BJPಯಲ್ಲಿ ಸಿಡಿದೆದ್ದ ವಿರೋಧ ಬಣ! ರಾಜೀನಾಮೆ ನೀಡ್ತಾರಾ ವಿಜಯೇಂದ್ರ?
ಯತ್ನಾಳ್ ಚಡ್ಡಿ ವಿಷ್ಯ ತೆಗೆದಿದ್ದೇಕೆ?

BJPಯಲ್ಲಿ ಸಿಡಿದೆದ್ದ ವಿರೋಧ ಬಣ! ರಾಜೀನಾಮೆ ನೀಡ್ತಾರಾ ವಿಜಯೇಂದ್ರ?ಯತ್ನಾಳ್ ಚಡ್ಡಿ ವಿಷ್ಯ ತೆಗೆದಿದ್ದೇಕೆ?

ರಾಜ್ಯ ಕಮಲ ಪಾಳಯದಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಡಿದೆ. ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಬಳಿಕ ಒಬ್ಬರಾದ ಮೆಲೆ ಒಬ್ಬರು ಬಹಿರಂಗವಾಗಿಯೇ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಹಾಗೂ ಶ್ರೀರಾಮುಲು ನಂತರ ಇದೀಗ ವಿಜಯೇಂದ್ರ ವಿರುದ್ಧ ಮತ್ತೊಬ್ಬ ಮಾಜಿ ಸಚಿವ ಹಾಗೂ ಹಾಲಿ ಸಂಸದ ಡಾ. ಕೆ. ಸುಧಾಕರ್ ಅವರು ಬಹಿರಂಗವಾಗಿಯೇ ಗುಡುಗಿದ್ದಾರೆ.
ವಿಜಯೇಂದ್ರ ವಿರುದ್ದ ಹೈಕಮಾಂಡ್‌ಗೆ ದೂರು

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಏಕಪಕ್ಷೀಯ ನಿರ್ಧಾರದಿಂದ ವಿರೋಧಿ ಬಣ ಸಿಡಿದೆದಿದ್ದು, ವಿಜಯೇಂದ್ರ ವಿರುದ್ಧ ಹೈಕಮಾಂಡ್‌ ಗೆ ದೂರು ನೀಡಲು ವಿರೋಧಿ ಬಣ ಮುಂದಾಗಿದೆ. ಈ ಕುರಿತು ಸಂಸದ ಡಾ.ಕೆ ಸುಧಾಕರ್‌ ಮಾಹಿತಿಯನ್ನ ಹಂಚಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಅವರ ಬಳಿಗೆ ಹೋಗಿ ಎಲ್ಲವನ್ನೂ ಹೇಳುತ್ತೇನೆ. ವಿಜಯೇಂದ್ರ ಯಾವ ರೀತಿ ಪಕ್ಷ ಸಂಘಟಿಸುತ್ತಿದ್ದಾರೆ ಎಂದು ವಾಸ್ತವಾಂಶ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಅವರಿಗೆ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಯಡಿಯೂರಪ್ಪ ಅವರ ನಾಯಕತ್ವವೇ ಬೇರೆ ರೀತಿಯಲ್ಲಿದೆ. ಅವರೊಂದಿಗೆ ನಾನು ಕೆಲಸ ಮಾಡಿದ್ದೇನೆ. ತಂದೆಯವರ ಯಾವುದೇ ಗುಣ ವಿಜಯೇಂದ್ರ ಅವರಿಗೆ ಬಂದಿಲ್ಲ. ನಾನು ಬಸವರಾಜ ಬೊಮ್ಮಾಯಿ ಅವರೊಂದಿಗೆ ಕೆಲಸ ಮಾಡಿದ್ದೇನೆ ಎಂಬ ಕಾರಣಕ್ಕೆ ನನ್ನ ಮೇಲೆ ದ್ವೇಷ ಕಾರುತ್ತಿದ್ದಾರೆ. ನಾನು ಬಿಜೆಪಿಗೆ ಬಂದಿದ್ದಕ್ಕೆ ನನಗೆ ಈ ರೀತಿಯ ಪರಿಸ್ಥಿತಿಯನ್ನು ತಂದಿದ್ದಾರೆ. ಅನೇಕ ಜಿಲ್ಲೆಗಳಲ್ಲಿ ಇದೇ ರೀತಿ ನಡೆದಿದೆ. ಅನೇಕರು ಆ ಬಗ್ಗೆ ಮಾತಾಡುತ್ತಿಲ್ಲ. ವಿಜಯೇಂದ್ರ ಪಕ್ಷವನ್ನು ಅವನತಿಗೆ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ. ಇವರ ಅಹಂಕಾರಕ್ಕೆ, ಧೋರಣೆಗೆ ನನ್ನ ಧಿಕ್ಕಾರ. ಇವರ ಧೋರಣೆಯನ್ನು ಸರಿಪಡಿಸಿ, ಇಲ್ಲವಾದರೆ ಇವರನ್ನೇ ಬದಲಾಯಿಸಿ ಎಂದು ವರಿಷ್ಠರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು. ಅನೇಕ ಸಂಸದರು ಅವರ ಭಾವನೆಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಇದಕ್ಕೆ ಇತಿಶ್ರೀ ಹಾಡಬೇಕೆಂಬ ಕಾರಣಕ್ಕೆ ಎಲ್ಲರೂ ಪತ್ರ ಬರೆದು ವರಿಷ್ಠರಿಗೆ ಕಳುಹಿಸುತ್ತೇವೆ ಎಂದಿದ್ದಾರೆ.

ಪಕ್ಷಕ್ಕಾಗಿ ನಾನು ಎಲ್ಲಾ ಟೀಕೆಗಳನ್ನು ಸಹಿಸಿಕೊಳ್ಳುತ್ತೇನೆ

ಸುಧಾಕರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ ಪಕ್ಷಕ್ಕಾಗಿ ನಾನು ಎಲ್ಲಾ ಟೀಕೆಗಳನ್ನು ಸಹಿಸಿಕೊಳ್ಳುತ್ತೇನೆ. ಯಾರು ಏನೇ ಮಾತನಾಡಲಿ ಎಲ್ಲವನ್ನೂ ಸೌಮ್ಯವಾಗಿ ಸ್ವೀಕರಿಸಿದ್ದೇನೆ. ಎಲ್ಲರಿಂದಲೂ ಅನುಭವಗಳನ್ನು ಕಲಿಯುತ್ತಿದ್ದೇನೆ. ನನಗೆ ಪಕ್ಷ ಮಾತ್ರ ಮುಖ್ಯ. ನಾನು ಯಡಿಯೂರಪ್ಪನವರಿಂದ ಜೀವನದ ಅನುಭವಗಳನ್ನು ಕಲಿತಿದ್ದೇನೆ. ನಾನು ಯಾರ ಜೊತೆಯೂ ಯುದ್ಧ ಮಾಡಲು ಅಧ್ಯಕ್ಷನಾಗಿಲ್ಲ. ಪಕ್ಷ ಕಟ್ಟಲು ಅಧ್ಯಕ್ಷನಾಗಿದ್ದೇನೆ ಅಷ್ಟೇ.ಸುಧಾಕ‌ರ್ ಬಾಯಲ್ಲಿ ಯುದ್ಧದ ಮಾತು ಯಾಕೆ ಬಂತೆಂದು ಗೊತ್ತಿಲ್ಲ. ನಾನು ಅವರ ಜೊತೆ ಮಾತನಾಡಲು ಮುಕ್ತನಾಗಿದ್ದೇನೆ ಎಂದಿದ್ದಾರೆ.  ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ನೇಮಕ ವಿಚಾರವಾಗಿ ಮಾತನಾಡಿದ ಅವರು, ನೇಮಕದಲ್ಲಿ ನನ್ನ ಯಾವ ಪಾತ್ರವೂ ಇಲ್ಲ ಎಂದು ಹೇಳಿದ್ದಾರೆ. ನಾನು ಟಾರ್ಗೆಟ್ ಆಗಿದ್ದೇನೆ, ಯಡಿಯೂರಪ್ಪ ಮಗ ಅನ್ನುವ ಕಾರಣಕ್ಕೆ ಟಾರ್ಗೆಟ್ ಆಗಿದ್ದೇನೆ ಎಂಬುವುದೆನ್ನಲ್ಲ ನಾನು ಹೇಳುವುದಿಲ್ಲ. ನನಗೆ ಯಡಿಯೂರಪ್ಪನವರ ಮಗ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ಈಗಾಗಿ ಎಲ್ಲಾ ಟೀಕೆಗಳಿಂದ ಪಾಠ ಕಲಿತಿದ್ದೇನೆ ಎಂದಿದ್ದಾರೆ.

 ವಿಜಯೇಂದ್ರ ಚಡ್ಡಿ ಹಾಕೋ ಮುಂಚೆ ನಾನು ಜಿಲ್ಲಾಧ್ಯಕ್ಷನಾಗಿದ್ದೆ

ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಪಕ್ಷದ ಒಳಗಿನ ಅಸಮಾಧಾನ ಹೊರಬಂದಿದೆ. ಯಡಿಯೂರಪ್ಪ ಒಬ್ಬರೇ ಪಕ್ಷ ಕಟ್ಟಿಲ್ಲ, ನಮ್ಮೆಲ್ಲರ ದುಡಿಮೆ ಇದೆ ಎಂದಿದ್ದಾರೆ. ಹಾಗೇ  ವಿಜಯೇಂದ್ರ ಚಡ್ಡಿ ಹಾಕೋ ಮುಂಚೆ ನಾನು ಜಿಲ್ಲಾಧ್ಯಕ್ಷನಾಗಿದ್ದೆ. ವಿಜಯೇಂದ್ರ ಮತ್ತು ಅವರ ಕುಟುಂಬ ರಾಜಕಾರಣದ ಮೇಲೆ ಹೇರಿಕೊಳ್ಳಲು ನೋಡುತ್ತಿದೆ. ನಾವು ಈ ಬಚ್ಚಾ ಯಿಂದ ಕಲಿಯಬೇಕೆ?” ಎಂದು ಪ್ರಶ್ನಿಸಿದರು. ಯತ್ನಾಳ್ ವಿಜಯೇಂದ್ರ ಅವರ ವಿರುದ್ಧ ಆಪಾದನೆ ಮುಂದುವರಿಸುತ್ತಾ, “ಪಕ್ಷದಲ್ಲಿ ಈಗ ದುಡ್ಡು ಮಾತಾಡುತ್ತಿದೆ. ರಾಜ್ಯ ಸರ್ಕಾರವೂ ವಿಜಯೇಂದ್ರ ಅವರ ಬೆಂಬಲದಲ್ಲಿ ನಿಂತಿರುವುದು ದುರ್ದೈವ” ಎಂದು ಟೀಕಿಸಿದ್ದಾರೆ.  ಈ ಬೆಳವಣಿಗೆ ಕರ್ನಾಟಕ ಬಿಜೆಪಿ ಆಂತರಿಕ ಸಂಘರ್ಷವನ್ನು ಮತ್ತಷ್ಟು ಎತ್ತಿಹಿಡಿದಿದ್ದು, ಮುಂದಿನ ದಿನಗಳಲ್ಲಿ ಮಹತ್ವದ ರಾಜಕೀಯ ಬದಲಾವಣೆ ಸಾಧ್ಯವೆಂಬ ನಿರೀಕ್ಷೆ ಮೂಡಿಸಿದೆ.

Kishor KV

Leave a Reply

Your email address will not be published. Required fields are marked *