ಇನ್ನೂ ಸಂದೇಶ ಕಳುಹಿಸದ ವಿಕ್ರಂ, ಪ್ರಜ್ಞಾನ್‌ – ಸ್ಲೀಪ್‌ಮೋಡ್‌ನಿಂದ ಎಚ್ಚರಗೊಳಿಸಲು ವಿಜ್ಞಾನಿಗಳ ಹರಸಾಹಸ!

ಇನ್ನೂ ಸಂದೇಶ ಕಳುಹಿಸದ ವಿಕ್ರಂ, ಪ್ರಜ್ಞಾನ್‌ – ಸ್ಲೀಪ್‌ಮೋಡ್‌ನಿಂದ ಎಚ್ಚರಗೊಳಿಸಲು ವಿಜ್ಞಾನಿಗಳ ಹರಸಾಹಸ!

ನವದೆಹಲಿ: ಚಂದ್ರನಲ್ಲಿ ಈಗ ಸೂರ್ಯೋದಯವಾಗಿದ್ದು, ಸುಮಾರು 16 ದಿನಗಳಿಂದ ಚಂದ್ರನ ಮೇಲ್ಮೈನಲ್ಲಿ ಸ್ಲೀಪ್‌ಮೋಡ್‌ನಲ್ಲಿದ್ದ ವಿಕ್ರಂ ಲ್ಯಾಂಡರ್‌ ಮತ್ತು ಪ್ರಜ್ಞಾನ್‌ ರೋವರ್‌ಗಳನ್ನು ಮತ್ತೆ ಎಚ್ಚರಿಸುವ ಪ್ರಯತ್ನವನ್ನು ಇಸ್ರೋ ವಿಜ್ಞಾನಿಗಳು ಮಾಡುತ್ತಿದ್ದಾರೆ. ಆದರೆ ವಿಕ್ರಂ ಲ್ಯಾಂಡರ್‌ ಮತ್ತು ಪ್ರಜ್ಞಾನ್‌ ರೋವರ್‌ ಯಾವುದೇ ಸಂದೇಶ ಕಳುಗಹಿಸದ ಹಿನ್ನೆಲೆ ಈ ಕಾರ್ಯಾಚರಣೆಯನ್ನು ವಿಜ್ಞಾನಿಗಳು ಒಂದು ದಿನ ಮುಂದೂಡಿದ್ದಾರೆ. ಹೀಗಾಗಿ ಶುಕ್ರವಾರ ಸಂಜೆ ನಡೆಯಬೇಕಿದ್ದ ಪ್ರಯತ್ನ ಶನಿವಾರ ನಡೆಯಲಿದೆ.

ಸೆಪ್ಟೆಂಬರ್ 22ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಸೂರ್ಯೋದಯವಾದ ಕಾರಣ ಲ್ಯಾಂಡರ್‌ ಮತ್ತು ರೋವರ್‌ಗಳು ಅಲ್ಲಿಂದ ಯಾವುದಾದರೂ ಸಂದೇಶ ಕಳುಹಿಸಬಹುದು ಎಂಬ ನಿರೀಕ್ಷೆಯಲ್ಲಿ ಇಸ್ರೋ ಇತ್ತು. ಆದರೆ ಶುಕ್ರವಾರ ಯಾವುದೇ ಸಂದೇಶ ರವಾನೆಯಾಗಿಲ್ಲ. ಹೀಗಾಗಿ ಅವುಗಳನ್ನು ಎಬ್ಬಿಸುವ ಪ್ರಕ್ರಿಯೆಯನ್ನು ಶನಿವಾರ ನಡೆಸಲು ಉದ್ದೇಶಿಸಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಇದನ್ನೂ ಓದಿ: ​​​ʼಸಮಸ್ಯೆ ಬಗೆಹರಿಸಿದ್ರೆ ನನ್ನೊಂದಿಗೆ ಡೇಟಿಂಗ್‌ ಮಾಡಬಹುದುʼ! – ಯುವತಿ ಸಮಸ್ಯೆ ನೋಡಿ ಯುವಕರು ತಬ್ಬಿಬ್ಬು!

ಸ್ಪೇಸ್‌ ಅಪ್ಲಿಕೇಶನ್‌ ಕೇಂದ್ರದ ನಿರ್ದೇಶಕ ನಿಲೇಶ್‌ ದೇಸಾಯಿ ಈ ಬಗ್ಗೆ ಮಾಹಿತಿ ನೀಡಿದ್ದು, ‘ಸೆಪ್ಟೆಂಬರ್ 22ರಂದು ಲ್ಯಾಂಡರ್‌ ಮತ್ತು ರೋವರ್‌ಗಳನ್ನು ಏಳಿಸಲು ನಾವು ಯೋಜನೆ ರೂಪಿಸಿದ್ದೆವು. ಆದರೆ ಹಲವು ಕಾರಣಗಳಿಂದ ಇದನ್ನು ಶನಿವಾರಕ್ಕೆ ಮುಂದೂಡಲಾಗಿದೆ. ಇವುಗಳನ್ನು ಮತ್ತೆ ಸಕ್ರಿಯಗೊಳಿಸಲು ನಮ್ಮ ಬಳಿ ಯೋಜನೆಯಿದೆ. ಈ ಬಾರಿ ರೋವರನ್ನು ಸುಮಾರು 300ರಿಂದ 350 ಮೀ. ದೂರ ಸಾಗುವಂತೆ ಮಾಡಲಿದ್ದೇವೆ. ಈಗಾಗಲೇ ರೋವರ್‌ನಿಂದ ಪಡೆದುಕೊಂಡಿರುವ ಮಾಹಿತಿಯನ್ನು ಆಧರಿಸಿ ನಮ್ಮ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ಚಂದ್ರನ ದಕ್ಷಿನ ಧ್ರುವದ ಮೇಲೆ ಸುರಕ್ಷಿತವಾಗಿ ಇಳಿದ ಬಳಿಕ 10 ದಿನಗಳ ಕಾಲ ಕೆಲಸ ಮಾಡಿದ್ದ ರೋವರನ್ನು 2 ದಿನ ಮೊದಲೇ ಸ್ಲೀಪ್‌ಮೋಡ್‌ಗೆ ಹಾಕಲಾಗಿತ್ತು. ಇದೀಗ ಶನಿವಾರ ರೋವರ್‌ ಸಕ್ರಿಯಗೊಂಡರೆ ಮತ್ತೆ 13 ದಿನಗಳ ಕಾಲ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದ್ದಾರೆ.

Shwetha M