ತಂದೆ ಕಾರಣ, ತಾಯಿಯೇ ಸತ್ಯ – ಅಮ್ಮನ ಅಗಲಿಕೆಯ ದುಃಖದಲ್ಲಿ ವಿನೋದ್‌ರಾಜ್‌ ನೋವಿನ ಮಾತು..!

ತಂದೆ ಕಾರಣ, ತಾಯಿಯೇ ಸತ್ಯ – ಅಮ್ಮನ ಅಗಲಿಕೆಯ ದುಃಖದಲ್ಲಿ ವಿನೋದ್‌ರಾಜ್‌ ನೋವಿನ ಮಾತು..!

ಅಮ್ಮ ಮಗ ಇದ್ದರೆ ಹೀಗಿರಬೇಕು ಎಂದು ಹೇಳಿದವರು ಅದೆಷ್ಟೋ ಮಂದಿ. ಹಾಗಿತ್ತು ಲೀಲಾವತಿ ಮತ್ತು ವಿನೋದ್‌ರಾಜ್ ಅವರ ಬಾಂಧವ್ಯ, ವಾತ್ಸಲ್ಯ. ಅಮ್ಮನ ಬಿಟ್ಟು ಮಗ ಇರುತ್ತಿರಲಿಲ್ಲ.. ಮಗನ ಬಿಟ್ಟು ಅಮ್ಮ ಇರುತ್ತಿರಲಿಲ್ಲ. ಈಗ ಕಾಲನ ಕರೆಗೆ ಓಗೊಟ್ಟು ಲೀಲಮ್ಮ ಪರಮಾತ್ಮನಲ್ಲಿ ಲೀನರಾಗಿದ್ದಾರೆ. ಈ ಮಧ್ಯೆ ಅಮ್ಮನ ಅಗಲಿಕೆಯ ದುಃಖದಲ್ಲಿದ್ದ ವಿನೋದ್‌ರಾಜ್ ಒಂದು ಮಾತು ಹೇಳಿದ್ದಾರೆ. ಈ ವಿಚಾರದಲ್ಲಿ ಅಮ್ಮ ಮಗ ಅದೆಷ್ಟು ನೋವು ಅನುಭವಿಸಿದ್ದರು ಎಂಬುದು ಈ ಮಾತೇ ಸಾಕ್ಷಿಯಾಗಿದೆ.

ಇದನ್ನೂ ಓದಿ: ರವೀಂದ್ರ ಕಲಾಕ್ಷೇತ್ರದಲ್ಲಿ ನಟಿ ಲೀಲಾವತಿ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ವ್ಯವಸ್ಥೆ – ಮಧ್ಯಾಹ್ನದ ಬಳಿಕ ಅಂತ್ಯಕ್ರಿಯೆ

ಸೆಲೆಬ್ರಿಟಿಯೇ ಆಗಲಿ, ಸಾಮಾನ್ಯ ಮನುಷ್ಯರೇ ಆಗಲಿ, ತಂದೆ ತಾಯಿ ಎಲ್ಲರ ಜೀವನದಲ್ಲೂ ಮಹತ್ವದ ಪಾತ್ರವಹಿಸುತ್ತಾರೆ. ಆದರೆ, ವಿನೋದ್ ರಾಜ್ ಜೀವನದಲ್ಲಿ ಈ ವಿಚಾರ ಬರೀ ನೋವು ಮಾತ್ರ ಕೊಟ್ಟಿದೆ. ಲೀಲಾವತಿಯವರು ಕೂಡಾ ಇದೇ ವಿಚಾರದಲ್ಲಿ ಅನುಭವಿಸಿದ ನೋವು ಅದೆಷ್ಟೋ.. ಇದೀಗ ಅಮ್ಮನ ಸಾವಿನ ನೋವಿನಲ್ಲೂ ವಿನೋದ್‌ರಾಜ್ ಈ ಬಗ್ಗೆ ಮಾತಾಡಿದ್ದಾರೆ. ತನ್ನ ತಾಯಿಯ ಅಗಲಿಕೆಯ ಶೋಕದಲ್ಲಿರುವ ವಿನೋದ್‌ರಾಜ್, ಪಾರ್ಥಿವ ಶರೀರದ ಮುಂದೆ ಕುಳಿತು ಕಣ್ಣೀರಿಟ್ಟಿದ್ದಾರೆ. ಈ ವೇಳೆ ತಾಯಿ ಮಹತ್ವ ಏನೆಂದು ಮನಬಿಚ್ಚಿ ಮಾತನಾಡಿದ್ದಾರೆ.

ತಾಯಿ ಇಲ್ಲದೇ ನಾವಿಲ್ಲ. ನಾವು ದೊಡ್ಡವರಾದ ಮೇಲೆ ನೀನಿಲ್ಲದೇ ನಾವಿಲ್ಲ ಅಂತಾ ಯಾಕೆ ಹೇಳೋಕೆ ಆಗ್ತಿಲ್ಲ? ತಾಯಿಯನ್ನ ಬಿಟ್ಟವರನ್ನ ಯಾವ ಸಮಾಜವೂ ಸಹಿಸಲ್ಲ. ತಾಯಿಯನ್ನ ನೋಡಿಕೊಳ್ಳದ ಮಕ್ಕಳ ಬದುಕು ವ್ಯರ್ಥ ಎಂದು ವಿನೋದ್ ರಾಜ್ ಹೇಳಿದ್ದಾರೆ. ತಾಯಿ ಮಕ್ಕಳನ್ನ ಸಾಕುವಾಗ ಖುಷಿ ಖುಷಿಯಿಂದ ಸಾಕಿರುತ್ತಾಳೆ. ತಾಯಿಯನ್ನೂ ಮಕ್ಕಳು ಖುಷಿಯಿಂದ ನೋಡಿಕೊಳ್ಳಬೇಕು. ತಾಯಿಯ ಸಂತೋಷವೇ ನಮಗೆ ಸ್ವರ್ಗ. ಇದನ್ನ ಯಾರೂ ಮರೆಯಬೇಡ. ತಾಯಿಯನ್ನ ಯಾರೂ ಕೇವಲ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ. ತಾಯಿಯನ್ನ ಆಶ್ರಮಗಳಿಗೆ ಸೇರಿಸುವ ಕೆಲಸ ಮಾಡಬೇಡಿ. ತಾಯಿ ಬಿಟ್ಟರೆ ಈ ಭೂಮಿ ಮೇಲೆ ಏನೂ ಇಲ್ಲ. ತಂದೆ ಕಾರಣನಾಗ್ತಾನೆ, ಅದರೆ ತಾಯಿಯೇ ಸತ್ಯ. ತಾಯಿಯನ್ನ ನೋಡಿಕೊಂಡಾಗಲೇ ರಾಮರಾಜ್ಯವಾಗೋದು ಎಂದು ಭಾವುಕರಾಗಿ ನುಡಿದಿದ್ದಾರೆ.

Sulekha