ಅಮಿತ್ ಶಾಗೆ ಹೂಗುಚ್ಛ ನೀಡಿ ಉಪಹಾರ ಬಡಿಸಿದ ವಿಜಯೇಂದ್ರ – ಕೇಸರಿ ಪಾಳಯದಲ್ಲಿ ಅದೆಷ್ಟು ಲೆಕ್ಕಾಚಾರ?

ಅಮಿತ್ ಶಾಗೆ ಹೂಗುಚ್ಛ ನೀಡಿ ಉಪಹಾರ ಬಡಿಸಿದ ವಿಜಯೇಂದ್ರ – ಕೇಸರಿ ಪಾಳಯದಲ್ಲಿ ಅದೆಷ್ಟು ಲೆಕ್ಕಾಚಾರ?

ಕರ್ನಾಟಕ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡುವೆಯೇ ದೆಹಲಿ ನಾಯಕರು ರಾಜ್ಯಕ್ಕೆ ಮೇಲಿಂದ ಮೇಲೆ ಭೇಟಿ ನೀಡುತ್ತಿದ್ದಾರೆ. ಇದೀಗ ಬಿಜೆಪಿಯಲ್ಲಿ ಚುನಾವಣಾ ಚಾಣಕ್ಯ ಅಂತಾನೇ ಕರೆಸಿಕೊಳ್ಳುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಇವತ್ತು ಬಿ.ಎಸ್ ಯಡಿಯೂರಪ್ಪ ನಿವಾಸಕ್ಕೆ ತೆರಳಿದ್ದು, ಈ ಭೇಟಿ ಹಲವು ಕುತೂಹಲಗಳಿಗೆ ಕಾರಣವಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಇಂದು(ಮಾರ್ಚ್ 24) ಬೆಳಗ್ಗೆ‌ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ(BS Yediyurappa) ಅವರ ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಉಪಹಾರ ಸೇವಿಸಿದರು. ಉಪಹಾರಕ್ಕೂ ಮುನ್ನ ಕಾರಿನ ಬಳಿ ಬಂದು ಅಮಿತ್ ಶಾ ಅವರನ್ನು ಯಡಿಯೂರಪ್ಪ ಮತ್ತು ಬಿ.ವೈ. ವಿಜಯೇಂದ್ರ ಸ್ವಾಗತಿಸಿದರು. ಈ ವೇಳೆ ಯಡಿಯೂರಪ್ಪ ಅಮಿತ್ ಶಾಗೆ ಹೂವಿನ ಬೊಕ್ಕೆ ಕೊಟ್ಟು ಸ್ವಾಗತಿಸಲು ಮುಂದಾದರು. ಆದ್ರೆ, ಶಾ ವಿಜಯೇಂದ್ರ (BY Vijayendra) ಕೈಗೆ ಹೂಗುಚ್ಛ ಕೊಡುವಂತೆ ಬಿಎಸ್​ವೈಗೆ ಹೇಳಿದರು. ನಂತರ ಯಡಿಯೂರಪ್ಪ ತಮ್ಮ ಕೈಯಲ್ಲಿದ್ದ ಹೂವಿನ ಬೊಕ್ಕೆಯನ್ನು ವಿಜಯೇಂದ್ರ ಕೈಗೆ ನೀಡಿದರು. ಅನಂತರ ಅದೇ ಹೂಗುಚ್ಛವನ್ನು ವಿಜಯೇಂದ್ರ, ಅಮಿತ್ ಶಾಗೆ ನೀಡಿ ಸ್ವಾಗತಿಸಿರುವುದು ವಿಶೇಷವಾಗಿದೆ.

ಇದನ್ನೂ ಓದಿ : ದಾವಣಗೆರೆ ನಗರದಲ್ಲಿ ನಾಳೆ ಯಾವ್ಯಾವ ವಾಹನಗಳ ಸಂಚಾರಕ್ಕೆ ನಿಷೇಧ – ಪರ್ಯಾಯ ಮಾರ್ಗಗಳೇನು..?

ಇದೇ ವೇಳೆ ಅಮಿತ್ ಶಾ ವಿಜಯೇಂದ್ರಗೆ ಬೆನ್ನು ತಟ್ಟಿದ್ದಾರೆ. ಅಮಿತ್ ಶಾ ಯಡಿಯೂರಪ್ಪಗಿಂತ ವಿಜಯೇಂದ್ರಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದು ಕುತೂಹಲ ಮೂಡಿಸಿದೆ. ಹಾಗೂ ಬಿಜೆಪಿ ಪಾಳಯದಲ್ಲಿ ಹಲವು ಲೆಕ್ಕಾಚಾರಗಳು ಕೂಡ ಶುರುವಾಗಿವೆ.

ಅಮಿತ್ ಶಾ ಅವರು ಉಪಹಾರ ಕೂಟದಲ್ಲಿ ರಾಜ್ಯ ನಾಯಕರೊಂದಿಗೆ ಮಹತ್ವದ ಚರ್ಚೆ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ನಿವಾಸದಲ್ಲಿ ನಡೆದ ಉಪಹಾರ ಕೂಟದ ವೇಳೆ ರಾಜ್ಯ ರಾಜಕೀಯ ಪರಿಸ್ಥಿತಿ ಬಗ್ಗೆ ನಾಯಕರೊಂದಿಗೆ ಚರ್ಚೆ ಮಾಡಿದ್ದಾರೆ.

ಇನ್ನು ಮಾಜಿ ಸಿಎಂ B.S.ಯಡಿಯೂರಪ್ಪ ನಿವಾಸದಲ್ಲಿ ಆಯೋಜಿಸಲಾಗಿದ್ದ ಉಪಾಹಾರ ಕೂಟದಲ್ಲಿ ಸಿಎಂ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​​ ಕಟೀಲ್​, ಸಚಿವರಾದ ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ ಪಾಲ್ಗೊಂಡಿದ್ದರು.ಅಮಿತ್​ ಶಾಗೆ ಇಡ್ಲಿ, ದೋಸೆ, ಪೊಂಗಲ್​, ಉಪ್ಪಿಟ್ಟು, ರಸ್ ಮಲಾಯ್ ಖಾದ್ಯಗಳನ್ನು ಸಿದ್ಧ ಪಡಿಸಲಾಗಿತ್ತು. ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಅಮಿತ್​ ಶಾಗೆ ಉಪಹಾರ ಬಡಿಸಿ ಗಮನ ಸೆಳೆದರು.

ಉಪಹಾರ ಸವಿದ ಅಮಿತ್ ಶಾ ಜತೆಗೆ ಯಡಿಯೂರಪ್ಪ ರಾಜ್ಯ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ಮಾಡಿದರು. ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದು ಮತ್ತೆ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

suddiyaana