ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ -ಗುಂಡಿನ ದಾಳಿಯಲ್ಲಿ 10 ಮಂದಿಗೆ ಗಾಯ

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ -ಗುಂಡಿನ ದಾಳಿಯಲ್ಲಿ 10 ಮಂದಿಗೆ ಗಾಯ

ಜನಾಂಗೀಯ ಸಂಘರ್ಷದಿಂದ ಬೆಂದು ಹೋಗಿರುವ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸುತ್ತಿದ್ದು, ದಾಳಿಯಲ್ಲಿ ಇಬ್ಬರು ಪೊಲೀಸರು ಸೇರಿ 10 ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಇಂಫಾಲ್ ಪಶ್ಚಿಮ ಜಿಲ್ಲೆಯ ಸಿಂಗ್ಡಾ ಮತ್ತು ಕಾಂಗ್‌ಚುಪ್ ನಡುವಿನ ಹಳ್ಳಿಯಲ್ಲಿ ದುಷ್ಕರ್ಮಿಗಳ ಗುಂಪು ಗುಂಡು ಹಾರಿಸಿದೆ. ಈ ಘಟನೆಯಲ್ಲಿ ಗಾಯಗೊಂಡವರಲ್ಲಿ ಏಳು ಮಂದಿಯನ್ನು ಲ್ಯಾಂಫೆಲ್‌ನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಮತ್ತು ಮೂವರು ಇಂಫಾಲ್‌ನ ರಾಜ್ ಮೆಡಿಸಿಟಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಇಸ್ರೇಲ್ ಶತ್ರುಗಳಿಗೆ ಕ್ಷಿಪಣಿಗಳನ್ನು ಕಳುಹಿಸಿದೆಯಾ ರಷ್ಯಾ – ಹೆಜ್ಬುಲ್ಲಾ ಬೆನ್ನಿಗೆ ನಿಂತಿದ್ದೇಕೆ ವ್ಯಾಗ್ನರ್?

ಶಸ್ತ್ರಸಜ್ಜಿತ ಉಗ್ರರು ಕಾಂಗ್‌ಚುಪ್ ಚಿಂಗ್‌ಖಾಂಗ್ ಪ್ರದೇಶದ ಸಮೀಪದಲ್ಲಿರುವ ಮೈತೆಯ್ ಗ್ರಾಮಗಳ ಕಡೆಗೆ ಗುಂಡು ಹಾರಿಸಿದ್ದಾರೆ. ಇಂಫಾಲ್ ಪಶ್ಚಿಮದ ಸಿಂಗ್ಡಾ ಕಡಂಗ್‌ಬಂಡ್ ಪ್ರದೇಶದ ಸಮೀಪವಿರುವ ಗ್ರಾಮಗಳ ಮೇಲೂ ದಾಳಿ ನಡೆಸಲಾಗಿದೆ. ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಗುಂಡಿನ ಕಾಳಗ ಕೆಲವು ಗಂಟೆಗಳ ಕಾಲ ಮುಂದುವರೆದಿದ್ದು, ಸ್ಥಳದಲ್ಲಿ ಯಾವುದೇ ಸಾವು ನೋವುಗಳ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಸೈನಿಕರ ಸಂಬಂಧಿಯೊಬ್ಬರ ಸಹಿತ ನಾಲ್ವರನ್ನು ಅಪಹರಣ ಮಾಡಲಾಗಿದೆ ಎಂಬ ಸುದ್ದಿ ಮಣಿಪುರದಲ್ಲಿ ಹರಡಿಸಿದ್ದು, ಇದರಿಂದಾಗಿ ಕುಕಿ ಉಗ್ರರು, ಇಂಫಾಲ ಪಶ್ಚಿಮ ಜಿಲ್ಲೆಯ ಕಂಗ್ಚುಪ್ ಪ್ರದೇಶದಲ್ಲಿ ಮತ್ತು ಕಂಗ್ಪೋಕ್ಪಿ ಜಿಲ್ಲೆಗಳಲ್ಲಿ ಗುಂಪುಗಳತ್ತ ಗುಂಡು ಹಾರಿಸಿದ್ದಾರೆಂದು ಹೇಳಲಾಗುತ್ತಿದೆ.

ಇದಕ್ಕೂ ಮುನ್ನ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರ ಜತೆ ಪ್ರಯಾಣಿಸುತ್ತಿದ್ದ 65 ವರ್ಷದ ವ್ಯಕ್ತಿಯೊಬ್ಬರನ್ನು ಉಗ್ರರು ಅಪಹರಿಸಿದ್ದರು. ಈ ಪೈಕಿ ಒಬ್ಬರನ್ನು ಭದ್ರತಾ ಪಡೆ ಯೋಧರು ರಕ್ಷಿಸಿದರು. ಮಂಗಳವಾರ ತಡರಾತ್ರಿವರೆಗೂ ನಾಲ್ಕು ಮಂದಿ ಅಪಹೃತರ ಸುಳಿವು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಕುಕಿ ಪ್ರಾಬಲ್ಯದ ಚುರಚಂದಾಪುರದಿಂದ ಕಂಗ್ಪೋಕ್ಪಿಗೆ ಪ್ರಯಾಣಿಸುತ್ತಿದ್ದ ಐದು ಮಂದಿ ಕುಕಿ ಜನರನ್ನು ಮೀಟಿ ಉಗ್ರರ ಗುಂಪು ಅಪಹರಿಸಿತ್ತು. ಈ ಪೈಕಿ ಒಬ್ಬರನ್ನು ಪೊಲೀಸರು ರಕ್ಷಿಸಿದ್ದಾರೆ. ವೃದ್ಧ ವ್ಯಕ್ತಿಗೆ ಗಾಯಗಳಾಗಿದ್ದು, ಇತರ ನಾಲ್ವರ ಪತ್ತೆಯಾಗಿಲ್ಲ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ

Shwetha M