ಚಂದ್ರಯಾನ-3 ಗೆ ಮತ್ತೊಂದು ಯಶಸ್ಸು – ನೌಕೆಯಿಂದ ಬೇರ್ಪಟ್ಟ ಲ್ಯಾಂಡರ್ ಮಾಡ್ಯೂಲ್!

ಚಂದ್ರಯಾನ-3 ಗೆ ಮತ್ತೊಂದು ಯಶಸ್ಸು – ನೌಕೆಯಿಂದ ಬೇರ್ಪಟ್ಟ ಲ್ಯಾಂಡರ್ ಮಾಡ್ಯೂಲ್!

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ-3 ಹಂತ ಹಂತವಾಗಿ ಯಶಸ್ಸನ್ನು ಕಾಣುತ್ತಿದೆ. ಇದೀಗ ಚಂದ್ರಯಾನ – 3 ಮತ್ತೊಂದು ಮಹತ್ತರ ಘಟ್ಟ ತಲುಪಿದ್ದು, ಲ್ಯಾಂಡರ್ ಪ್ರತ್ಯೇಕ ಪ್ರಕ್ರಿಯೆ ಯಶಸ್ವಿಯಾಗಿದೆ.

ಪ್ರೊಪಲ್ಷನ್ ಮಾಡ್ಯೂಲ್ ನಿಂದ ಪ್ರತ್ಯೇಕಗೊಂಡ ಲ್ಯಾಂಡರ್, ಚಂದ್ರನ ಅಂತಿಮ ಕಕ್ಷೆ ಪ್ರವೇಶಿಸಿದ್ದು, ಚಂದ್ರನಿಗೆ ಮತ್ತಷ್ಟು ಹತ್ತಿರವಾಗಿದೆ. ಶುಕ್ರವಾರ ಸಂಜೆ ವೇಳೆಗೆ ಡೀ-ಬೂಸ್ಟಿಂಗ್ ನಡೆಯಲಿದ್ದು, ಲ್ಯಾಂಡರ್ ನ್ನು ಹಂತ ಹಂತವಾಗಿ ಚಂದ್ರನ ಮೇಲ್ಮೈ ಗೆ ಇಳಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಇದನ್ನೂ ಓದಿ: ಭಾರತ ಆಯ್ತು, ನ್ಯೂಯಾರ್ಕ್‌ನಲ್ಲೂ ಟಿಕ್‌ಟಾಕ್ ಬ್ಯಾನ್! –  ಕಾರಣವೇನು ಗೊತ್ತಾ?

ಜುಲೈ 14ರಂದು ಉಡಾವಣೆಗೊಂಡ ಚಂದ್ರಯಾನ-3 ನೌಕೆ ಆಗಸ್ಟ್ 5ರಂದು ಚಂದ್ರನ ಕಕ್ಷೆ ಪ್ರವೇಶಿಸಿತ್ತು. ಅದಾದ ಬಳಿಕ ಸತತ ಮೂರು ಕಕ್ಷೆ ಪರಿಚಲನೆ ಮೂಲಕ (ಆಗಸ್ಟ್ 6, 9 ಹಾಗೂ 14) ಚಂದ್ರನ ಮೇಲ್ಮೈಯ ಸನಿಹಕ್ಕೆ ತಲುಪಿದೆ. ಆಗಸ್ಟ್ 23ರಂದು ಸಾಫ್ಟ್ ಲ್ಯಾಂಡಿಂಗ್ ಮೂಲಕ ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸಲು ಯೋಜಿಸಲಾಗಿದೆ.

‘ಚಂದ್ರಯಾನ-3’ ನೌಕೆಯು ಬುಧವಾರ ಚಂದ್ರನ ಅಂತಿಮ ಕಕ್ಷೆ ಪ್ರವೇಶಿಸಿತ್ತು. ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್‌ ಆಗುವ ಮುನ್ನ ಉಡಾವಣಾ (ಪ್ರೊಪಲ್ಷನ್ ಮಾಡ್ಯೂಲ್‌) ವಾಹನದಲ್ಲಿರುವ ಲ್ಯಾಂಡರ್‌ ಮಾಡ್ಯೂಲ್‌ ‘ವಿಕ್ರಮ್’ ಅನ್ನು ಪ್ರತ್ಯೇಕಗೊಳಿಸುವ ಕಾರ್ಯ ಗುರುವಾರ ನಡೆಯಲಿದೆ ಎಂದು ಹೇಳಿತ್ತು. ಇದೀಗ ʻವಿಕ್ರಮ್‌ʼ ಲ್ಯಾಂಡರ್‌ ಯಶಸ್ವಿಯಾಗಿ ಬೇರ್ಪಟ್ಟಿದ್ದು, ಚಂದ್ರಯನ ಮೇಲೆ ನೌಕೆ ಇಳಿಯುವ ಕನಸು ನನಸಾಗಲು ದಿನಗಣನೆ ಆರಂಭವಾಗಿದೆ.

suddiyaana