‘ಶತಮಾನದ ಸಂತ’ ಅಸ್ತಂಗತ – ಭಕ್ತರಿಂದ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನ

‘ಶತಮಾನದ ಸಂತ’ ಅಸ್ತಂಗತ – ಭಕ್ತರಿಂದ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನ

ವಿಜಯಪುರ: ನಡೆದಾಡುವ ದೇವರು, ಶತಮಾನದ ಸಂತ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಅಪಾರ ಭಕ್ತರನ್ನು ಅಗಲಿದ್ದಾರೆ. ಸೋಮವಾರ ಸಂಜೆ 6 ಗಂಟೆಗೆ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯ್ ಮಹಾಂತೇಶ್ ದಾನಮ್ಮನವರ್ ಅವರು ಸೋಮವಾರ ರಾತ್ರಿ 10.15ರ ವೇಳೆಗೆ ಭಕ್ತರೆದುರು ಶ್ರೀಗಳ ಅಗಲಿಕೆ ಸುದ್ದಿಯನ್ನು ಹೇಳಿದರು. ಶ್ರೀಗಳಿಗೆ 82 ವರ್ಷ ವಯಸ್ಸಾಗಿತ್ತು.

ಮಂಗಳವಾರ ಬೆಳಿಗ್ಗೆ 5 ಗಂಟೆಗೆ ಸಿದ್ದೇಶ್ವರ ಶ್ರೀಗಳ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಜ್ಞಾನ ಯೋಗಾಶ್ರಮದಿಂದ ಸೈನಿಕ ಶಾಲೆ ಆವರಣಕ್ಕೆ ಸ್ಥಳಾಂತರಿಸಲಾಗಿದೆ. ಕನಿಷ್ಠ 10 ಲಕ್ಷ ಮಂದಿ ಶ್ರೀಗಳ ಅಂತಿಮ ದರ್ಶನಕ್ಕೆ ಬರುವ ನಿರೀಕ್ಷೆಯಿದ್ದು, ಮಂಗಳವಾರ ಮಧ್ಯಾಹ್ನ 3 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಜೆ 5 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.

ನಾಡಿನ ಮೂಲೆಮೂಲೆಯಿಂದ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಜ್ಞಾನಯೋಗಾಶ್ರಮದತ್ತ ಬರುತ್ತಿದ್ದಾರೆ. ಭಕ್ತರ ವಾಹನ ಸಂಚಾರ ನಿಯಂತ್ರಣ, ಭಕ್ತರ ಅನುಕೂಲಕ್ಕಾಗಿ ಮುನ್ನೆಚ್ಚರಿಕೆಯಾಗಿ ಕ್ರಮವಾಗಿ ಪೊಲೀಸರ ನಿಯೋಜನೆ ಮಾಡಲಾಗಿದೆ.

ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಮಂಗಳವಾರ ವಿಜಯಪುರ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಗಣ್ಯರಿಂದ ಸಂತಾಪ

ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ, ಕೇಂದ್ರ ಸಚಿವ ಜಿ.ಪರಮೇಶ್ವರ್, ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಸಚಿವ ವಿ.ಸೋಮಣ್ಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

‘ವಿಜಯಪುರದ ಜ್ಞಾನ ಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಲಿಂಗೈಕ್ಯರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ತಮ್ಮ ಪ್ರವಚನಗಳ ಮೂಲಕ ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಶ್ರೀಗಳ ಸೇವೆ ಅಮೋಘ ಹಾಗೂ ಅನನ್ಯವಾದುದು. ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದೆ. ಶ್ರೀಗಳ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ನಾಡಿನಾದ್ಯಂತ ಇರುವ ಶ್ರೀಗಳ ಭಕ್ತ ಸಮೂಹಕ್ಕೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

“ಪರಮಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರು ಸಮಾಜಕ್ಕೆ ನೀಡಿರುವ ಗಣನೀಯ ಸೇವೆಗಾಗಿ ಅವರನ್ನು ಸ್ಮರಿಸಲಾಗುತ್ತದೆ. ಅವರು ಇತರರ ಒಳಿತಿಗಾಗಿ ಅವಿಶ್ರಾಂತವಾಗಿ ಶ್ರಮಿಸಿದ್ದರು ಮತ್ತು ಅವರ ಜ್ಞಾನೋತ್ಸಾಹಕ್ಕಾಗಿ ಅವರು ಗೌರವಗಳಿಸಿದ್ದರು. ಈ ದುಃಖದ ಸಮಯದಲ್ಲಿ ಅವರ ಅಸಂಖ್ಯಾತ ಭಕ್ತರೊಂದಿಗೆ ನನ್ನ ಸಂವೇದನೆ ಇದೆ. ಓಂ. ಶಾಂತಿ” ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕನ್ನಡದಲ್ಲೇ ಟ್ವೀಟ್‌ ಮಾಡಿದ್ದಾರೆ.

suddiyaana