಬೀಸಿದ್ದರು. ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಭರ್ಜರಿ 183 ರನ್ ಗಳಿಸಿದ್ರು. ಆರ್‌ಸಿಬಿಯ ರನ್ ಮಷಿನ್ ವಿರಾಟ್ ಕೊಹ್ಲಿ ಅವರು ಭರ್ಜರಿ 113 ರನ್ ಬಾರಿಸಿದ್ರು. ವಿಪರ್ಯಾಸ ಅಂದ್ರೆ ಆರ್‌ಸಿಬಿ ತಂಡ ಗೆಲ್ಲಿಸೋದಕ್ಕೆ ಆಗಲೇ ಇಲ್ಲ. ಕೊಹ್ಲಿ ಬಾರಿಸಿದ 12 ಬೌಂಡರಿ ಮತ್ತು 4 ಸಿಕ್ಸರ್ ನೀರಲ್ಲಿ ಹುಣಸೆಹಣ್ಣು ತೊಳೆದಂತೆ ಆಗೋಯ್ತು. ಆರ್‌ಸಿಬಿ ನೀಡಿದ 184 ರನ್‌ಗಳ ಗುರಿಯನ್ನು ಸುಲಭವಾಗಿ ಚೇಸ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಆಡಿದ ನಾಲ್ಕೂ ಪಂದ್ಯಗಳನ್ನೂ ಹೊಸ ಇತಿಹಾಸ ನಿರ್ಮಿಸಿತು.  ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿಗೆ ಇದು 8ನೇ ಶತಕವಾಗಿದ್ದು, ಈ ಶತಕ ಸಿಡಿಸುವ ಮೂಲಕ ಕೊಹ್ಲಿ, ಐಪಿಎಲ್​ನಲ್ಲಿ ಅಧಿಕ ಶತಕ ಸಿಡಿಸಿದವರ ಪಟ್ಟಿಯಲ್ಲಿ ತಮ್ಮ ಪಾರುಪತ್ಯವನ್ನು ಮುಂದುವರೆಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಕ್ರಿಸ್ ಗೇಲ್ 6 ಶತಕ ಬಾರಿಸಿದ್ದಾರೆ. ಅಬ್ಬರದ ಬ್ಯಾಟಿಂಗ್​ ಮೂಲಕ ಕೊಹ್ಲಿ ಸೆಂಚುರಿ ಬಾರಿಸಿದ್ರೂ ಕೂಡ ಸ್ಟ್ರೈಕ್ ರೇಟ್ ತುಂಬಾನೇ ಚರ್ಚೆಯಾಗ್ತಿದೆ. ಕೊಹ್ಲಿಯಿಂದ್ಲೇ ಆರ್​ಸಿಬಿ ಮ್ಯಾಚ್ ಸೋತಿದ್ದು ಅಂತೆಲ್ಲಾ ಹೇಳಲಾಗ್ತಿದೆ. ಯಾಕಂದ್ರೆ ಈ ಶತಕದ ನಡುವೆಯೂ ಕೊಹ್ಲಿ ಒಂದು ಕೆಟ್ಟ ದಾಖಲೆ ಬರೆದಿದ್ದಾರೆ. ಕೊಹ್ಲಿ ಸಿಡಿಸಿದ ಶತಕ ಐಪಿಎಲ್ ಇತಿಹಾಸದಲ್ಲಿ ನಿಧಾನಗತಿಯ ಶತಕ ಎಂಬ ಬೇಡದ ದಾಖಲೆಗೆ ಗುರಿಯಾಗಿದೆ. ಕೊಹ್ಲಿ ರಾಜಸ್ಥಾನ್​ ವಿರುದ್ಧ ಶತಕ ಸಿಡಿಸುವಾಗ 156.94ರ ಸ್ಟ್ರೈಕ್​ ರೇಟ್​​ನಲ್ಲಿ ರನ್​ ಗಳಿಸಿದ್ದರು. 12 ಬೌಂಡರಿ ಮತ್ತು ಕೇವಲ 4 ಸಿಕ್ಸ್​ ಸಿಡಿಸಿದ್ದರು. ಹೀಗಾಗಿ ಮಾಜಿ ಕ್ರಿಕೆಟರ್ ವೀರೆಂದ್ರ ಸೆಹ್ವಾಗ್ ಕೂಡ ಕೊಹ್ಲಿ ಸ್ಟ್ರೈಕ್ ರೇಟ್ ಬಗ್ಗೆ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿಯ ಸ್ಟ್ರೈಕ್ ರೇಟ್ ಖಂಡಿತವಾಗಿಯೂ ಹೆಚ್ಚಾಗಬೇಕಿತ್ತು ಮತ್ತು ಅವರ ಇನ್ನಿಂಗ್ಸ್ ಮುಂದುವರಿದಂತೆ 200ರ ಸ್ಟ್ರೈಕ್ ರೇಟ್‌ನಲ್ಲಿ ಕೊನೆಗೊಳಿಸಬೇಕಿತ್ತು. ಕೊಹ್ಲಿ ಈ ವಿಷಯದಲ್ಲಿ ತಪ್ಪು ಮಾಡಿರುವುದು ಖಚಿತವಾಗಿದೆ ಎಂದು ಸೆಹ್ವಾಗ್ ಅಭಿಪ್ರಾಯ ಪಟ್ಟಿದ್ದಾರೆ. ಹಾಗೇ ಸೋಶಿಯಲ್ ಮೀಡಿಯಾದಲ್ಲೂ ಕೊಹ್ಲಿಯವ್ರನ್ನ ಟ್ರೋಲ್ ಮಾಡಲಾಗ್ತಿದ್ದು, ಉಳಿದ ಆಟಗಾರರು ರನ್ ರೇಟ್ ಹೆಚ್ಚಿಸಿಕೊಳ್ಳಬಹುದಿತ್ತಲ್ವ ಎಂದು ಕೊಹ್ಲಿ ಪರ ಬ್ಯಾಟ್ ಬೀಸಿದ್ದಾರೆ. ಕೊಹ್ಲಿ ಸ್ಟ್ರೈಕ್​ರೇಟ್ ಸುತ್ತಲಿನ ವಿವಾದದ ಬಗ್ಗೆ ರಾಜಸ್ಥಾನ್ ರಾಯಲ್ಸ್ ತಂಡದ ಸ್ಪಿನ್ನರ್​ ಯುಜ್ವೇಂದ್ರ ಚಹಲ್ ವಿರಾಟ್ ಕೊಹ್ಲಿ ಕುರಿತು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ನೀನು ಎಂದೆಂದಿಗೂ ನನ್ನ ವಿರಾಟ್ ಭಯ್ಯಾ ಎಂದು ಹಂಚಿಕೊಂಡು ಲವ್​ ಎಮೋಜಿಗಳನ್ನು ಹಾಕಿದ್ದಾರೆ. ಇಲ್ಲಿ ಕೊಹ್ಲಿ ಸ್ಟ್ರೈಕ್ ರೇಟ್ ಬಿಟ್ಟು ನೋಡಿದ್ರೆ ಆರ್​ಸಿಬಿಗೆ ಪ್ಲೇಆಫ್ ಗೆ ತಲುಪೋದೇ ದೊಡ್ಡ ಸವಾಲಾಗಿದೆ.

ಪ್ರಸ್ತುತ 5ರಲ್ಲಿ ನಾಲ್ಕರಲ್ಲಿ ಸೋತಿರುವ ಆರ್​ಸಿಬಿ ಗೆದ್ದಿರೋದು ಒಂದೇ ಮ್ಯಾಚ್. ಇನ್ನೂ ಕೂಡ  9 ಪಂದ್ಯಗಳನ್ನು ಆಡಬೇಕಿದೆ. ಈಗ ಒಂದು ಪಂದ್ಯದಲ್ಲಿ ಗೆದ್ದಿರೋದ್ರಿಂದ ಆರ್​ಸಿಬಿ, ಪ್ಲೇಆಫ್ ಪ್ರವೇಶಿಸಲು ಕನಿಷ್ಠ ಏಳು ಪಂದ್ಯಗಳಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ. ಯಾಕಂದ್ರೆ ಯಾವುದೇ ತಂಡ ಪ್ಲೇಆಫ್​ಗೇರಲು ಒಟ್ಟು 16 ಅಂಕ ಗಳಿಸಬೇಕು. ಅಂದರೆ 8 ಪಂದ್ಯಗಳಲ್ಲಿ ಜಯಿಸಬೇಕು. ಈ ಲೆಕ್ಕಾಚಾರ ಹಾಕಿದರೆ, ಆರ್​​ಸಿಬಿ ಇನ್ನೂ 7ರಲ್ಲಿ ಗೆಲ್ಲಬೇಕು. ಹಾಗಂತ ಬರೀ ಗೆಲ್ಲೋದು ಅಲ್ಲ ಅದರ ಜೊತೆಗೆ ಭರ್ಜರಿ ನೆಟ್ ​​ರನ್​ ರೇಟ್​ ಅನ್ನೂ ಕಾಯ್ದುಕೊಳ್ಳಬೇಕಿದೆ. ಉಳಿದ 9ರಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದರಷ್ಟೇ ಯಾವುದೇ ಸಮಸ್ಯೆ ಇಲ್ಲದೆ, ನೇರವಾಗಿ ಪ್ಲೇ ಆಫ್​ಗೆ ಎಂಟ್ರಿಕೊಡಲಿದೆ. ಆಗ 10 ಗೆಲುವು ಸಾಧಿಸಿದಂತಾಗುತ್ತದೆ. ಇದು ಸಾಧ್ಯವಾಗಲಿಲ್ಲವೆಂದರೂ 9ರ ಪೈಕಿ 8 ರಲ್ಲಾದರೂ ಗೆಲ್ಲಲೇಬೇಕು. ಆಗ 9 ಜಯದೊಂದಿಗೆ 18 ಅಂಕ ಪಡೆಯಲಿದೆ. ಪ್ರಸ್ತುತ ಎಲ್ಲಾ ತಂಡಗಳಿಂದ ಉತ್ತಮ ಪ್ರದರ್ಶನ ಹೊರ ಬರುತ್ತಿದ್ದು, ಪಂದ್ಯ ಪಂದ್ಯಕ್ಕೂ ಅನೇಕ ಸವಾಲುಗಳನ್ನು ಮೆಟ್ಟಿನಿಲ್ಲಬೇಕಿದೆ. ಹೆಜ್ಜೆ ಹೆಜ್ಜೆಗೂ ಸವಾಲುಗಳಿವೆ.

ಇಲ್ಲಿ ಆರ್​ಸಿಬಿ ಸೋಲೋಕೆ ಪ್ರಮುಖ ಕಾರಣ ಕೋಟಿ ಕೋಟಿ ವೀರರು. ಐಪಿಎಲ್ ಹರಾಜಿನಲ್ಲಿ ಬಂಡಲ್​ಗಟ್ಟಲೆ ಹಣ ತಗೊಂಡು ಬಂದ ಆಟಗಾರರರೆಲ್ಲಾ ಈಗ ಆರ್​ಸಿಬಿಗೆ ಹೊರಯಾಗಿದ್ದಾರೆ. ಕ್ಯಾಮರೂನ್ ಗ್ರೀನ್​​​ 17.50 ಕೋಟಿ, ಗ್ಲೆನ್ ಮ್ಯಾಕ್ಸ್​ವೆಲ್​​​​ 14.25 ಕೋಟಿ, ಕ್ಯಾಪ್ಟನ್​​ ಫಾಫ್ ಡುಪ್ಲೆಸಿ 7 ಕೋಟಿ ಹಾಗೂ ಅಲ್ಜರಿ ಜೋಸೆಫ್​​​​ 11.50 ಕೋಟಿ. ಒಟ್ಟು ನಾಲ್ವರು ಫಾರಿನ್​​ ಪ್ಲೇಯರ್ಸ್​ಗೆ ನೀಡಿದ್ದು ಬರೋಬ್ಬರಿ 50.25 ಕೋಟಿ ರೂಪಾಯಿ. ಆರ್​ಸಿಬಿ ಫ್ರಾಂಚೈಸಿ ಈ ನಾಲ್ವರ ಮೇಲೆ ಇಷ್ಟೊಂದು ಹಣ ಸುರಿದಿದ್ದು ನಿಜಕ್ಕೂ ವೇಸ್ಟ್​ ಅಂದ್ರೆ ವೇಸ್ಟ್​​​​. ಕೊಟ್ಟ ಕಾಸಿಗೆ ತಕ್ಕ ಆಟ ಇಲ್ಲ. ನಾಲ್ವರು ಅಟ್ಟರ್​ ಪ್ಲಾಫ್​​ ಶೋ​​​ ನೀಡ್ತಿದ್ದಾರೆ. ಇವರ ಫೇಲ್ಯೂರ್​ ಆರ್​ಸಿಬಿ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಗ್ಲೆನ್ ಮ್ಯಾಕ್ಸ್​ವೆಲ್ ಕಳೆದ ಸೀಸನ್​ನಲ್ಲಿ 400 ರನ್ ಗಳಿಸಿ ಧೂಳೆಬ್ಬಿಸಿದ್ರು. ಅದೇ ನಂಬಿಕೆಯಲ್ಲಿ ಆರ್​ಸಿಬಿ ಮ್ಯಾಕ್ಸಿಯನ್ನ ರಿಟೇನ್ ಮಾಡಿಕೊಳ್ತು. ಆದ್ರೆ ಆಸಿಸ್​ ಕ್ರಿಕೆಟಿಗ ಆ ನಂಬಿಕೆಯನ್ನ ಹುಸಿಯಾಗಿಸಿದ್ದಾರೆ. ಹರಾಜಿನಲ್ಲಿ ಅಲ್ಜರಿ ಜೋಸೆಫ್​​​ಗೆ ಅದ್ಯಾವ ಪುರುಷಾರ್ಥಕ್ಕೆ 11.50 ಕೋಟಿ ರೂಪಾಯಿ ಕೊಟ್ರೋ ಗೊತ್ತಿಲ್ಲ. ವಿಂಡೀಸ್​ ವೇಗಿ ಒಂದೂ ಪಂದ್ಯದಲ್ಲಿ ಇಂಪ್ರೆಸ್ಸಿವ್ ಪ್ರದರ್ಶನ ನೀಡ್ಲೆ ಇಲ್ಲ. ಹೀಗಾಗಿ ಇನ್ನಾದ್ರೂ ಇವ್ರು ಒಳ್ಳೆ ಪ್ರದರ್ಶನ ನೀಡ್ಬೇಕು.

ಬಹುಶಃ ಜಗತ್ತಿನಲ್ಲಿ ಆರ್‌ಸಿಬಿ ತಂಡಕ್ಕೆ ಸಿಕ್ಕಷ್ಟು ನಿಷ್ಠಾವಂತ ಅಭಿಮಾನಿಗಳು ಯಾವುದೇ ತಂಡಕ್ಕೂ ಸಿಕ್ಕಿಲ್ಲ, ಸಿಕ್ಕೋದಿಲ್ಲ ಅಂತಾ ಕಾಣುತ್ತೆ. ಸೋತರೂ, ಗೆದ್ದರೂ ಜನ ಆರ್‌ಸಿಬಿ ತಂಡಕ್ಕೆ ಹೆಚ್ಚಾಗಿ ಬೆಂಬಲ ನೀಡುತ್ತಾರೆ. ಗೆದ್ದರೂ.. ಸೋತರೂ.. ಆರ್‌ಸಿಬಿ.. ಆರ್‌ಸಿಬಿ.. ಅಂತಿದ್ದಾರೆ ಫ್ಯಾನ್ಸ್. ಆದ್ರೆ ಆಟಗಾರರು ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡಂತೆ ಕಾಣ್ತಿದೆ. ಆರ್​ಸಿಬಿ ಫ್ಯಾನ್ಸ್ ಅಲ್ವಾ ಹೆಂಗಿದ್ರೂ ಸಪೋರ್ಟ್ ಮಾಡೇ ಮಾಡ್ತಾರೆ. ಗೆದ್ರೆ ನಮ್ಮ ತಂಡ ಅಂತಾರೆ, ಸೋತ್ರೆ ನಾವಿದ್ದೇವೆ ಅಂತಾರೆ ಅಂತಾ ಬೇಕಾಬಿಟ್ಟಿ ಪ್ರದರ್ಶನ ನೀಡ್ತಿದ್ದಾರೆ. ಆಟ ಅಂದ್ಮೇಲೆ ಸೋಲು ಗೆಲುವು ಇದ್ದಿದ್ದೇ ಒಪ್ಪಿಕೊಳ್ಳೋಣ. ಆದ್ರೆ ತಗೊಂಡಿರೋ ಹಣಕ್ಕಾದ್ರೂ ನಿಯತ್ತಾಗಿ ಆಡಬೇಕು ಅಲ್ವಾ. ಹೀಗೆ ಆಡಿದ್ರೆ ಬಹುಶಃ ಆರ್​ಸಿಬಿ ಹೀಗೆ ನಾಲ್ಕು ಮ್ಯಾಚ್​ಗಳನ್ನ ಸೋಲುತ್ತಿರಲಿಲ್ಲ ಅನ್ಸುತ್ತೆ.

Shwetha M