ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ – ವಲಸೆ ಬಂದ ವಿದ್ಯಾರ್ಥಿಗಳನ್ನು ಶಾಲೆಗೆ ದಾಖಲಿಸಿಕೊಳ್ಳುವಂತೆ ರಾಜ್ಯ ಸರ್ಕಾರದಿಂದ ಸೂಚನೆ!
ಬೆಂಗಳೂರು: ಮಣಿಪುರದಲ್ಲಿ ಕಳೆದ ಎರಡು ತಿಂಗಳಿನಿಂದ ಹಿಂಸಾಚಾರ ಭುಗಿಲೆದ್ದಿದೆ. ಹಿಂಸಾಚಾರ ತೀವ್ರಗೊಳ್ಳುತ್ತಿರುವ ಹಿನ್ನೆಲೆ ಅನೇಕ ಕುಟುಂಬಗಳು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿವೆ. ಕರ್ನಾಟಕಕ್ಕೂ ಹಲವು ಕುಟುಂಬಗಳು ವಲಸೆ ಬರುತ್ತಿವೆ. ಮಣಿಪುರದಿಂದ ವಲಸೆ ಬಂದ ಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ರಾಜ್ಯದ ಶಾಲೆಗಳಲ್ಲಿ ವಲಸೆ ಬಂದ ಮಕ್ಕಳಿಗೆ ಶಿಕ್ಷಣ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇದನ್ನೂ ಓದಿ: ಶಾಲಾ ಮಕ್ಕಳ ಬಿಸಿಯೂಟದಲ್ಲಿ ಮೊಟ್ಟೆ ಜೊತೆಗೆ ಮೀನು ಸಾರು ನೀಡಲು ಸರ್ಕಾರದ ಚಿಂತನೆ?
ರಾಜ್ಯ ಪಠ್ಯಕ್ರಮಕ್ಕೆ ಸಂಯೋಜಿತವಾಗಿರುವ ಎಲ್ಲಾ ಶಾಲೆಗಳು ಕರ್ನಾಟಕಕ್ಕೆ ವಲಸೆ ಬರುವ ಮಣಿಪುರದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸೂಚನೆ ನೀಡಿದೆ. ಈ ಕುರಿತು ಹೊರಡಿಸಿರುವ ಸುತ್ತೋಲೆಯಲ್ಲಿ, ದಾಖಲೆಗಳ ಕೊರತೆಯನ್ನು ನೆಪವಾಗಿಟ್ಟುಕೊಂಡು ಮಣಿಪುರದ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನಿರಾಕರಿಸದಂತೆ ಶಾಲೆಗಳಿಗೆ ತಿಳಿಸಲಾಗಿದೆ.
ಮಣಿಪುರದಿಂದ ಕರ್ನಾಟಕಕ್ಕೆ ವಲಸೆ ಬಂದವರು ಕರ್ನಾಟಕದ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ಪಡೆಯಲು ಬಯಸುತ್ತಿದ್ದಾರೆ. ದಾಖಲೆಗಳ ಕೊರತೆಯ ಕಾರಣಕ್ಕೆ ಅಂತಹ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಬಾರದು’ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ವಿದ್ಯಾರ್ಥಿಗಳು ತಮ್ಮ ರಾಜ್ಯದಲ್ಲಿ ಯಾವ ದರ್ಜೆಯಲ್ಲಿ ಓದುತ್ತಿದ್ದರು ಎಂಬುದರ ಕುರಿತು ಪೋಷಕರಿಂದ ಅಂಡರ್ಟೇಕಿಂಗ್ ಪಡೆಯುವ ಮೂಲಕ ಪ್ರವೇಶವನ್ನು ನೀಡಬೇಕು ಎಂದು ತಿಳಿಸಲಾಗಿದೆ. ಪ್ರೀ-ಯೂನಿವರ್ಸಿಟಿ ಕೋರ್ಸ್ಗಳಿಗೆ ಸಹ ಈ ನಿರ್ದೇಶನಗಳು ಅನ್ವಯಿಸುತ್ತವೆ. ಕಾಲೇಜುಗಳು ಆನ್ಲೈನ್ ಮೂಲಕ ಅರ್ಹತಾ ಪ್ರಮಾಣಪತ್ರವನ್ನು ಪಡೆಯಲು ಮತ್ತು ನಿಗದಿತ ಸಮಯದೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಷರತ್ತಿನೊಂದಿಗೆ ವಿದ್ಯಾರ್ಥಿಗಳು/ಪೋಷಕರಿಂದ ಅಂಡರ್ಟೇಕಿಂಗ್ ಪಡೆಯಲು ತಿಳಿಸಲಾಗಿದೆ.