ಪುತ್ರನಿಗಾಗಿ ಪ್ರತಾಪ್ ಸಿಂಹ ಮೇಲೆ ಸಿದ್ದು ಸೇಡು..! – ಲೋಕಸಭಾ ಚುನಾವಣೆ ಹೊತ್ತಲ್ಲೇ ಮೈಸೂರಲ್ಲಿ ಸಿದ್ದರಾಮಯ್ಯ ರಣತಂತ್ರ ಆರೋಪ..!
ಲೋಕಸಭಾ ಚುನಾವಣೆ ಹೊತ್ತಲ್ಲೇ ಮೈಸೂರಲ್ಲಿ ಭಾರೀ ಹೈಡ್ರಾಮಾಗಳು ನಡೆಯುತ್ತಿವೆ. ವಾರಗಳ ಹಿಂದೆ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ನಂದಗೋಡನಹಳ್ಳಿ ಗ್ರಾಮದ ಸರ್ವೆ ನಂಬರ್ 16 ರಲ್ಲಿ ಹಾಗು ಪಕ್ಕದ ಸರ್ಕಾರಿ ಜಮೀನಿನಲ್ಲಿ ಮರಗಳನ್ನ ಕಡಿಯಲಾಗಿತ್ತು. ಬಳಿಕ ಬೇಲೂರು ದಂಡಾಧಿಕಾರಿ ದೂರಿನ ಅನ್ವಯ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಾಲಿ ಸಂಸದ ಪ್ರತಾಪ್ ಸಿಂಹರ ಸೋದರ ವಿಕ್ರಮ್ ಸಿಂಹ ವಿರುದ್ಧ ದೂರು ನೀಡಲಾಗಿತ್ತು. ಅದ್ರಂತೆ ವಿಚಾರಣೆಗೆ ಆಗಮಿಸುವಂತೆ ವಿಕ್ರಮ್ ಸಿಂಹ ಅವರಿಗೆ ನೋಟಿಸ್ ನೀಡಲಾಗಿತ್ತು. ಆದ್ರೆ ಅದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ. ಇದಕ್ಕೆ ವ್ಯಾಪಕ ಚರ್ಚೆಯಾಗಿ ಬಂಧಿಸುವಂತೆ ಒತ್ತಡ ಬಂದಿತ್ತು. ಕೊನೆಗೆ ಶನಿವಾರ ಬೆಂಗಳೂರಿನಲ್ಲಿ ವಿಕ್ರಮ ಸಿಂಹ ಅವರನ್ನು ಬಂಧಿಸಿ ಭಾನುವಾರ ಬೇಲೂರಿನ ಜೆಎಮ್ ಎಫ್ ಸಿ ನ್ಯಾಯಾಧೀಶರ ಮುಂದೆ ಅರಣ್ಯಾಧಿಕಾರಿಗಳು ಹಾಜರು ಪಡಿಸಿದ್ದರು. ಬಳಿಕ ನ್ಯಾಯಾಧೀಶರು ವಿಕ್ರಮ್ ಸಿಂಹ ಅವರಿಗೆ ಜಾಮೀನು ಮಂಜೂರು ಮಾಡಿದ್ದರು. ಇಡೀ ಘಟನೆಯ ಬೆಳವಣಿಗೆ ಈಗ ರಾಜಕೀಯ ತಿರುವು ಪಡೆದಿದೆ.
ಇದನ್ನೂ ಓದಿ: ಮಂಡ್ಯದಿಂದ ಸುಮಲತಾಗೆ ಗೇಟ್‌ಪಾಸ್..! – ಹೆಚ್.ಡಿ ಕುಮಾರಸ್ವಾಮಿ ತಂತ್ರ ಫಲಿಸುತ್ತಾ?
ಸಂಸದ ಪ್ರತಾಪ್ ಸಿಂಹರನ್ನ ಮುಗಿಸೋಕೆ ಸಿದ್ದರಾಮಯ್ಯ ಹೆಣೆದಿರುವ ತಂತ್ರ ಎಂದು ಬಿಜೆಪಿ ನಾಯಕರು ಆರೋಪ ಮಾಡ್ತಿದ್ದಾರೆ. ಮೈಸೂರಿನಿಂದ ಯತೀಂದ್ರರನ್ನು ಚುನಾವಣೆಗೆ ನಿಲ್ಲಿಸೋ ತಯಾರಿ ಎಂದು ಆರೋಪಿಸುತ್ತಿದ್ದಾರೆ. ಆದ್ರೆ ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿಂದ್ಲೂ ಯತೀಂದ್ರ ಹೆಸ್ರು ವಿವಾದಗಳಿಂದಲೇ ಥಳಕು ಹಾಕಿಕೊಳ್ತಿದೆ.
ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಚನೆಯಾದ ಮೇಲೆ ಯತೀಂದ್ರ ಹೆಸರು ಫುಲ್ ಟ್ರೆಂಡಿಂಗ್ನಲ್ಲಿದೆ. ಅದೂ ಕೂಡ ಭಷ್ಟಾಚಾರದ ವಿಚಾರದಲ್ಲಿ. ಅಪ್ಪನ ಹೆಸ್ರಲ್ಲಿ ಮಗ ರೋಲ್ಕಾಲ್ ಮಾಡ್ತಿದ್ದಾನೆ ಅಂತಾ ವಿಪಕ್ಷಗಳು ಗಂಭೀರವಾಗಿಯೇ ಆರೋಪ ಮಾಡಿದ್ದವು. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜಿಎಸ್ಟಿ ಥರ ವೈಎಸ್ಟಿ ಟ್ಯಾಕ್ಸ್ ಕಟ್ಟಬೇಕು. ಯತೀಂದ್ರ ಸಿದ್ದರಾಮಯ್ಯ ಟ್ಯಾಕ್ಸ್ ಅಂದಿದ್ರು. ಇದೀಗ ಯತೀಂದ್ರ ಹೆಸರು ಮತ್ತೊಮ್ಮೆ ಚರ್ಚೆಗೆ ಬಂದಿದೆ. ವರುಣಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ನೇಮಕ ಮಾಡುವ ಮೂಲಕ ಸಾಂವಿಧಾನಿಕ ಹುದ್ದೆ ನೀಡಲಾಗಿತ್ತು. ಹಾಗೂ ಸಿಎಂ ಕಚೇರಿಯ ಮಹದೇವ್ ಎಂಬ ಅಧಿಕಾರಿಯೊಂದಿಗೆ ಮಾತನಾಡಿದ್ದ ಯತೀಂದ್ರ ನಾನು ಕೊಟ್ಟ ಲಿಸ್ಟ್ ಅನ್ನೇ ತಂದೆಗೆ ಕೊಡಬೇಕು. ಅದು ಇದು ಯಾಕೆ ಕೊಡ್ತೀರಿ? ಎಂದಿದ್ದರು. ಇನ್ನು ಪ್ರತಾಪ್ ಸಿಂಹ ಕಚೇರಿ ಪಾಸ್ ಪಡೆದು ಲೋಕಸಭೆಗೆ ಅಪರಿಚಿತರು ನುಗ್ಗಿ ದಾಳಿ ಮಾಡಿದ್ದಾಗಲೂ ಪ್ರತಾಪ್ ಸಿಂಹ ಹೆಸರು ಹಾಳು ಮಾಡಲು ಸಂಚು ಎನ್ನಲಾಗಿತ್ತು.
ಇಷ್ಟೆಲ್ಲಾ ಬೆಳವಣಿಗೆಗೆ ಕಾರಣ ಯತೀಂದ್ರ ಎನ್ನಲಾಗ್ತಿದೆ. ಯಾಕಂದ್ರೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಯತೀಂದ್ರ ಸ್ಪರ್ಧಿಸ್ತಾರೆ. ಸಿದ್ದರಾಮಯ್ಯ ತಮ್ಮ ಪುತ್ರನಿಗಾಗಿ ಹಾಲಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಷಡ್ಯಂತ್ರಗಳನ್ನ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಬಿಜೆಪಿ ನಾಯಕರು ಬಹಿರಂಗವಾಗಿಯೇ ಈ ಹೇಳಿಕೆಗಳನ್ನ ನೀಡ್ತಿದ್ದಾರೆ. ಯಾಕಂದ್ರೆ ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಪ್ರಾಬಲ್ಯ ಮುಂದುವರಿದಿದೆ. ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದ್ದಾರೆ.