ಇವಿಎಂ, ವಿವಿ ಪ್ಯಾಟ್ ಪುಡಿಗಟ್ಟಿ ಚುನಾವಣಾಧಿಕಾರಿಗಳಿಗೂ ಥಳಿಸಿದ ಗ್ರಾಮಸ್ಥರು – ಪೊಲೀಸರಿಂದ ಲಾಠಿಚಾರ್ಜ್ 

ಇವಿಎಂ, ವಿವಿ ಪ್ಯಾಟ್ ಪುಡಿಗಟ್ಟಿ ಚುನಾವಣಾಧಿಕಾರಿಗಳಿಗೂ ಥಳಿಸಿದ ಗ್ರಾಮಸ್ಥರು – ಪೊಲೀಸರಿಂದ ಲಾಠಿಚಾರ್ಜ್ 

ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿರುವಾಗಲೇ ವಿಜಯಪುರ ಜಿಲ್ಲೆಯ ಗ್ರಾಮವೊಂದರಲ್ಲಿ ದೊಡ್ಡ ಹೈಡ್ರಾಮಾ ನಡೆದಿದೆ. ಗ್ರಾಮಸ್ಥರು ಮತಯಂತ್ರಗಳನ್ನು ಒಡೆದು ಪುಡಿಪುಡಿ ಮಾಡಿದ ಘಟನೆ ನಡೆದಿದೆ. ಬಳಿಕ ಪೊಲೀಸರು ಲಾಠಿಚಾರ್ಜ್ ಕೂಡ ನಡೆಸಿದ್ದಾರೆ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳನ್ನು ಗ್ರಾಮಸ್ಥರು ಒಡೆದು ಹಾಕಿದ್ದಾರೆ. ಕಾಯ್ದಿರಿಸಲಾಗಿದ್ದ ಮತ ಯಂತ್ರಗಳನ್ನು ಬಿಸನಾಳ, ಡೋಣುರ ಗ್ರಾಮದಿಂದ ವಿಜಯಪುರಕ್ಕೆ ವಾಪಸ್ ತೆಗೆದುಕೊಂಡು ಬರ್ತಿದ್ದಾಗ ಘಟನೆ ನಡೆದಿದೆ. ಅರ್ಧಕ್ಕೆ ಮತದಾನ ಕಾರ್ಯ ಸ್ಥಗಿತಗೊಳಿಸಿ ವಾಪಸ್ ಕೊಂಡೊಯ್ಯಲಾಗ್ತಿದೆ ಎಂದು ತಪ್ಪು ಭಾವಿಸಿದ ಗ್ರಾಮಸ್ಥರು ಮತ ಯಂತ್ರಗಳನ್ನ ಒಡೆದು ಹಾಕಿದ್ದಾರೆ. ಅದಲ್ಲದೇ ಅಧಿಕಾರಿಗಳ ಕಾರನ್ನು ಕೂಡ ಗ್ರಾಮಸ್ಥರು ಜಖಂಗೊಳಿಸಿದ್ದಾರೆ. ಜೊತೆಗೆ ಚುನಾವಣಾ ಸಿಬ್ಬಂದಿಗೂ ಗ್ರಾಮಸ್ಥರು ಥಳಿಸಿದ್ದಾರೆ.

ಇದನ್ನೂ ಓದಿ : ಕರ್ನಾಟಕ ವಿಧಾನಸಭಾ ಚುನಾವಣೆ 2023 – ಒಂದೇ ಕುಟುಂಬದ 65 ಮಂದಿ ಏಕಕಾಲಕ್ಕೆ ಮತದಾನ

ಮಸಬಿನಾಳ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಆಗಿದ್ದು, ಮತಯಂತ್ರ ಕೆಟ್ಟಲ್ಲಿ ಬಳಕೆ ಎಂದು ರಿಸರ್ವ್ ಇಡಲಾಗಿದ್ದ ಇವಿಎಂ, ವಿವಿಪ್ಯಾಟ್ ಯಂತ್ರಗಳನ್ನು ಒಡೆದು ಹಾಕಲಾಗಿದೆ. ಮೀಸಲು ಇಡಲಾಗಿದ್ದ ಇವಿಎಂ, ವಿವಿಪ್ಯಾಟ್‌ಗಳನ್ನು ವಾಪಸ್ ತೆಗೆದುಕೊಂಡು ಹೋಗುವುದನ್ನು ಗಮನಿಸಿದ ಜನರು ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಸಿಬ್ಬಂದಿ ಸರಿಯಾಗಿ ಉತ್ತರಿಸದೇ ಇದ್ದಾಗ, ಆಕ್ರೋಶಗೊಂಡ ಜನರು ತಪ್ಪು ಭಾವಿಸಿ ಮತಯಂತ್ರ ಒಡೆದು ಹಾಕಿದ್ದಾರೆ. ಬಳಿಕ ಪೊಲೀಸರು ಗ್ರಾಮಸ್ಥರ ಮೇಲೆ ಲಾಠಿಚಾರ್ಜ್ ನಡೆಸಿದ್ದು ಗ್ರಾಮದಲ್ಲಿ ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿದೆ.

 

suddiyaana