ಖೇಲ್ ರತ್ನ, ಅರ್ಜುನ ಪ್ರಶಸ್ತಿಗಳನ್ನು ಹಿಂದಿರುಗಿಸಲು ವಿನೇಶ್ ಫೋಗಟ್ ನಿರ್ಧಾರ – ಪ್ರಧಾನಿ ಮೋದಿಗೆ ಬಹಿರಂಗ ಪತ್ರ

ಖೇಲ್ ರತ್ನ, ಅರ್ಜುನ ಪ್ರಶಸ್ತಿಗಳನ್ನು ಹಿಂದಿರುಗಿಸಲು ವಿನೇಶ್ ಫೋಗಟ್ ನಿರ್ಧಾರ – ಪ್ರಧಾನಿ ಮೋದಿಗೆ ಬಹಿರಂಗ ಪತ್ರ

ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷರಾಗಿ ಸಂಜಯ್ ಸಿಂಗ್ ಅವರನ್ನು ಆಯ್ಕೆ ಮಾಡಿರುವುದನ್ನು ವಿರೋಧಿಸಿ ತಮ್ಮ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನು ಹಿಂದಿರುಗಿಸುವುದಾಗಿ ಕುಸ್ತಿಪಟು ವಿನೇಶ್ ಫೋಗಟ್ ಅವರು ಮಂಗಳವಾರ ಘೋಷಿಸಿದ್ದಾರೆ. ನಾನು ನನ್ನ ಮೇಜರ್ ಧ್ಯಾನ್ ಚಂದ್ ಮತ್ತು ಖೇಲ್ ರತ್ನ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿದ್ದೇನೆ. ನನ್ನನ್ನು ಈ ಪರಿಸ್ಥಿತಿಗೆ ತಂದಿದ್ದಕ್ಕಾಗಿ ಪ್ರಭಾವಿಗಳಿಗೆ ಧನ್ಯವಾದಗಳು, ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರವನ್ನು ಬರೆದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಭಾರತದ ಕುಸ್ತಿ ಫೆಡರೇಷನ್ ಚುನಾವಣೆ – ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿ ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಆಯ್ಕೆ

ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ತಮಗೆ ಕೇಂದ್ರ ಸರ್ಕಾರ ನೀಡಿದ್ದ ಮೇಜರ್ ಧ್ಯಾನಚಂದ್ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನು ಹಿಂದಿರುಗಿಸಲು ನಿರ್ಧರಿಸಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿರುವ ವಿನೇಶ್ ಫೋಗಟ್ ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ವಿನೇಶ್ ಫೋಗಟ್ ಅವರು ತಮ್ಮ ಬಹಿರಂಗ ಪತ್ರದಲ್ಲಿ, ನಮ್ಮ ಜೀವನವು ಅಲಂಕಾರಿಕ ಪುಸ್ತಕಗಳಂತೆ ಅಲ್ಲ. ಕಳೆದ ಕೆಲವು ವರ್ಷಗಳಲ್ಲಿ ಮಹಿಳಾ ಕುಸ್ತಿಪಟುಗಳು ಎಷ್ಟು ನೋವು ಅನುಭವಿಸಿದ್ದಾರೆ, ನಾವು ಎಷ್ಟು ಉಸಿರುಗಟ್ಟಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. 2016 ರಲ್ಲಿ ಸಾಕ್ಷಿ ಮಲಿಕ್ ಅವರು ಒಲಿಂಪಿಕ್ ಪದಕ ಗೆದ್ದಾಗ ನನಗೆ ನೆನಪಿದೆ, ನಿಮ್ಮ ಸರ್ಕಾರ ಅವರನ್ನು ‘ಬೇಟಿ ಬಚಾವೋ, ಬೇಟಿ ಪಢಾವೋ’ ಅಭಿಯಾನದ ರಾಯಭಾರಿಯನ್ನಾಗಿ ಮಾಡಿತ್ತು. ನಾವೆಲ್ಲ ಮಹಿಳಾ ಅಥ್ಲೀಟ್‌ಗಳು ಸಂತೋಷಪಟ್ಟು ಪರಸ್ಪರ ಅಭಿನಂದಿಸುತ್ತಿದ್ದೆವು. ಈಗ ಅವರು ಕುಸ್ತಿಯಿಂದ ನಿವೃತ್ತರಾಗಿದ್ದಾರೆ. ನಾವು ಕೇವಲ ಸರ್ಕಾರಿ ಜಾಹೀರಾತುಗಳಾಗಿ ಪ್ರಕಟಿಸಲು ಇದ್ದೇವೆಯೆ? ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾರೆ. ಸಾಕ್ಷಿ ಮಲಿಕ್ ಕುಸ್ತಿಯನ್ನು ತ್ಯಜಿಸಿದ್ದಾರೆ, ಭಜರಂಗ್ ಪುನಿಯಾ ಪದ್ಮಶ್ರೀಯನ್ನು ಹಿಂದಿರುಗಿಸಿದ್ದಾರೆ. ಈ ಪ್ರಶಸ್ತಿಗಳನ್ನ ಪಡೆಯುವುದು ಒಂದು ಕನಸಾಗಿತ್ತು. ಆದರೆ ಈಗ ನಾನು ವಿನೇಶ್ ಇಮೇಜ್ ಅನ್ನು ತೊಡೆದುಹಾಕಲು ಬಯಸುತ್ತೇನೆ. ನನಗೆ ಮೇಜರ್ ಧ್ಯಾನ್‌ಚಂದ್ ಹಾಗೂ ಅರ್ಜುನ ಪ್ರಶಸ್ತಿ ನೀಡಿದ್ದರು. ಆದರೆ ಅವುಗಳಿಗೆ ಈಗ ಅರ್ಥವಿಲ್ಲ. ಪ್ರತಿ ಮಹಿಳೆಯೂ ಘನತೆಯಿಂದ ಬದುಕಲು ಬಯಸುತ್ತಾಳೆ. ಹಾಗಾಗಿ ನನ್ನ ಪ್ರಶಸ್ತಿಗಳು ನನಗೆ ಹೊರೆಯಾಗಬಾರದೆಂದು ಭಾವಿಸಿ, ಅವುಗಳನ್ನು ಹಿಂತಿರುಗಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ನಾನು ಒಲಿಂಪಿಕ್ ಪದಕವನ್ನು ಗೆಲ್ಲುವ ಕನಸು ಕಂಡಿದ್ದೆ, ಆದರೆ ಈಗ ಅದು ಮಸುಕಾಗುತ್ತಿದೆ. ಭವಿಷ್ಯದಲ್ಲಿ ಮಹಿಳಾ ಕ್ರೀಡಾಪಟುಗಳು ತಮ್ಮ ಕನಸುಗಳನ್ನು ನನಸಾಗಿಸಲು ನಾನು ಪ್ರಾರ್ಥಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.

ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಮತ್ತು ವಿನೇಶ್ ಫೋಗಟ್ ಸೇರಿದಂತೆ ಹಲವು ಕುಸ್ತಿಪಟುಗಳು ಭಾರತದ ಕುಸ್ತಿ ಅಸೋಸಿಯೇಷನ್ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಡಬ್ಲ್ಯುಎಫ್ಐನಿಂದ ತೆಗೆದುಹಾಕಲಾಗಿದೆ. ಆದರೆ ಇತ್ತೀಚಿಗೆ ಸಮಿತಿಯ ಚುನಾವಣೆಯಲ್ಲಿ ಭೂಷಣ್ ಆಪ್ತ ಸಂಜಯ್ ಸಿಂಗ್ ಅಧ್ಯಕ್ಷರಾಗಿ ಆಯ್ಕೆಯಾದ್ದರು. ಈ ಚುನಾವಣೆಯ ನಂತರವೂ ಎಲ್ಲಾ ಕುಸ್ತಿಪಟುಗಳು ಬಹಿರಂಗವಾಗಿ ಪ್ರತಿಭಟನೆ ನಡೆಸಿದ್ದರು. ಕುಸ್ತಿಪಟುಗಳ ಪ್ರತಿಭಟನೆ ಬಳಿಕ ಕ್ರೀಡಾ ಸಚಿವಾಲಯ ನೂತನ ಸಮಿತಿಯನ್ನು ವಿಸರ್ಜಿಸಿತ್ತು. ಸಂಜಯ್ ಸಿಂಗ್ ಸೇರಿದಂತೆ ಇಡೀ ಸಮಿತಿಯನ್ನು ವಜಾಗೊಳಿಸಲಾಗಿತ್ತು. ನೂತನ ಸಮಿತಿಯ ಪದಚ್ಯುತಿಯನ್ನು ಕುಸ್ತಿಪಟುಗಳು ಸ್ವಾಗತಿಸಿದ್ದರು. ಆದರೂ ಆಟಗಾರರ ಸಿಟ್ಟು ಮಾತ್ರ ಕಡಿಮೆಯಾಗಿಲ್ಲ, ಒಬ್ಬೊಬ್ಬರಾಗೊ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸುವುದನ್ನ ಮುಂದುವರಿಸಿದ್ದಾರೆ

Sulekha