ಮಳೆ ಬಾರದೇ ಇದ್ದಿದ್ದಕ್ಕೆ ದೇವರಿಗೆ ಜಲ ದಿಗ್ಬಂಧನ! – ಈ ಗ್ರಾಮದಲ್ಲಿ 7 ದಿನ ದೇವರಿಗೆ ಪೂಜೆ ಇಲ್ಲ

ಮಳೆ ಬಾರದೇ ಇದ್ದಿದ್ದಕ್ಕೆ ದೇವರಿಗೆ ಜಲ ದಿಗ್ಬಂಧನ! – ಈ ಗ್ರಾಮದಲ್ಲಿ 7 ದಿನ ದೇವರಿಗೆ ಪೂಜೆ ಇಲ್ಲ

ಸಾಮಾನ್ಯವಾಗಿ ಮಳೆ ವಿಳಂಬವಾದರೇ ಆದಷ್ಟು ಬೇಗ ಮಳೆ ಬರಲಿ ಎಂದು ಕಪ್ಪೆಗಳಿಗೆ, ಕೋತಿಗಳಿಗೆ ಮದುವೆ ಮಾಡಿಸುತ್ತಾರೆ. ಇನ್ನೂ ಕೆಲವರು ಬೇಗ ಮಳೆ ಬರಲಿ ಎಂದು ಹೋಮ ಹವನ ಮಾಡಿಸುತ್ತಾರೆ ಎಂಬುವುದನ್ನು ನಾವು ಕೇಳಿರುತ್ತೇವೆ. ಆದರೆ ಇಲ್ಲೊಂದು ಕಡೆ ಮಾತ್ರ ಪೂಜೆ ಮಾಡುವ ಬದಲು ದೇವರನ್ನೇ ದಿಗ್ಬಂಧನ ಮಾಡಿ ಶಿಕ್ಷೆ ನೀಡಲಾಗಿದೆ!

ಸಾಮಾನ್ಯವಾಗಿ ಯಾವುದೇ ಸಂಕಷ್ಟ ಬಂದಾಗ ಸಂಕಷ್ಟ ಪರಿಹರಿಸು ಎಂದು ದೇವರನ್ನು ನಾವು ಬೇಡಿಕೊಳ್ಳುತ್ತೇವೆ. ಹರಕೆ ಹೊತ್ತುಕೊಳ್ಳುವುದನ್ನು ನಾವು ನೋಡಿರುತ್ತೇವೆ. ಆದರೆ ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿ ಗ್ರಾಮದ ಜನರು ಮಳೆ ಬಂದಿಲ್ಲ. ಕುಡಿಯಲು ನೀರಿಲ್ಲ ಎಂಬ ಕಾರಣಕ್ಕೆ ದೇವರಿಗೇ ಶಿಕ್ಷೆ ನೀಡಿದ್ದಾರೆ.

ಇದನ್ನೂ ಓದಿ: ಗುಜರಾತ್‌ ಆಯ್ತು ಈಗ ರಾಜಸ್ಥಾನಕ್ಕೆ ಪ್ರವೇಶಿಸಲಿರುವ ಬಿಪರ್‌ ಜಾಯ್‌ ಚಂಡಮಾರುತ – ರೈಲು ಸಂಚಾರ ಸ್ಥಗಿತ

ಜಿಲ್ಲೆಯಲ್ಲಿ ಬೆಳಗಾವಿ, ಧಾರವಾಡ, ಬಾಗಲಕೋಟ, ಗದಗ ಜಿಲ್ಲೆಯ ಜೀವನಾಡಿಯಾದ ಮಲಪ್ರಭಾ ನದಿಯಲ್ಲಿ ಈ ಭಾರಿ ನೀರಿನ ಪ್ರಮಾಣ ಇಳಿಕೆಯಾಗಿದೆ. ಇದರಿಂದ ಜಿಲ್ಲೆ ಸೇರಿ ಸವದತ್ತಿ, ಹುಬ್ಬಳ್ಳಿ, ಧಾರವಾಡಕ್ಕೆ ನೀರಿನ ಅಭಾವವಾಗುವ ಚಿಂತೆ ಎದುರಾಗಿದೆ. ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ನವಿಲು ತೀರ್ಥ ಜಲಾಶಯ ಬಹುತೇಕ ಖಾಲಿಯಾಗಿದೆ. ಇನ್ನೊಂದು ವಾರದಲ್ಲಿ ಮಳೆ ಆಗದಿದ್ದರೆ, ಜಿಲ್ಲೆಯ ಜನರಿಗೆ ಕಂಟಕ ಕಾದಿದೆ. ಈ ಹಿನ್ನಲೆ ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿ ಗ್ರಾಮದಲ್ಲಿ ಜಲ ದಿಗ್ಬಂಧನ ಹಾಕಿ ದೇವರಿಗೆ ಶಿಕ್ಷೆ ನೀಡಿದ್ದಾರೆ.

ಗ್ರಾಮದ ಜನರು ಬರಗಾಲದ ಮುನ್ಸೂಚನೆಗೆ ಹೆದರಿ ಗ್ರಾಮದ ಸೂರ್ಯನಾರಾಯಣ ದೇವಸ್ಥಾನದ ಗರ್ಭಗುಡಿಯಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ನೀರು ಹಾಕಿ, ಜಲ ದಿಗ್ಬಂಧನ ಮಾಡುವ ಮೂಲಕ ದೇವರನ್ನೇ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. 7 ದಿನಗಳ ಕಾಲ ಹೀಗೆ ದೇವರನ್ನು ಜಲ ದಿಗ್ಬಂಧನಕ್ಕೆ ಹಾಕಿದಾಗ ಮಳೆಯಾಗುತ್ತದೆ ಎಂದು ಗ್ರಾಮದ ಜನರ ನಂಬಿಕೆಯಾಗಿದೆ. ಬರಗಾಲದ ಸೂಚನೆ ಸಿಕ್ಕಾಗ ಗ್ರಾಮಸ್ಥರೆಲ್ಲರೂ ಸೇರಿ ಜಲ ದಿಗ್ಬಂಧನ ಹಾಕುತ್ತಾರೆ. 7 ದಿನಗಳ ನಂತರ ದೇವಸ್ಥಾನದ ಬಾಗಿಲು ಓಪನ್ ಮಾಡಿ, ಗ್ರಾಮಸ್ಥರು ಸೂರ್ಯನಾರಾಯಣ ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಅದರಂತೆ ಇದೀಗ ಗರ್ಭಗುಡಿಯಲ್ಲಿ ನೀರು ಹಾಕಿ, ಬೀಗ ಹಾಕಿದ್ದಾರೆ.

suddiyaana