ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ – ಪೊಲೀಸರನ್ನು ಕೊಂದು ಶಸ್ತ್ರಾಸ್ತ್ರ ದೋಚಿದ ಕಿಡಿಗೇಡಿಗಳು

ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ – ಪೊಲೀಸರನ್ನು ಕೊಂದು ಶಸ್ತ್ರಾಸ್ತ್ರ ದೋಚಿದ ಕಿಡಿಗೇಡಿಗಳು

ಇಂಫಾಲ: ಮಣಿಪುರ ಹಿಂಸಾಚಾರ ಭುಗಿಲೆದ್ದಿದೆ. ಕಳೆದ 3 ತಿಂಗಳಿನಿಂದ ಜನಾಂಗೀಯ ಗಲಾಟೆ ನಡೆಯುತ್ತಲೇ ಇದೆ. ಕಿಡಿಗೇಡಿಗಳ ಗುಂಪೊಂದು ಇಂಫಾಲದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರನ್ನು ಕೊಂದು ಶಸ್ತ್ರಾಸ್ತ್ರಗಳನ್ನು ದೋಚಿರುವ ಘಟನೆ ನಡೆದಿದೆ.

ಗುರುವಾರ ಪುರುಷ ಹಾಗೂ ಮಹಿಳೆಯ ಗುಂಪೊಂದು ಬಿಷ್ಣುಪುರ್ ಜಿಲ್ಲೆಯ ಮಣಿಪುರ ಸಶಸ್ತ್ರ ಪೊಲೀಸ್ ಎರಡನೇ ಬೆಟಾಲಿಯನ್‌ನ ಕೀರೆನ್‌ಫಾಬಿ ಪೊಲೀಸ್ ಔಟ್‌ಪೋಸ್ಟ್ ಹಾಗೂ ತಂಗಲವಾಯ್ ಪೊಲೀಸ್ ಔಟ್‌ಪೋಸ್ಟ್‌ನಲ್ಲಿ ದಾಳಿ ನಡೆಸಿದ್ದಾರೆ. ಬಳಿಕ ಪೊಲೀಸ್‌ ಅಧಿಕಾರಿಯನ್ನು ಕೊಂದು  ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರಾಖಂಡದಲ್ಲಿ ಭಾರಿ ಮಳೆ, ಭೂಕುಸಿತ – 10 ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ

ಕಿಡಿಗೇಡಿಗಳ ಗುಂಪು ಹೀಂಗಾಂಗ್ ಹಾಗೂ ಸಿಂಗ್ಜಮೇಯಿ ಪೊಲೀಸ್ ಠಾಣೆಗಳಿಂದಲೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ಭದ್ರತಾಪಡೆಗಳು ಅವರ ದಾಳಿಯನ್ನು ವಿಫಲಗೊಳಿಸಿದೆ. ಕೌಟ್ರುಕ್, ಹರಾಥೆಲ್ ಮತ್ತು ಸೆಂಜಮ್ ಚಿರಾಂಗ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ದಾಳಿಕೋರರು ಹಾಗೂ ಭದ್ರತಾಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ಒಬ್ಬ ಭದ್ರತಾ ಸಿಬ್ಬಂದಿ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ವಿವಿಧ ಸ್ಥಳಗಳಲ್ಲಿ ಜನರ ಸಮೂಹ ಅಶಿಸ್ತಿನಿಂದ ವರ್ತಿಸಿ ಗುಂಡು ಹಾರಿಸುವ ಹಾಗೂ ಗುಂಪುಗೂಡುವುದು ಸಂಭವಿಸುತ್ತಲೇ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಣಿಪುರದ ಬೆಟ್ಟ ಮತ್ತು ಕಣಿವೆ ಜಿಲ್ಲೆಗಳಲ್ಲಿ ಒಟ್ಟು 129 ಚೆಕ್‌ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉಲ್ಲಂಘನೆಗೆ ಸಂಬಂಧಿಸಿದಂತೆ ಸುಮಾರು 1,047 ಜನರನ್ನು ಬಂಧಿಸಲಾಗಿದೆ. ಮೈತೇಯಿ ಹಾಗೂ ಕುಕಿ ಸಮುದಾಯಗಳ ನಡುವೆ ಪ್ರಾರಂಭವಾದ ಜನಾಂಗೀಯ ಘರ್ಷಣೆ ಕಳೆದ 3 ತಿಂಗಳಿನಿಂದ ನೂರಾರು ಜನರನ್ನು ಬಲಿ ತೆಗೆದುಕೊಂಡಿದೆ.

suddiyaana