ಬಿಗ್‌ಬಾಸ್ ಮನೆಯಲ್ಲಿ ವಿನಯ್ ಗೌಡ ಮತ್ತು ಕಾರ್ತಿಕ್‌ಗೆ ಕಠಿಣ ಶಿಕ್ಷೆ – ಲವ್ ಸ್ಟೋರಿ ಮಧ್ಯೆ ಟ್ವಿಸ್ಟ್ ಕೊಟ್ಟ ರಾಖಿ ಸ್ಟೋರಿ
ಬಿಗ್‌ಬಾಸ್ ಮನೆಯಲ್ಲಿ ವಿನಯ್ ಗೌಡ ಮತ್ತು ಕಾರ್ತಿಕ್ ನಡುವೆ ಗೆಳೆತನ ಮತ್ತಷ್ಟು ಗಟ್ಟಿಯಾಗುತ್ತಿದೆ. ಮೊದಲೆರೆಡು ವಾರದಲ್ಲಿ ಕಿತ್ತಾಡಿಕೊಂಡಿದ್ದ ಸ್ನೇಹಿತರು ಈಗ ಒಂದಾಗಿದ್ದಾರೆ. ಇದರ ಜೊತೆಗೆ ಬಿಗ್‌ಬಾಸ್ ನಿಯಮವನ್ನು ಕೂಡಾ ಇಬ್ಬರೂ ಮೀರಿದ್ದಾರೆ. ಇದಕ್ಕೆ ಇಬ್ಬರಿಗೂ ಶಿಕ್ಷೆಯಾಗಿದೆ. ಜೊತೆಗೆ ಪ್ರೀತಿಯೋ, ಸ್ನೇಹವೋ ಅಂತಿದ್ದ ಜೋಡಿಗಳು ಈಗ ರಾಖಿ ಕಟ್ಟಿಕೊಂಡಿರುವುದು ಬಿಗ್‌ಬಾಸ್ ಮನೆಯಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ವಿನಯ್ ಗೌಡ ಹಾಗೂ ಕಾರ್ತಿಕ್ ಮಹೇಶ್ ಇಬ್ಬರೂ ಕೂಡಾ ಫ್ರೆಂಡ್ಸ್.. ಬಿಗ್ ಬಾಸ್ ಗೆ ಬರುವು ಮೊದಲೇ ಇಬ್ಬರ ಮಧ್ಯೆ ಪರಿಚಯ ಇತ್ತು. ಆದರೆ, ಈಗ ಬಿಗ್ ಬಾಸ್ ಮನೆಯಲ್ಲಿ ಇಬ್ಬರೂ ಪಾರ್ಟ್ನರ್ ಇನ್ ಕ್ರೈಮ್ ಆಗಿದ್ದಾರೆ. ವಿನಯ್ ಹಾಗೂ ಕಾರ್ತಿಕ್ ಅವರು ಲೈಟ್ ಆಫ್ ಮಾಡುವ ಮೊದಲೇ ನಿದ್ದೆ ಮಾಡಿದ್ದಾರೆ. ಇದರಿಂದ ಇಬ್ಬರೂ ಕಠಿಣ ಶಿಕ್ಷೆ ಅನುಭವಿಸಿದ್ದಾರೆ. ಮನೆಯ ಎಲ್ಲಾ ಸದಸ್ಯರು ಇವರ ಮುಖಕ್ಕೆ ನೀರು ಎರಚಿದ್ದಾರೆ. ‘ವಿನಯ್ ಹಾಗೂ ಕಾರ್ತಿಕ್ ಇಬ್ಬರೂ ರಾತ್ರಿ ಲೈಟ್ ಆಫ್ ಆಗುವ ಮೊದಲೇ ಮಲಗಿದ್ದರು. ಇನ್ನೂ ಮನೆಯ ಮಹತ್ವಗಳನ್ನು ಅರಿಯದೇ ಬದುಕುತ್ತಿರುವ ವಿನಯ್ ಗೌಡ ಹಾಗೂ ಕಾರ್ತಿಕ್ ಮಹೇಶ್ ಅವರಿಗೆ ಶಿಕ್ಷೆ ವಿಧಿಸಲಾಗುತ್ತಿದೆ’ ಎಂದು ಬಿಗ್‌ಬಾಸ್ ಹೇಳಿದಾಗ ಮನೆಯವರೆಲ್ಲರೂ ಅಚ್ಚರಿಗೊಂಡಿದ್ದಾರೆ. ಶಿಕ್ಷೆ ಮುಗಿದ ಮೇಲೆ ಕಾರ್ತಿಕ್ ಅವರ ಒದ್ದೆ ತಲೆಯನ್ನು ಸಂಗೀತಾ ತಮ್ಮ ಕೈಯಾರೆ ಒರೆಸಿಕೊಟ್ಟಿದ್ದು ಇನ್ನೊಂದು ವಿಶೇಷ. ಶಿಕ್ಷೆಯನ್ನು ಅನುಭವಿಸಿದ ಮೇಲೂ ನಗುನಗುತ್ತಲೇ ಭುಜಕ್ಕೆ ಭುಜ ಢೀ ಹೊಡೆದು ‘ಶಿಕ್ಷೆ ಆಗಿದೆ’ ಎಂದು ಗಹಗಹಿಸಿ ನಕ್ಕಿದ್ದಾರೆ. ಸಂಗೀತಾ ‘ನಿಮಗೆ ನಾಚಕೆ ಆಗಲ್ವಾ?’ ಎಂದು ಕೇಳಿದ್ದಾರೆ. ಅಲ್ಲದೆ, ‘ಇನ್ನಾದ್ರೂ ಎದ್ದೇಳಿ ಕಾರ್ತಿಕ್’ ಎಂದು ಎಚ್ಚರಿಸಿದ್ದಾರೆ. ಕಾರ್ತಿಕ್ ಮಾತ್ರ, ‘ಪ್ರೀತಿ ತೋರಿಸ್ತೀಯಾ ಸರಿ… ಹಂಗಾ ತೋರಿಸೋದು?’ ಎಂದು ಸಂಗೀತಾಳನ್ನು ಹುಸಿಮುನಿಸಿನಿಂದಲೇ ಪ್ರಶ್ನಿಸಿದ್ದಾರೆ. ಆಗ ಸಂಗೀತಾ ಅವರು “ಸಹವಾಸ ದೋಷದಿಂದಲೇ ಈ ರೀತಿ ಆಗಿರೋದು” ಎಂದು ಟಾಂಗ್ ಕೊಟ್ಟಿದ್ದಾರೆ.
ಮತ್ತೊಂದೆಡೆ ಬಿಗ್‌ಬಾಸ್ ಮನೆಯಲ್ಲಿ ಸ್ನೇಹ ಒಂದೆಡೆಯಾದರೆ, ಪ್ರೀತಿ ಪ್ರೇಮ ಎಂದು ಜೊತೆಯಲ್ಲೇ ಇರುವ ಜೋಡಿಗಳು ಮತ್ತೊಂದೆಡೆ. ಆದರೆ, ಯಾವುದೂ ಕನ್‌ಫರ್ಮ್ ಆಗದೇ ಇದ್ದರೂ ವೀಕ್ಷಕರೂ ಕೂಡಾ ಕಾರ್ತಿಕ್ ಮತ್ತು ಸಂಗೀತಾ ಜೋಡಿಯನ್ನು ಇಷ್ಟಪಟ್ಟಿದ್ದರು. ಇದರ ಜೊತೆಗೆ ಸ್ನೇಹಿತ್ ಮತ್ತು ನಮ್ರತಾ ಇನ್ನೇನು ಹತ್ತಿರ ಹತ್ತಿರ ಆಗುತ್ತಿದ್ದಾರೆ ಎನ್ನಲಾಗುತ್ತಿತ್ತು. ಇದರ ಮಧ್ಯೆ ಈಗ ರಾಖಿ ಬಂದಿದೆ. ಆದರೆ ಸ್ನೇಹಿತ್ ತಾವು ಯಾರಿಂದಲೂ ರಾಖಿ ಕಟ್ಟಿಸಿಕೊಳ್ಳುವುದಿಲ್ಲ ಎಂದರು. ಟಾಸ್ಕ್‌ಗಳೆಲ್ಲಾ ಮುಗಿದ ಬಳಿಕ ರಾತ್ರಿ ಮತ್ತೆ ಅದೇ ವಿಷಯ ಚರ್ಚೆಗೆ ಬಂದು, ಸ್ನೇಹಿತ್‌ಗೆ ನಮ್ರತಾ ರಾಖಿ ಕಟ್ಟುವುದು, ಕಾರ್ತಿಕ್‌ಗೆ ಸಂಗೀತಾ ರಾಖಿ ಕಟ್ಟುವುದು ಎಂದಾಯ್ತು. ಆಗ ಕಾರ್ತಿಕ್ ತಮಾಷೆಯಾಗಿ ‘ನನ್ನ ತಂಗಿಯನ್ನು ನೀನು ಮದುವೆಯಾಗು, ನಿನ್ನ ತಂಗಿಯನ್ನು ನಾನು ಮದುವೆಯಾಗ್ತೀನಿ’ ಎಂದರು. ಇದು ಎಲ್ಲರನ್ನು ನಗೆಗಡಲಲ್ಲಿ ತೇಲಿಸಿತು. ಆ ಬಳಿಕ ಸಂಗೀತಾ, ಕಾರ್ತಿಕ್‌ಗೆ ದಾರವೊಂದನ್ನು ರಾಖಿ ರೀತಿಯಲ್ಲಿ ಕಟ್ಟಿ, ಇದನ್ನು ಎಂದಿಗೂ ಬಿಚ್ಚಬೇಡ ಎಂದು ಹೇಳಿದರು. ಕಾರ್ತಿಕ್ ಸಹ ಬೇಸರದಿಂದಲೇ ರಾಖಿ ಕಟ್ಟಿಸಿಕೊಂಡರು. ಕಾರ್ತಿಕ್ ಹಾಗೂ ಸಂಗೀತಾ ಲವ್ ಸ್ಟೋರಿ ಶುರುವಾಗುತ್ತೆ ಅಂತಾ ಅಂದುಕೊಂಡವರಿಗೆ ರಾಖಿ ಸ್ಟೋರಿಯ ಟ್ವಿಸ್ಟ್ ಸಿಕ್ಕಿರುವುದು ಗೊಂದಲಕ್ಕೆ ಕಾರಣವಾಗಿದೆ.