ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ – ದುಷ್ಕರ್ಮಿಗಳ ಗುಂಡೇಟಿಗೆ ನಾಲ್ವರು ಬಲಿ

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ – ದುಷ್ಕರ್ಮಿಗಳ ಗುಂಡೇಟಿಗೆ ನಾಲ್ವರು ಬಲಿ

ಜನಾಂಗೀಯ ಹಿಂಸಾಚಾರದಲ್ಲಿ ಬೆಂದುಹೋಗಿರುವ ಮಣಿಪುರದಲ್ಲಿ ಸಂಘರ್ಷ ನಿಲ್ಲುವಂತೆ ಕಾಣುತ್ತಿಲ್ಲ. ಹೊಸ ವರ್ಷದ ಮೊದಲ ದಿನವೇ ಹಿಂಸಾಚಾರ ಭುಗಿಲೆದ್ದಿದೆ. ಭೀಕರ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಸೋಮವಾರ ಮಣಿಪುರದಲ್ಲಿ ಗುಂಡಿನ ದಾಳಿ ನಡೆದಿದೆ. ಅಪರಿಚಿತರ ಗುಂಪೊಂದು ಸುಲಿಗೆಗಾಗಿ ಆಟೊಮೆಟಿಕ್ ವೆಪನ್ಸ್‌ಗಳೊಂದಿಗೆ (ಸ್ವಯಂಚಾಲಿತ ಶಸ್ತ್ರಾಸ್ತ್ರ) ದಾಳಿ ಮಾಡಿದೆ. ಈ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಹಿಂಸಾಚಾರದಿಂದಾಗಿ ಕಣಿವೆ ಜಿಲ್ಲೆಗಳಲ್ಲಿ ಮತ್ತೆ ಕರ್ಫ್ಯೂ ಹೇರಿರುವುದಾಗಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ತಪ್ಪದ ಕಾನೂನು ಸಂಕಷ್ಟ – ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಆಪ್ತರಿಗೂ ಸಿಬಿಐ ನೋಟಿಸ್‌!

ಈ ಹಿಂಸಾಚಾರವನ್ನು ಸಿಎಂ ಎನ್.ಬಿರೇನ್ ಸಿಂಗ್ ಅವರು ಖಂಡಿಸಿದ್ದಾರೆ. ಅಮಾಯಕ ಜನರ ಹತ್ಯೆಯಿಂದ ಅಪಾರ ದುಃಖವಾಗಿದೆ. ನಾವು ಆರೋಪಿಗಳನ್ನು ಹಿಡಿಯಲು ವಿಶೇಷ ಪೊಲೀಸ್ ಪಡೆಗಳನ್ನ ಸಜ್ಜುಗೊಳಿಸಿದ್ದೇವೆ. ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಸಾರ್ವಜನಿಕರು ಸಹ ಸಹಕಾರ ನೀಡಬೇಕೆಂದು ನಾನು ಕೈಮುಗಿದು ಬೇಡಿಕೊಳ್ಳುತ್ತೇನೆ. ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಲು ಸರ್ಕಾರ ಶಕ್ತಿ ಮೀರಿ ಪ್ರಯತ್ನಿಸುತ್ತದೆ. ಸಾರ್ವಜನಿಕರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

ಹೊಸ ಹಿಂಸಾಚಾರದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮಣಿಪುರದ ಕಣಿವೆ ಪ್ರದೇಶಗಳಾದ ತೌಬಲ್, ಇಂಫಾಲ ಪೂರ್ವ ಮತ್ತು ಇಂಫಾಲ ಪಶ್ಚಿಮ, ಕಕ್ಚಿಂಗ್ ಮತ್ತು ಬಿಷ್ಣುಪುರ ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Shwetha M