ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ – ಪರಿಸ್ಥಿತಿ ಹತೋಟಿಗೆ ತರಲು ಇಬ್ಬರು ಉನ್ನತ ಅಧಿಕಾರಿಗಳ ನಿಯೋಜನೆ
ಕಳೆದ ಎರಡು ತಿಂಗಳಿನಿಂದ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ನೂರಾರು ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಈ ಹಿಂಸಾಚಾರ ಮುಂದುವರಿದಿರುವ ಬೆನ್ನಲ್ಲೇ ಮಹಿಳೆಯರ ಅತ್ಯಾಚಾರ ಮತ್ತು ಬೆತ್ತಲೆಯ ಮೆರವಣಿಗ ಹೀನಾಯ ಕೃತ್ಯ ನಡೆದಿದೆ. ಈ ದುಷ್ಕೃತ್ಯಕ್ಕೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಹಿಂಸಾಚಾರದಿಂದ ನಲುಗುತ್ತಿರುವ ಮಣಿಪುರವನ್ನು ಹತೋಟಿಗೆ ತರಲು ಇಬ್ಬರು ಡಿಐಜಿ (DIG) ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ಮಣಿಪುರದ ಬಗ್ಗೆ ಪ್ರಧಾನಿ ಮೋದಿ ತುಟಿ ಬಿಚ್ಚಲು ಹೇಯ ಕೃತ್ಯ ನಡೆಯಬೇಕಾಯಿತು! – ಕಾಂಗ್ರೆಸ್ ಕಿಡಿ
ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ್ದ ಪ್ರಕರಣ ಮಣಿಪುರದಲ್ಲಿ ಮತ್ತಷ್ಟು ಹಿಂಸಾತ್ಮಕ ಪ್ರತಿಭಟನೆ ಕಾರಣವಾಗಿದೆ. ಪ್ರಕರಣದ ಪ್ರಮುಖ ಆರೋಪಿ ಹುಯಿರೆಮ್ ಹೆರಾದಾಸ್ ಸಿಂಗ್ ಮನೆಯನ್ನ ಬೆಂಕಿ ಹಾಕಿ ಸುಟ್ಟುಹಾಕುವ ಮೂಲಕ ಪ್ರತಿಭಟನಾಕಾರರ ಗುಂಪು ಆಕ್ರೋಶ ವ್ಯಕ್ತಪಡಿಸಿದೆ. ಈ ಬೆನ್ನಲ್ಲೇ ಹಿಂಸಾಚಾರವನ್ನು ಹತೋಟಿಗೆ ತರಲು ಇಬ್ಬರು ಡಿಐಜಿ (DIG) ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಈ ಅಧಿಕಾರಿಗಳು 5,000 ಸಿಆರ್‌ಪಿಎಫ್ (CRPF) ಯೋಧರಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಈ ಮೊದಲು ಕೇವಲ ಆರು ಸಿಆರ್‌ಪಿಎಫ್ ಯೋಧರ ಕೇಂದ್ರವನ್ನು ತೆರೆಯಲಾಗಿತ್ತು. ಬಳಿಕ ಅದನ್ನು 57ಕ್ಕೆ ಹೆಚ್ಚಿಸಲಾಗಿದೆ. ಯೋಧರು ಕನಿಷ್ಠ ಆರು ತಿಂಗಳ ಕಾಲ ಅಲ್ಲಿಯೇ ಇರಲಿದ್ದಾರೆ. ಹೀಗಾಗಿ ಅವರಿಗೆ ಕಾರ್ಯಾಚರಣೆಯ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಲು ಹಾಗೂ ಮೇಲ್ವಿಚಾರಣೆಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ನಾಗಾಲ್ಯಾಂಡ್‍ನ ಕೊಹಿಮಾ ಮತ್ತು ಅಸ್ಸಾಂನ ಸಿಲ್ಚಾರ್‌ನಿಂದ ಮಣಿಪುರಕ್ಕೆ ಇಬ್ಬರು ಡಿಐಜಿ ಶ್ರೇಣಿಯ ಅಧಿಕಾರಿಗಳನ್ನು ಕಳುಹಿಸಲಾಗಿದೆ. ಮಣಿಪುರದಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗೃಹ ಸಚಿವಾಲಯದೊಂದಿಗೆ ಚರ್ಚಿಸಿದ ನಂತರ ಇಬ್ಬರು ಹಿರಿಯ ಅಧಿಕಾರಿಗಳನ್ನು ನಿಯೋಜಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.