ತೂಕ ಇಳಿಸಲು ಕೂದಲು, ಉಗುರು ಕಟ್ – ರಕ್ತ ಬಸಿದ್ರೂ 100 ಗ್ರಾಂ ಹೆಚ್ಚಿದ್ದೇಗೆ?
ವಿನೇಶ್ ಗೆ ಮಾತ್ರ ಯಾಕಿಂಥಾ ಅನ್ಯಾಯ?

ತೂಕ ಇಳಿಸಲು ಕೂದಲು, ಉಗುರು ಕಟ್ – ರಕ್ತ ಬಸಿದ್ರೂ 100 ಗ್ರಾಂ ಹೆಚ್ಚಿದ್ದೇಗೆ?ವಿನೇಶ್ ಗೆ ಮಾತ್ರ ಯಾಕಿಂಥಾ ಅನ್ಯಾಯ?

ವಿನೇಶ್​ ಫೋಗಟ್. ಈಕೆಗೆ ಅದೆಷ್ಟು ಸವಾಲುಗಳು.. ಅದೆಷ್ಟು ಅನ್ಯಾಯ. ಇನ್ನೇನು ಪದಕ ವಿನೇಶ್ ಕೊರಳಿಗೆ ಬೀಳಬೀಕಿತ್ತು. ಕಡೇ ಗಳಿಗೆಯಲ್ಲಿ ಆಗಿದ್ದು ಮತ್ತದೇ ಅನ್ಯಾಯ. ಒಲಿಂಪಿಕ್ಸ್‌ನಲ್ಲಿ ಫೈನಲ್ ತಲುಪಿ ಹಿಸ್ಟರಿ ಕ್ರಿಯೇಟ್ ಮಾಡಿದ ವಿನೇಶ್ ಫೋಗಟ್ ಚಿನ್ನ ಗೆಲ್ಲಲಿ ಎಂದು ಹಾರೈಸುತ್ತಿದ್ದ ಕೋಟ್ಯಂತರ ಭಾರತೀಯರ ಕನಸು ಕೂಡಾ ನುಚ್ಚು ನೂರು. ವಿನೇಶ್ ಫೋಗಟ್‌ ನಿಗದಿತ 50 ಕೆಜಿ ತೂಕಕ್ಕಿಂತ 100 ಗ್ರಾಂ ಹೆಚ್ಚಿದ್ದಾರೆ ಎನ್ನುವ ಕಾರಣದಿಂದ ವಿನೇಶ್ ಅವರನ್ನು ಅನರ್ಹಗೊಳಿಸಲಾಗಿದೆ. ಆದ್ರೆ, ತನ್ನ ಹೆಚ್ಚುವರಿ ತೂಕವನ್ನ ಇಳಿಸಲು ಇಡೀ ರಾತ್ರಿ ವಿನೇಶ್ ಫೋಗಟ್ ಶ್ರಮಪಟ್ಟಿರೋ ರೀತಿ ಕೇಳಿದ್ರೆ, ಈ ಹೆಣ್ಣು ಮಗಳಿಗೆ ಮಾತ್ರ ಯಾಕೆ ಇಷ್ಟೊಂದು ಅಗ್ನಿಪರೀಕ್ಷೆ ಅಂತಾ ನಿಮಗೂ ಅನಿಸದೇ ಇರಲ್ಲ. ಫೋಗಟ್ ಸೆಮಿಫೈನಲ್ ನಂತರ ಕಳೆದ ಒಂದೇ ಒಂದು ರಾತ್ರಿ ಆಕೆಯ ಶ್ರಮಕ್ಕೆ ಸಾಕ್ಷಿ.

ಇದನ್ನೂ ಓದಿ: ಕ್ಯಾಪ್ಟನ್ಸಿ ಇಲ್ಲ.. KL ಆಟವೂ ಬೇಡ್ವಾ? – SL 3ನೇ ಪಂದ್ಯಕ್ಕೆ ಕೊಕ್ ಕೊಟ್ಟಿದ್ದೇಕೆ?

ತೂಕ ಇಳಿಕೆಗೆ ವಿನೇಶ್ ರಕ್ತ ರಾತ್ರಿ..! 

ಮಂಗಳವಾರ ರಾತ್ರಿ ವಿನೇಶ್ ಫೋಗಟ್ ಅವರ ತೂಕ ಪರೀಕ್ಷೆ ಮಾಡಲಾಗಿತ್ತು. ಆಗ ಫೋಗಟ್ ತೂಕ 2 ಕೆಜಿ ಹೆಚ್ಚಿತ್ತು. ಹೀಗಾಗಿ ಈ ತೂಕವನ್ನು ಕಡಿಮೆ ಮಾಡಲು ವಿನೇಶ್ ಇಡೀ ರಾತ್ರಿ ನಿದ್ರೆ ಮಾಡದೆ ಶ್ರಮಿಸಿದ್ದಾರೆ. ವರದಿಗಳ ಪ್ರಕಾರ, ಸೆಮಿ-ಫೈನಲ್ ಪಂದ್ಯವನ್ನು ಗೆದ್ದಾಗ ವಿನೇಶ್ ಅವರ ತೂಕ 52 ಕೆಜಿ ಇತ್ತು. ನಂತರ ತನ್ನ ತೂಕವನ್ನು 2 ಕೆಜಿಯಷ್ಟು ಕಡಿಮೆ ಮಾಡಲು ವಿನೇಶ್ ಇಡೀ ರಾತ್ರಿ ಶ್ರಮಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಗೆದ್ದ ನಂತರ ವಿನೇಶ್ ಫೋಗಟ್ ವಿಶ್ರಾಂತಿ ಪಡೆದಿಲ್ಲ. ರಾತ್ರಿಯಿಡೀ ಎಚ್ಚರದಿಂದಿದ್ದ ಅವರು ತನ್ನ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ. ಸ್ಪೋರ್ಟ್ಸ್ ಸ್ಟಾರ್ ವರದಿ ಪ್ರಕಾರ, ವಿನೇಶ್ ಫೋಗಟ್ ತೂಕ ಇಳಿಸಿಕೊಳ್ಳಲು ಸೈಕ್ಲಿಂಗ್, ಸ್ಕಿಪ್ಪಿಂಗ್ ಮೊರೆ ಹೋಗಿದ್ದಾರೆ. ಅಷ್ಟೇ ಅಲ್ಲ, ತೂಕ ಇಳಿಸುವ ಸಲುವಾಗಿ ವಿನೇಶ್ ತನ್ನ ತಲೆ ಕೂದಲು ಮತ್ತು ಉಗುರುಗಳನ್ನು ಸಹ ಕತ್ತರಿಸಿದ್ದಾರೆ. ಇದು ಸಾಲದೆಂಬಂತೆ ತನ್ನ ದೇಹದ ರಕ್ತವನ್ನು ಸಹ ಬಸಿದು ಹೊರತೆಗೆಸಿಕೊಂಡಿದ್ದಾರೆ. ಇದ್ರಿಂದ ಒಂದೇ ರಾತ್ರಿಯಲ್ಲಿ 1 ಕೆಜಿ. 850 ಗ್ರಾಂ ತೂಕವನ್ನು ಕಡಿಮೆ ಮಾಡಿದ್ದಾರೆ. ಆದರೆ ನಿಗದಿತ ತೂಕಕ್ಕಿಂತ ಕೇವಲ 150 ಗ್ರಾಂ ಹೆಚ್ಚಿದ್ದರಿಂದ ಅವರನ್ನು ಅನರ್ಹಗೊಳಿಸಲಾಗಿದೆ. ಕುಸ್ತಿಯಲ್ಲಿ, ಯಾವುದೇ ಕುಸ್ತಿಪಟುವಿಗೆ ಕೇವಲ 100 ಗ್ರಾಂ ಹೆಚ್ಚುವರಿ ತೂಕದ ಭತ್ಯೆಯನ್ನು ನೀಡಲಾಗುತ್ತದೆ. ಅರ್ಥಾತ್, ವಿನೇಶ್ 50 ಕೆಜಿ, 100 ಗ್ರಾಂ ತೂಕ ಹೊಂದಿದ್ದರೆ, ಅವರು ಚಿನ್ನದ ಪದಕದ ಪಂದ್ಯವನ್ನು ಆಡಲು ಸಾಧ್ಯವಾಗುತ್ತಿತ್ತು. ಆದರೆ ಅವರ ತೂಕ 50 ಗ್ರಾಂ ಹೆಚ್ಚಿದ್ದರಿಂದಾಗಿ ಒಲಿಂಪಿಕ್ ಪದಕ ಗೆಲ್ಲುವ ಕನಸು ಭಗ್ನಗೊಂಡಿದೆ. ಕುಸ್ತಿಯಲ್ಲಿ, ಪಂದ್ಯಗಳ ಮೊದಲು ಕುಸ್ತಿಪಟುಗಳನ್ನು ತೂಕ ಮಾಡಲಾಗುತ್ತದೆ. ಇದಲ್ಲದೇ 2 ದಿನಗಳ ಕಾಲ ಇದೇ ವಿಭಾಗದಲ್ಲಿ ಕುಸ್ತಿಪಟು ತನ್ನ ತೂಕವನ್ನು ಕಾಯ್ದುಕೊಳ್ಳಬೇಕಾಗಿದ್ದರೂ ವಿನೇಶ್​ಗೆ ಸಾಧ್ಯವಾಗಲಿಲ್ಲ. ಇದೀಗ ಅನರ್ಹರಾಗಿರುವುದರಿಂದ ಒಲಿಂಪಿಕ್ಸ್ ನಿಯಮಗಳ ಪ್ರಕಾರ ಯಾವ ಪದಕವೂ ಸಿಗುವುದಿಲ್ಲ.

ಅಂದು ತನಗಾದ ಅನ್ಯಾಯದ ವಿರುದ್ಧ ನ್ಯಾಯ ಸಿಗದೆ ದೆಹಲಿಯ ಬೀದಿಯಲ್ಲಿ ಪೊಲೀಸರ ಕೈಗೆ ಸಿಕ್ಕು ನಲುಗಿ ಕಣ್ಣೀರು ಹಾಕಿದ ವಿನೇಶ್ ಫೋಗಟ್, ವಿಶ್ವದ ನಂಬರ್ ಒನ್ ರ್ಯಾಕಿಂಗ್ ಕುಸ್ತಿಪಟುವನ್ನ ಸೋಲಿಸಿದಾಗ ಕೆರಳಿದ ಹೆಣ್ಣು ಹುಲಿಯಾಗಿದ್ದಳು. ಇದೀಗ ಬಂಗಾರದ ಬೇಟೆಗೆ ಕಾದು ಕುಳಿತಿದ್ದ ಫೋಗಟ್​​, ಒಲಿಂಪಿಕ್ಸ್​ನಲ್ಲಿ ಅನರ್ಹಗೊಂಡು, ಗಾಯಗೊಂಡ ಹುಲಿಯಂತಾಗಿದ್ದಾಳೆ. ಆಕೆಗೆ ಈ ಗೆಲುವು ತುಂಬಾ ಅನಿವಾರ್ಯವಾಗಿತ್ತು. ವ್ಯವಸ್ಥೆ ವಿರುದ್ಧ ಸಿಡಿದು ತೊಡೆ ತಟ್ಟಿ ನಿಂತಾಗ ಅನುಭವಿಸಿದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಬೇಕಿತ್ತು. ತನ್ನನ್ನು ಹಣಿದವರನ್ನು ಅಖಾಡದಲ್ಲಿ ಕೆಡವಿಹಾಕಬೇಕಿತ್ತು. ಆಕೆಯ ವಿರುದ್ಧ ನಿಂಥವರ ಕಪಾಳಕ್ಕೆ ಬಿಗಿಯುವಂಥ ಖುಷಿ ಕಾಣಬೇಕಿತ್ತು. ಆದರೆ, ಆಕೆಯ ಈ ಎಲ್ಲ ಕನಸಗಳನ್ನು ಕೇವಲ 100 ಗ್ರಾಂ ತೂಕವೇ ನುಂಗಿ ಹಾಕಿತು. ಇದೇ ಅಲ್ಲವೇ ನಮ್ಮ ವ್ಯವಸ್ಥೆಯ ದುರಂತ. ಕೊರಳಲ್ಲಿ ಪದಕ ಹೊತ್ತು ಬಂದರೆ ಆಕೆಯನ್ನ ಹೆಗಲ ಮೇಲೆ ಹೊತ್ತು ಮೆರೆಸಲು ಸಜ್ಜಾಗಿದ್ದ ಕೋಟ್ಯಂತರ ಅಭಿಮಾನಿಗಳು, ಅನರ್ಹತೆ ಸುದ್ದಿ ಕೇಳುತ್ತಿದ್ದಂತೆ, ಶಾಕ್​ಗೊಳಗಾಗಿದ್ದಾರೆ. ಅನರ್ಹತೆ ತೀರ್ಪು ಬಗ್ಗೆ ಹತ್ತಾರು ಅನುಮಾನದ ಮಾತುಗಳು ಕೇಳಿಬರುತ್ತಿವೆ. ಅದೇನೇ ಆಗಲಿ, ಹೋರಾಟವನ್ನೇ ಬದುಕಾಗಿಸಿಕೊಂಡು, ಸೆಣಸಾಡುತ್ತಲೇ ಬಂದ ವಿನೇಶಾಗೆ, ಮತ್ತೆ ಕುಸ್ತಿಯಲ್ಲಿ ಹೋರಾಡಿ ಗೆಲ್ಲುವುದು ಕಷ್ಟವೇನಲ್ಲ ಬಿಡಿ. ಇಂದು ಪದಕವನ್ನ ಮಿಸ್ ಮಾಡಿಕೊಂಡಿರಬಹುದು. ಆದ್ರೆ ಕೋಟಿ ಕೋಟಿ ಭಾರತೀಯರ ಪಾಲಿಗೆ ಅವಳೇ ನಿಜವಾದ ಬಂಗಾರ.

Shwetha M