ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ – ಬಿಜೆಪಿಯ ಈ ಸಂಸದೆಗೆ ಜೈಲು ಶಿಕ್ಷೆ!
2012ರಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ಪ್ರಯಾಗರಾಜ್ನ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿಗೆ ಜೈಲು ಶಿಕ್ಷೆಯಾಗಿದೆ.
2012ರ ವಿಧಾನಸಭಾ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ರೀಟಾ ವಿರುದ್ದ ಆರೋಪ ಕೇಳಿಬಂದಿತ್ತು. ಫೆಬ್ರವರಿ 20, 2021 ರಂದು ಅವರ ವಿರುದ್ಧ ಕೋರ್ಟ್ಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 126 ರ ಅಡಿಯಲ್ಲಿ ಅವರನ್ನು ಕೋರ್ಟ್ ತಪ್ಪಿತಸ್ಥರೆಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ 6 ತಿಂಗಳ ಜೈಲು ಶಿಕ್ಷೆಯಾಗಿದೆ. ಜೊತೆಗೆ ಸಾವಿರ ರೂಪಾಯಿ ದಂಡ ಕೂಡ ವಿಧಿಸಲಾಗಿದೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಕೋರ್ಟ್ನ ನ್ಯಾಯಾಧೀಶ ಅಂಬರೀಶ್ ಕುಮಾರ್ ಶ್ರೀವಾಸ್ತವ ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ಶಿಕ್ಷೆ ಪ್ರಕಟವಾದ ಕೆಲವೇ ಹೊತ್ತಲ್ಲಿ ಅವರಿಗೆ ಜಾಮೀನು ಸಿಕ್ಕಿದೆ.
ಇದನ್ನೂ ಓದಿ: ಇರಾಕ್ ಮೇಲೆ ಪ್ರತಿಕಾರ ತೀರಿಸಿಕೊಂಡ ಅಮೆರಿಕ – ಏರ್ಸ್ಟ್ರೈಕ್ ನಡೆಸಿ 85 ಟಾರ್ಗೆಟ್ಸ್ ಧ್ವಂಸ, 18 ಮಂದಿಯ ಹತ್ಯೆ..!
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 ರ ಅಡಿಯಲ್ಲಿ ಆರು ತಿಂಗಳ ಜೈಲು ಶಿಕ್ಷೆ ಮತ್ತು ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ. ಶಿಕ್ಷೆ ಪ್ರಕಟ ಆಗುತ್ತಿದ್ದಂತೆಯೇ ಅವರನ್ನು ವಶಕ್ಕೆ ಪಡೆಯಲಾಗಿತ್ತು, ನಂತರ ಜಾಮೀನು ಸಿಕ್ಕಿದೆ. 20,000 ಶ್ಯೂರಿಟಿ ಬಾಂಡ್ನೊಂದಿಗೆ ಬಿಡುಗಡೆ ಮಾಡಲಾಗಿದೆ.
ಈ ಹಿಂದೆ ಜೋಶಿ ಕಾಂಗ್ರೆಸ್‌ನಲ್ಲಿದ್ದರು. ಲಕ್ನೋ ಕ್ಯಾಂಟ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಪ್ರಚಾರ ನಡೆಸುತ್ತಿದ್ದರು. ಫೆಬ್ರವರಿ 17, 2012ರ ಸಂಜೆ ಬಹಿರಂಗ ಚುನಾವಣಾ ಪ್ರಚಾರ ಮುಗಿದ ನಂತರವೂ ರೀಟಾ ಬಹುಗುಣ ಜೋಶಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಈ ಬಗ್ಗೆ ವಿರೋಧ ಪಕ್ಷಗಳು ದೂರು ನೀಡಿದ್ದು, ನಂತರ ಪ್ರಕರಣ ದಾಖಲಾಗಿತ್ತು.