ಮುಂದಿನ ಐದು ವರ್ಷವೂ ನಾನೇ ಸಿಎಂ! – ಮುಖ್ಯಮಂತ್ರಿ ಬದಲಾವಣೆ ಚರ್ಚೆಗೆ ಸಿದ್ದರಾಮಯ್ಯ ತೆರೆ!
ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾಗುತ್ತಾರೆ. ಈಗ ಡಿಸಿಎಂ ಆಗಿರುವ ಡಿ.ಕೆ. ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂಬ ಚರ್ಚೆ ಹುಟ್ಟಿಕೊಂಡಿತ್ತು. ಆದರೆ, ಈಗ ಆ ಎಲ್ಲ ಗೊಂದಲಕ್ಕೆ ಸ್ವತಃ ಸಿಎಂ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ. ಮುಂದಿನ ಐದು ವರ್ಷವೂ ನಾನೇ ಸಿಎಂ ಎಂದು ಹೇಳಿದ್ದಾರೆ.
ಕೆಲವು ದಿನಗಳಿಂದ ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಬಸನಗೌಡ ಪಾಟೀಲ್ ಅವರು ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಮತ್ತೊಂದು ಬಣ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು. ಇಬ್ಬರೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರತ್ತ ಬೆರಳು ತೋರಿದ್ದರು. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಸದ್ಯ ನಾನು ಮುಖ್ಯಮಂತ್ರಿಯಾಗಿದ್ದೇನೆ. ನಾನೇ ಹುದ್ದೆಯಲ್ಲಿ ಮುಂದುವರಿಯಲಿದ್ದೇನೆ ಎಂದು ಸಿಎಂ ಬದಲಾವಣೆ ಚರ್ಚೆಗೆ ಪೂರ್ಣ ವಿರಾಮ ಹಾಕಿದ್ದಾರೆ.
ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ ಅವರು, ಎರಡೂವರೆ ವರ್ಷದ ಬಳಿಕ ಅಧಿಕಾರ ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದರು. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ರಾಜ್ಯದಲ್ಲಿ 5 ವರ್ಷ ನಮ್ಮ ಸರ್ಕಾರ ಸುಭದ್ರವಾಗಿರುತ್ತದೆ. ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಐಫೋನ್ ಹ್ಯಾಕ್ ಯತ್ನ ಪ್ರಕರಣ – ಸಾಕ್ಷಿ ಒದಗಿಸುವಂತೆ ಆ್ಯಪಲ್ಗೆ ಕೇಂದ್ರ ಸರ್ಕಾರದಿಂದ ನೋಟಿಸ್
ರಾಜ್ಯದ ಜನರು ನಮಗೆ ಆಶೀರ್ವಾದ ಮಾಡಿ 136 ಸ್ಥಾನ ಗೆಲ್ಲಿಸಿದ್ದಾರೆ. ಐದು ವರ್ಷ ನಾವೇ ಆಡಳಿತ ಮಾಡುತ್ತೇವೆ. ಬಿಜೆಪಿಯವರಿಗೆ ಅಧಿಕಾರ ಇಲ್ಲದೆ ಇರಲು ಆಗುವುದಿಲ್ಲ. ಹೀಗಾಗಿ ಟೀಕೆ ಮಾಡುತ್ತಿರುತ್ತಾರೆ ಎಂದು ಹೇಳುವ ಮೂಲಕ ಬಿಜೆಪಿಯ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.
ಈ ಮಧ್ಯೆ ಬೆಂಗಳೂರಿನಲ್ಲಿ ಮಾತನಾಡಿದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಪಕ್ಷದ ಚೌಕಟ್ಟು ಮೀರಿ ಸಚಿವರು, ಶಾಸಕರು ಮಾತನಾಡುವಂತಿಲ್ಲ ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ. ಪಕ್ಷದ ಚೌಕಟ್ಟು ಮೀರಿ ಮಾತನಾಡಿದರೆ ಶಿಸ್ತು ಕ್ರಮ ಜರುಗಿಸುತ್ತೇವೆ ಎಂದೂ ಅವರು ಹೇಳಿದ್ದಾರೆ.
ಸಭೆಯಲ್ಲಿ ನಿಗಮ ಮಂಡಳಿ ನೇಮಕಾತಿ ಬಗ್ಗೆಯೂ ಚರ್ಚೆಯಾಗಿದೆ. ನಿಗಮ ಮಂಡಳಿ ನೇಮಕಾತಿ ಬಗ್ಗೆ ಮತ್ತಷ್ಟು ಚರ್ಚೆಯಾಗಬೇಕಿದೆ. ಮಧ್ಯಪ್ರದೇಶ ಚುನಾವಣೆ ಮುಗಿದ ಬಳಿಕ ಮತ್ತೆ ವಾಪಸ್ ಬರುತ್ತೇನೆ. 2-3 ಹಂತದ ಮಾತುಕತೆ ಆಗುವುದು ಬಾಕಿ ಇದೆ. ಅಧಿಕಾರ ಹಂಚಿಕೆ ಬಗ್ಗೆ ಸಚಿವರು, ಶಾಸಕರು ಮಾತಾಡುವುದು ಸರಿಯಲ್ಲ. ಸಿಎಂ, ಡಿಸಿಎಂ, ನಮ್ಮನ್ನು ಭೇಟಿ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ. ಪಕ್ಷದ ಚೌಕಟ್ಟಿನಲ್ಲಿ ಸಚಿವರು, ಶಾಸಕರು ಅಭಿಪ್ರಾಯ ತಿಳಿಸಬೇಕು. ಶಾಸಕರು ಸಚಿವ ಸ್ಥಾನ ಬಯಸುವುದರಲ್ಲಿ ತಪ್ಪಿಲ್ಲ ಎಂದು ಸುರ್ಜೇವಾಲ ಹೇಳಿದ್ದಾರೆ.