ರಾಜ್ಯದಲ್ಲಿ ಹೆಚ್ಚಾಯ್ತು ಎಸ್‌ಸಿ, ಎಸ್‌ಟಿ ಮೇಲಿನ ದೌರ್ಜನ್ಯ – ಕಳೆದ 5 ವರ್ಷಗಳಲ್ಲಿ ಶೇ.41ರಷ್ಟು ಏರಿಕೆ!
ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ವಿರುದ್ಧದ ದೌರ್ಜನ್ಯ ಪ್ರಕರಣಗಳಲ್ಲಿ ಏರಿಕೆಯಾಗಿರುವುದು ಕಂಡು ಬಂದಿದೆ. ಕರ್ನಾಟಕದಲ್ಲಿ ಕಳೆದ 5 ವರ್ಷಗಳಲ್ಲಿ ಎಸ್‌ಸಿ ಮತ್ತು ಎಸ್‌ಟಿಗೆ ಸೇರಿದ ಜನರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಶೇ.41ರಷ್ಟು ಹೆಚ್ಚಳವಾಗಿದೆ ಅಂತಾ ರಾಜ್ಯ ಪೊಲೀಸರು ಬಿಡುಗಡೆ ಮಾಡಿದ ಅಂಕಿಅಂಶಗಳಲ್ಲಿ ಬಹಿರಂಗವಾಗಿದೆ.
ಇದನ್ನೂ ಓದಿ: ಕಿಡ್ನಿ ಸ್ಟೋನ್ ಅಂತಾ ಬಂದವನ ಮೂತ್ರಪಿಂಡವನ್ನೇ ತೆಗೆದ ವೈದ್ಯರು! –ರೋಗಿ ಸಾವು
ಕರ್ನಾಟಕದಲ್ಲಿ 2020 ಕ್ಕೆ 1,691 ಪ್ರಕರಣಗಳು (ಕೋವಿಡ್ 19 ರ ಹೊರತಾಗಿಯೂ) ದಾಖಲಾಗಿದ್ದರೆ, 2021 ರಲ್ಲಿ 1,744 ಮತ್ತು 2022 ರಲ್ಲಿ 2167 ಪ್ರಕರಣಗಳು ವರದಿಯಾಗಿವೆ. 2018 ರಲ್ಲಿ 1,536ಗಳಷ್ಟಿದ್ದ ಪ್ರಕರಣಗಳ ಸಂಖ್ಯೆಯು 2022 ರಲ್ಲಿ 2,167 ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಎಸ್‌ಸಿ-ಎಸ್‌ಟಿ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಶೇ.41 ರಷ್ಟು ಏರಿಕೆಯಾಗಿರುವುದು ರಾಜ್ಯ ಪೊಲೀಸರು ಬಿಡುಗಡೆ ಮಾಡಿದ ಅಂಕಿಅಂಶಗಳಲ್ಲಿ ಗೊತ್ತಾಗಿದೆ.
ಎಸ್ ಟಿ, ಎಸ್ ಸಿ ವಿರುದ್ದದ ಪ್ರಕರಣಕ್ಕೆ ಶಿಕ್ಷೆಯ ಪ್ರಮಾಣ ಕಡಿಮೆಯಾಗಿರುವುದರಿಂದಾಗಿ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ ಅಂತಾ ಹೇಳಲಾಗುತ್ತಿದೆ. ಹೀಗಾಗಿ ಅಪರಾಧಿಗಳು ಪದೇ ಪದೇ ಅಪರಾಧಗಳನ್ನು ಎಸಗುತ್ತಿದ್ದಾರೆ. 2022 ರಲ್ಲಿ ದಾಖಲಾಗಿರುವ 2,167 ಪ್ರಕರಣಗಳು ದಾಳಿ, ಕೊಲೆ ಯತ್ನ ಮತ್ತು ಗಲಭೆಗಳಿಗೆ ಸಂಬಂಧಿಸಿವೆ. ಎಸ್‌ಸಿ/ಎಸ್‌ಟಿ ಮಹಿಳೆಯರ ಮೇಲೆ ಕೊಲೆ, ಅತ್ಯಾಚಾರ ಮತ್ತು ಕಿರುಕುಳ ನೀಡಿದ ಪ್ರಕರಣಗಳಿವೆ ಎಂದು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ರಾಜ್ಯ ಮಟ್ಟದ ಜಾಗೃತ ಮತ್ತು ಮೇಲ್ವಿಚಾರಣಾ ಸಮಿತಿ ಅಧಿಕಾರಿಗಳು ತಿಳಿಸಿದ್ದಾರೆ.
ಎಸ್‌ಸಿ, ಎಸ್‌ಟಿಗಳ ಮೇಲೆ ಕಳೆದ 5 ವರ್ಷಗಳಲ್ಲಿ ನಡೆದ ಗಂಭೀರ ಸ್ವರೂಪದ ದೌರ್ಜನ್ಯಗಳು ಕೂಡಾ ನಿಯಂತ್ರಣಕ್ಕೆ ಬಂದಿಲ್ಲ.ಎಸ್‌ಸಿ/ಎಸ್‌ಟಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ಗಮನಿಸಿದರೆ, 2018 ರಲ್ಲಿ 130 ಪ್ರಕರಣಗಳು ವರದಿಯಾಗಿದ್ದರೆ, ಈ ಸಂಖ್ಯೆ 2019ರ ವೇಳೆಗೆ 210ಕ್ಕೆ ಏರಿಕೆಯಾಗಿರುವುದು ಕಂಡು ಬಂದಿತ್ತು. 2020 ರಲ್ಲಿ ಈ ಸಂಖ್ಯೆ 153ಕ್ಕೆ ಇಳಿದಿತ್ತು. 2021 ರಲ್ಲಿ 188 ಮತ್ತು 2022 ರಲ್ಲಿ 222 ಪ್ರಕರಣಗಳು ದಾಖಲಾಗಿದ್ದವು. ಈ ವರ್ಷದ ಫೆಬ್ರವರಿ ತಿಂಗಳವರೆಗೆ 28 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಈ ಸಮುದಾಯಗಳನ್ನು ಹೊರತುಪಡಿಸಿ ಇತರೆ ಪ್ರಕರಣಗಳನ್ನು ಗಮನಿಸಿದರೆ ಫೆಬ್ರವರಿ ಅಂತ್ಯವರೆಗೆ 299 ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.