ಫೈನಲ್ ಗೂ ಮುನ್ನ ಭಯಾನಕ ಘಟನೆ – ವಿನೇಶ್ ಬದುಕಿದ್ದೇ ಹೆಚ್ಚು!!

ಫೈನಲ್ ಗೂ ಮುನ್ನ ಭಯಾನಕ ಘಟನೆ – ವಿನೇಶ್ ಬದುಕಿದ್ದೇ ಹೆಚ್ಚು!!

ಪ್ಯಾರಿಸ್ ಒಲಿಂಪಿಕ್ಸ್ ಅಂಗಳಕ್ಕೆ ಕಾಲಿಟ್ಟ ವಿನೇಶ್ ಫೋಗಟ್ ಸೃಷ್ಟಿಸಿದ್ದು ಮಾತ್ರ ಇತಿಹಾಸ. 50 ಕೆಜಿ ವಿಭಾಗದಲ್ಲಿ ಕುಸ್ತಿ ಅಖಾಡಕ್ಕೆ ಧುಮುಕಿದ್ದ ವಿನೇಶ್ ಫೋಗಟ್, ಸೊಲೇ ಕಾಣದ ಜಗಜಟ್ಟಿ ಸೂಸಾಕಿಯನ್ನೇ ಸೋಲಿಸಿದ್ದರು. ಈ ಮೂಲಕ ಶತ ಕೋಟಿ ಭಾರತೀಯರ ಮನದಲ್ಲಿ ಬಂಗಾರ ಪದಕದ ಆಸೆ ಮೂಡಿಸಿದ್ರು. ಬಂಗಾರಾವೋ, ಬೆಳ್ಳಿಯೋ ಇನ್ನೇನು ಭಾರತದ ಮುಡಿಗೆ ಸೇರಬೇಕಿತ್ತು. ಆದ್ರೆ, ಅಲ್ಲಾಗಿದ್ದೇ ಬೇರೆ. ಜಸ್ಟ್ 100 ಗ್ರಾಂ ವಿನೇಶ್ ಕನಸಿನ ಜೊತೆ ಭಾರತೀಯ ಆಸೆಯನ್ನೂ ಭಗ್ನಗೊಳಿಸಿತ್ತು. ಆದ್ರೂ, ಇಡೀ ಭಾರತ ವಿನೇಶ್ ನೋವಿನ ಜೊತೆಯಲ್ಲಿ ನಿಂತಿತ್ತು. ಜೊತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡಾ ವಿನೇಶ್ ಗೆ ಧೈರ್ಯ ತುಂಬಿದ್ದರು. ನೀನು ಚಾಂಪಿಯನ್ಗಳ ಚಾಂಪಿಯನ್ ಅಂತಾ ಹೇಳುವ ಮೂಲಕ ಆತ್ಮವಿಶ್ವಾಸ ತುಂಬಿದ್ರು. ದೇಶದ ಸ್ಟಾರ್ ಕ್ರೀಡಾಪಟುಗಳು ಕೂಡಾ ವಿನೇಶ್ ಜೊತೆಗೆ ನಾವಿದ್ದೇವೆ ಅಂದಿದ್ದರು. ಅಷ್ಟೇ ಯಾಕೆ ಪ್ರಧಾನ ಮಂತ್ರಿ ಜೊತೆ ಒಲಿಂಪಿಕ್ಸ್ ಪದಕ ವಿಜೇತರು ಸಂವಾದ ನಡೆಸುವಾಗಲೂ ಮೋದಿ ಹೊಗಳಿದ್ದು ವಿನೇಶ್ ಫೋಗಟ್ ಅವ್ರನ್ನ. ವಿನೇಶ್ ನಮ್ಮ ಧೀರ ಹೆಣ್ಣು ಮಗಳು ಅಂತಾ ಕೊಂಡಾಡಿದ್ದರು. ಇದೇ ಧೀರ ಹೆಣ್ಣು ಮಗಳು ಭಾರತಕ್ಕೆ ಕಾಲಿಟ್ಟಾಗ ಕಣ್ಣೀರು ಹಾಕಿರೋ ಆ ಒಂದು ದೃಶ್ಯ ನಿಜಕ್ಕೂ ಮನಕಲಕುವಂತಿದೆ. ಶನಿವಾರ ದೆಹಲಿಗೆ ಆಗಮಿಸಿದ ವಿನೇಶ್ ಫೋಗಟ್ ಭಾರತೀಯರ ಪ್ರೀತಿ ಕಂಡು ಕಣ್ಣೀರು ಹಾಕಿದ್ರು. ಈ ಕಣ್ಣೀರಲ್ಲಿ ತನ್ನ ಹೋರಾಟಕ್ಕೆ ಜಯ ಸಿಕ್ಕಿಲ್ಲ ಎಂಬ ನೋವು ಎದ್ದು ಕಾಣುತ್ತಿತ್ತು. ವಿನೇಶ್ ಫೋಗಟ್ ಗೆ ಭವ್ಯ ಸ್ವಾಗತ ಕೋರಿದ್ದು ಯಾರು?, ಫೋಗಟ್ ಆ ಕಷ್ಟದ ಸಮಯದಲ್ಲಿ ಹೇಗಿದ್ದರು ಅನ್ನೋದನ್ನ ಕೋಚ್ ವಿವರಿಸಿದ್ದು ಹೇಗೆ?, ತವರು ನೆಲಕ್ಕೆ ಕಾಲಿಡುವ ಮೊದಲು ವಿನೇಶ್ ಭಾವುಕರಾಗಿ ಪದಗಳಲ್ಲಿ ನೋವು ಹೇಳಿಕೊಂಡಿದ್ದೇನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸ್ಲಮ್ ಹುಡುಗ ಈಗ ಸೂಪರ್ ಸ್ಟಾರ್ –  RCB ವೇಗಿಯ ರೇಂಜ್ ಫುಲ್ ಚೇಂಜ್

ಭಾರತದ ಧೈರ್ಯಶಾಲಿ ವಿನೇಶ್ ಭಾವುಕ

ಶನಿವಾರ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿನೇಶ್ ಫೋಗಟ್ ರಿಗೆ ಅದ್ದೂರಿ ಸ್ವಾಗತ ನೀಡಲಾಯ್ತು. ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ವಿನೇಶ್ ಫೋಗಟ್ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು, ಜಯ ಘೋಷಣೆ ಕೂಗಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ವಿನೇಶ್ ಭಾವುಕರಾದರು.  ದೇಶದ ಜನರಿಂದ ಇಷ್ಟೊಂದು ಪ್ರೀತಿ ಮತ್ತು ಗೌರವ ಸಿಕ್ಕಿರುವುದು ನನ್ನ ಅದೃಷ್ಟ ಎಂದರು. ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ, ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಕೂಡಾ ಈ ಭವ್ಯ ಸ್ವಾಗತದಲ್ಲಿ ಜೊತೆಯಾಗಿದ್ದರು. ಈ ವೇಳೆ ಮಾತನಾಡಿದ ಕುಸ್ತಿಪಟು ಬಜರಂಗ್ ಪುನಿಯಾ, ವಿನೇಶ್ ಫೋಗಟ್ ಅವರನ್ನು ಚಾಂಪಿಯನ್ನಂತೆ ಸ್ವಾಗತಿಸಲಾಗುತ್ತಿದೆ. ಎಲ್ಲಾ ದೇಶವಾಸಿಗಳಿಗೆ ನಾವು ಧನ್ಯವಾದ ಸಲ್ಲಿಸುತ್ತೇವೆ ಎಂದರು. ಕುಸ್ತಿಪಟು ಸಾಕ್ಷಿ ಮಲ್ಲಿಕ್ ಮಾತನಾಡಿ, ಇದೊಂದು ದೊಡ್ಡ ದಿನ.ವಿನೇಶ್ ದೇಶ ಮತ್ತು ಮಹಿಳೆಯರಿಗಾಗಿ ಮಾಡಿರುವ ಸಾಧನೆ ಅದ್ಭುತ. ಅವರು ಈ ಗೌರವವನ್ನು ಮುಂದುವರೆಸುತ್ತಾರೆ ಎಂದು ಭಾವಿಸುತ್ತೇನೆ. ಆಕೆ ನಮಗೆ ಚಾಂಪಿಯನ್ ಆಗಿದ್ದಾರೆ ಎಂದರು.

ತವರಿಗೆ ಬರುವ ಮೊದಲು ವಿನೇಶ್ ಫೋಗಟ್ ಅದ್ಯಾವ ರೀತಿಯಲ್ಲಿ ಎಮೋಷನಲ್ ಆಗಿದ್ರು ಅನ್ನೋದನ್ನ ಅವರೇ ಪದಗಳಲ್ಲಿ ವಿವರಿಸಿದ ರೀತಿಯಲ್ಲಿ ಗೊತ್ತಾಗುತ್ತದೆ. ಪ್ಯಾರಿಸ್ ನಿಂದ ತವರಿಗೆ ಮರಳುವ ಮೊದಲು ಭಾವನಾತ್ಮಕ ಪೋಸ್ಟ್ ಒಂದು ಮಾಡಿದ್ದಾರೆ. ಹೆತ್ತವರನ್ನ ನೆನಪು ಮಾಡಿಕೊಳ್ಳುವ ಮೂಲಕ ಪದಗಳಲ್ಲಿ ತನ್ನ ನೋವನ್ನ ಬರೆದುಕೊಂಡಿದ್ದಾರೆ ವಿನೇಶ್. ತಾನು ಎದುರಿಸಿದ ಸವಾಲು, ತನ್ನ ತಾಯಿಯ ಪಾತ್ರ, ತನ್ನ ಗಂಡ ತನಗೆ ನೀಡಿದ ಬೆಂಬಲ ಒಟ್ಟಾರೆ ಹೇಳೋದಾದ್ರೆ, ತನ್ನ ದುಃಖ ಮತ್ತು ಹೋರಾಟವನ್ನ ಮೂರು ಪುಟಗಳ ಭಾವನಾತ್ಮಕ ಪತ್ರದ ಮೂಲಕ ಪೋಸ್ಟ್ ಮಾಡಿದ್ದಾರೆ ವಿನೇಶ್.

ವಿನೇಶ್ ಭಾವುಕ ಫೋಸ್ಟ್

‘ನಮ್ಮ ಪ್ರಯತ್ನಗಳು ನಿಲ್ಲಲಿಲ್ಲ ಮತ್ತು ನಾವು ಶರಣಾಗಲೂ ಇಲ್ಲ. ಆದರೆ ಸಮಯ ಸ್ತಬ್ಧವಾಯಿತು ಹಾಗೂ ಕಾಲ ಸರಿಯಿರಲಿಲ್ಲ. ಅದು ನನ್ನ ಹಣೆಬರಹ. ನಾನು ತಂದೆಯ ಫೇವರೇಟ್ ಮಗಳು. ಏಕೆಂದರೆ ನಾನೇ ಚಿಕ್ಕವಳಾಗಿದ್ದೆ . ಅಪ್ಪ ರಸ್ತೆಯಲ್ಲಿ ಬಸ್ ಓಡಿಸುತ್ತಿರಬೇಕಾದರೆ ನನ್ನ ಮಗಳು ಆಕಾಶದಲ್ಲಿ ವಿಮಾನದಲ್ಲಿ ಓಡಾಡಬೇಕು ಎಂದು ಕನಸು ಕಂಡಿದ್ದರು. ಆದರೆ ನಾನು ಮಾತ್ರ ಅಪ್ಪನ ಕನಸು ನಿಜವಾಗಿಸುತ್ತೇನೆ ಎಂದು ಕನಸು ಕಂಡಿರಲಿಲ್ಲ. ಆದರೆ, ಒಂದು ದಿನ ಅಪ್ಪ ನಮ್ಮನ್ನ ಬಿಟ್ಟು ಹೋದರು. ಈ ನೋವು ಸಹಿಸಿಕೊಳ್ಳುವ ಮುನ್ನವೇ ನನ್ನ ಅಮ್ಮನಿಗೂ ಕ್ಯಾನ್ಸರ್ 3ನೇ ಸ್ಟೇಜ್ಗೆ ಬಂದಿರುವುದು ತಿಳಿದಾಗ ನನಗೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಪ್ರತಿ ಏರಿಳಿತಗಳಲ್ಲಿಯೂ ಬೆಂಬಲ ನೀಡಿದ ತನ್ನ ಪತಿ ಸೋಮವೀರ್ಗೆ ತುಂಬು ಹೃದಯದ ಕೃತಜ್ಞತೆಗಳು. ವಿಭಿನ್ನ ಸನ್ನಿವೇಶಗಳಲ್ಲಿ ನಾನು 2032ರವರೆಗೆ ಆಡಬಹುದು. ಏಕೆಂದರೆ ನನ್ನೊಳಗಿನ ಹೋರಾಟ ಮತ್ತು ಕುಸ್ತಿ ಯಾವಾಗಲೂ ಇದ್ದೇ ಇರುತ್ತದೆ. ನನ್ನ ಕೋಚ್ ಬಗ್ಗೆ ನಾನೇನು ಬರೆದರೂ ಅದು ಕಡಿಮೆಯೇ. ಮಹಿಳೆಯರ ಕುಸ್ತಿ ಲೋಕದಲ್ಲಿ ನಾನು ಕಂಡ ಉತ್ತಮ ಕೋಚ್ ಅವರು. ಸಹನೆ ಮತ್ತು ವಿಶ್ವಾಸದಿಂದ ಯಾವುದೇ ಪರಿಸ್ಥಿತಿ ನಿಭಾಯಿಸುತ್ತಿದ್ದರು. ನಾನು ಗೆದ್ದಾಗ ಅವರು ಸಂತಸದಲ್ಲಿ ಕಣ್ಣೀರು ಹಾಕಿದ್ದನ್ನು ನೋಡಿದ್ದೇನೆ. ನನ್ನ ಯಶಸ್ಸಿಗೆ ಅಕೋಸ್ ಎಂದೂ ಶ್ರೇಯಸ್ಸು ತೆಗೆದುಕೊಂಡವರಲ್ಲ. ಕಷ್ಟದ ಕಾಲದಲ್ಲಿ ಜತೆಯಾಗಿ ನಿಂತ ಎಲ್ಲರಿಗೂ ಆಭಾರಿಯಾಗಿರುವೆ. ಮುಂದೊಂದು ದಿನ ವಿನೇಶ್ ಫೋಗಟ್ ಸಾಯಬಹುದು, ಆದರೆ ನನ್ನೊಳಗಿನ ಕುಸ್ತಿ ಮತ್ತು ಹೋರಾಟ ಯಾವತ್ತಿಗೂ ಸಾಯೋದಿಲ್ಲ, ಅದು ಎಂದಿಗೂ ಜೀವಂತವಾಗಿರುತ್ತದೆ.

ಹೀಗೆ ವಿನೇಶ್ ಫೋಗಟ್ ಭಾವುಕರಾಗಿ ತನ್ನ ಮನದಾಳದ ಮಾತನ್ನು ಬರವಣಿಗೆ ರೂಪಕ್ಕೆ ಇಳಿಸಿದ್ದಾರೆ. ಮತ್ತೊಂದೆಡೆ ವಿನೇಶ್ ಫೋಗಟ್ ಕೋಚ್ ವೋಲರ್ ಅಕೋಸ್ ಮತ್ತೊಂದು ಭಯಾನಕ ಸತ್ಯವನ್ನು ರಿವೀಲ್ ಮಾಡಿದ್ದಾರೆ. ಅನರ್ಹತೆ ತಪ್ಪಿಸಲು ತೂಕ ಇಳಿಸುವ ಪ್ರಯತ್ನದಲ್ಲಿದ್ದ ವಿನೇಶ್ ಮಧ್ಯರಾತ್ರಿಯಿಂದ ಬೆಳಗ್ಗೆ 5.30ರ ವರೆಗೂ ಕಠಿಣ ಪರಿಶ್ರಮ ಪಟ್ಟಿದ್ದಾರೆ. ಬಿಡುವಿಲ್ಲದೆ ಜಿಮ್, ಸ್ಕಿಪ್ಪಿಂಗ್, ಜಾಗಿಂಗ್, ಹಬೆಯಲ್ಲಿ ಕೂರುವ ಮೂಲಕ ತೂಕ ಇಳಿಸಲು ಪ್ರಯತ್ನಿಸಿದ್ದಾರೆ. ಇದರಿಂದ ವಿನೇಶ್ ಕುಸಿದು ಬಿದ್ದಿದ್ದರು. ಅವಳನ್ನು ಎಬ್ಬಿಸಿದೆವು. ಈ ಹಂತದಲ್ಲಿ ವಿನೇಶ್ ಸಾಯಬಹುದು ಎಂದು ನಾನು ಆತಂಕಕ್ಕೊಳಗಾಗಿದ್ದೆ ಎಂದು ಕೋಚ್ ಆ ದಿನದ ಘಟನೆಯನ್ನು ವಿವರಿಸಿದ್ದಾರೆ. ಬಹುಶಃ ಒಬ್ಬ ಕುಸ್ತಿಪಟುವಾಗಿ, ದೇಶಕ್ಕೆ ಪದಕ ತರಲೇಬೇಕು ಎಂಬ ಹಠಕ್ಕಾಗಿ ವಿನೇಶ್ ಫೋಗಟ್ ಹಾಕಿರುವ ಶ್ರಮವನ್ನು ಕೋಚ್ ಕೂಡಾ ವಿವರಿಸಿದ್ದಾರೆ. ಆದರೆ, ವಿನೇಶ್ ಹೇಳಿಕೊಂಡಂತೆ ಹಣೆಬರಹಕ್ಕೆ ಹೊಣೆ ಯಾರು.

Shwetha M